ADVERTISEMENT

ಚಿಕ್ಕಮಗಳೂರು: ರೈತರ ಪರ ಬಿಜೆಪಿ ಪ್ರತಿಭಟನೆ

ಎತ್ತಿನಗಾಡಿಯಲ್ಲಿ ಮೆರವಣಿಗೆ: ರಾಜ್ಯ ಸರ್ಕಾರದ ವಿರುದ್ಧ ಆಕ್ರೊಶ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 6:53 IST
Last Updated 6 ಡಿಸೆಂಬರ್ 2025, 6:53 IST
ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಸಿ.ಟಿ.ರವಿ ನೇತೃತ್ವದಲ್ಲಿ ಎತ್ತಿನಗಾಡಿ ಮೆರವಣಿಗೆ ನಡೆಸಿದರು
ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಸಿ.ಟಿ.ರವಿ ನೇತೃತ್ವದಲ್ಲಿ ಎತ್ತಿನಗಾಡಿ ಮೆರವಣಿಗೆ ನಡೆಸಿದರು   

ಚಿಕ್ಕಮಗಳೂರು: ರಾಜ್ಯ ಸರ್ಕಾರ ರೈತ ವಿರೋಧ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ತಹಶೀಲ್ದಾರ್ ಕಚೇರಿಯಿಂದ ಆಜಾದ್‌ ಪಾರ್ಕ್ ವೃತ್ತದ ತನಕ ಎತ್ತಿನಗಾಡಿಯಲ್ಲಿ ಮೆರವಣಿಗೆ ನಡೆಸಿದ ಬಿಜೆಪಿ ಮುಖಂಡರು, ರಾಜ್ಯ ಸರ್ಕಾರದ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ‘ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರು ಬಳಲುತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಡೂಟದಲ್ಲಿ ನಿರತವಾಗಿದ್ದಾರೆ. ರೈತರ ಸಂಕಷ್ಟಕ್ಕೆ ಸ್ಪಂದಿಸದೆ ಮುಖ್ಯಮಂತ್ರಿ ಕುರ್ಚಿಗಾಗಿ ಕಿತ್ತಾಟ ನಡೆಸುತ್ತಿದ್ದಾರೆ’ ಎಂದರು.

ADVERTISEMENT

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕುರಿ- ಕೋಳಿ ಕಂಡರೆ ಬಾಯಲ್ಲಿ ನೀರು ಬರುತ್ತದೆ. ನಿಮ್ಮ ಊರಿಗೆ ಸಿದ್ದರಾಮಯ್ಯ ಬಂದರೆ ಕುರಿ– ಕೋಳಿಗಳನ್ನು ಬಚ್ಚಿಡಿ’ ಎಂದು ಲೇವಡಿ ಮಾಡಿದರು.

ರೈತರ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸದ ಕಾಂಗ್ರೆಸ್ ಸರ್ಕಾರದ ಅಗತ್ಯ ರಾಜ್ಯಕ್ಕೆ ಇಲ್ಲ. ರಕ್ತವನ್ನ ಬೆವರಾಗಿ ಸುರಿಸುತ್ತಿರುವ ಎಲ್ಲಾ ರೈತರ ಪರವಾಗಿ ಹೋರಾಟ ನಡೆಸಬೇಕಿದೆ ಎಂದು ಹೇಳಿದರು.

ರೈತರ ಆತ್ಮಹತ್ಯೆಯಲ್ಲಿ ಇಡೀ ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಇದು ಅತ್ಯಂತ ಆತಂಕಕಾರಿ ವಿಷಯ. ಪ್ರಾಮಾಣಿಕ ಸರ್ಕಾರಿ ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಮಲೆನಾಡು ಭಾಗಕ್ಕೆ ಕಾಡು ಪ್ರಾಣಿಗಳ ಹಾವಳಿ, ಅರಣ್ಯ ಇಲಾಖೆ ಕಾಟ ಹೆಚ್ಚಾಗಿ ಜನ ಸಾಮಾನ್ಯರು ಬದುಕಲಾರದ ಸ್ಥಿತಿಗೆ ಬಂದಿದೆ ಎಂದು ತಿಳಿಸಿದರು.

ಬಿಜೆಪಿ ಮುಖಂಡ ಹರತಾಳಪ್ಪ ಹಾಲಪ್ಪ ಮಾತನಾಡಿ, ‘ಕಬ್ಬು ಕಟಾವಿನ ವೇಳೆ ನೆರೆ ರಾಜ್ಯದಲ್ಲಿ ಟನ್‌ ಕಬ್ಬಿಗೆ ₹3,500 ದರವಿದ್ದರೆ, ರಾಜ್ಯದಲ್ಲಿ ಕೇವಲ ₹3 ಸಾವಿರವೂ ಇಲ್ಲ. ರೈತರ ಬೆಂಬಲಕ್ಕೆ ಬಿಜೆಪಿ ನಿಂತರೆ, ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ಕರೆದು ರಾಜ್ಯ ಸರ್ಕಾರ ದರ ನಿಗದಿ ಮಾಡಿದೆ. ಇಂದಿಗೂ ಹೊಸ ದರದಲ್ಲಿ ಖರೀದಿಯಾಗುತ್ತಿಲ್ಲ’ ಎಂದರು.

ಈ ಬಗ್ಗೆ ಬಿಜೆಪಿ ರಾಜ್ಯ ನಾಯಕರು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ ಮೇರೆಗೆ ರಾಜ್ಯ ಸರ್ಕಾರ ರೈತರು, ಕಾರ್ಖಾನೆ ಮಾಲೀಕರ ಸಭೆ ಕರೆದು ದರ ನಿಗದಿಗೊಳಿಸಿದ್ದು ಇಂದಿಗೂ ಹೊಸ ದರದಲ್ಲಿ ಖರೀದಿಸುತ್ತಿಲ್ಲ ಎಂದು ಹೇಳಿದರು.

ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಎಚ್.ಸಿ. ಕಲ್ಮರುಡಪ್ಪ ಮಾತನಾಡಿ, ‘ಕಬ್ಬು ಬೆಳೆಗೆ ಸೂಕ್ತ ದರ ಹಾಗೂ ಮೆಕ್ಕೆಜೋಳ ಖರೀದಿ ಕೇಂದ್ರ ಇಲ್ಲದೆ ಸಾವಿರಾರು ರೈತರು ಕಂಗಾಲಾಗಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಯಡ್ಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರೈತರಿಗೆ ಸಕಲ ಸೌಕರ್ಯ ಲಭ್ಯವಿತ್ತು. ಆದರೆ, ಕಾಂಗ್ರೆಸ್ ಅವಧಿಯಲ್ಲಿ ರೈತ ಆತ್ಮಹತ್ಯೆ ದಾರಿ ಹಿಡಿಯುವಂತಾಗಿದೆ’ ಎಂದು ದೂರಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆರ್. ದೇವರಾಜ್‌ಶೆಟ್ಟಿ, ನಗರ ಘಟಕದ ಅಧ್ಯಕ್ಷ ಪುಷ್ಪರಾಜ್, ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಆನಂದಪ್ಪ, ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ, ಪುಣ್ಯಪಾಲ್, ನರೇಂದ್ರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೀಣಾಶೆಟ್ಟಿ, ಕವೀಶ್, ಸೋಮಶೇಖರ್, ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಜಸಂತಾ ಅನಿಲ್‌ಕುಮಾರ್, ಮುಖಂಡರಾದ ಕೋಟೆ ರಂಗನಾಥ್, ದಿನೇಶ್, ಪುಟ್ಟಸ್ವಾಮಿ, ಕೌಶಿಕ್, ದಿನೇಶ್ ಪಾದಮನೆ, ಕೆ.ಪಿ.ವೆಂಕಟೇಶ್, ಸೀತರಾಮಭರಣ್ಯ, ನಂದೀಶ್ ಮದಕರಿ, ಕಬೀರ್, ಆಲ್ದೂರು ರವಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಶಾಸಕರ ಖರೀದಿ ಕೇಂದ್ರ: ಸಿ.ಟಿ.ರವಿ ವ್ಯಂಗ್ಯ ರಾಜ್ಯ ಸರ್ಕಾರವು ಕಬ್ಬು ಮೆಕ್ಕೆಜೋಳಕ್ಕೆ ಖರೀದಿ ಕೇಂದ್ರ ತೆರೆಯುವ ಬದಲು ಶಾಸಕರ ಖರೀದಿ ಕೇಂದ್ರ ತೆರೆದಿದೆ ಎಂದು ಸಿ.ಟಿ.ರವಿ ಲೇವಡಿ ಮಾಡಿದರು. ‘ಕೇಂದ್ರ ಸರ್ಕಾರ ಟನ್ ಕಬ್ಬಿಗೆ ₹3550 ನಿಗದಿ ಮಾಡಿದೆ.

ನೆರೆಯ ಮಹಾರಾಷ್ಟ್ರದ ಮುಖ್ಯಮಂತ್ರಿಗಳು ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ಜತೆ ಸಮಾಲೋಚನೆ ನಡೆಸಿ ಟನ್‌ ಕಬ್ಬಿಗೆ ₹3400 ನೀಡುತ್ತಿದೆ. ಆದರೆ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರಿಗೆ ಕೇವಲ ₹2700 ರಿಂದ ₹2900 ಸಿಗುತ್ತಿದೆ. ಇದು ಅನ್ಯಾಯವಲ್ಲವೇ’ ಎಂದು ಪ್ರಶ್ನಿಸಿದರು. ‘ಕ್ವಿಂಟಾಲ್ ಮೆಕ್ಕಜೋಳಕ್ಕೆ ಕೇಂದ್ರ ಸರ್ಕಾರ ₹2400 ನಿಗದಿ ಮಾಡಿದೆ. ಆದರೆ ರಾಜ್ಯ ಸರ್ಕಾರ ₹1700-₹1800ಕ್ಕೆ ಖರೀದಿ ಮಾಡುತ್ತಿದೆ. ಖರೀದಿ ಕೇಂದ್ರ ತೆರೆದು ಬಾಕಿ ಹಣವನ್ನು ಸರ್ಕಾರ ಸರಿದೂಗಿಸಬೇಕು ಎಂದು ರೈತರು ಒಂದೂವರೆ ತಿಂಗಳಿನಿಂದ ಹೋರಾಟ ಮಾಡಿದರೂ ಸರ್ಕಾರ ಖರೀದಿ ಕೇಂದ್ರ ತೆರೆದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ಈಗ ದಲ್ಲಾಳಿಗಳಿಗಾಗಿ ಸರ್ಕಾರ ಖರೀದಿ ಕೇಂದ್ರ ತೆರೆದಿದೆ. ಕಬ್ಬು ಮೆಕ್ಕೆಜೋಳ ಭತ್ತದ ಖರೀದಿ ಕೇಂದ್ರ ತೆರೆಯಲು ಕೇಳಿದರೆ ಶಾಸಕರ ಖರೀದಿ ಕೇಂದ್ರವನ್ನು ರಾಜ್ಯ ಸರ್ಕಾರ ತೆರೆದಿದೆ. ಗ್ರೇಡ್ ಆಧಾರದಲ್ಲಿ ಶಾಸಕರನ್ನು ಖರೀದಿಸಲು ಮುಂದಾಗಿದೆ’ ಎಂದರು. ‘ಸರ್ಕಾರಕ್ಕೆ ನಿಜಕ್ಕೂ ರೈತ ಪರ ಕಾಳಜಿ ಇದ್ದರೆ ವಿಧಾನಸೌಧದಲ್ಲಿ ರೈತರ ಪರ ಧ್ವನಿ ಎತ್ತಲಿ. ಇಲ್ಲವಾದರೆ ನಾನೂ ರೈತನ ಮಗ ರೈತಪರ ಎಂದು ನಾಟಕ ಅಡುವುದನ್ನು ನಿಲ್ಲಿಸಲಿ. ರೈತರ ಪರ ನಮ್ಮ ಹೋರಾಟ ನ್ಯಾಯ ದೊರೆಯುವ ತನಕ ಮುಂದುವರಿಯಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.