
ಶೃಂಗೇರಿ: ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಸೋಮವಾರ ವೈದ್ಯರು, ಸಿಬ್ಬಂದಿಗಳ ನೇಮಕಕ್ಕೆ ಒತ್ತಾಯಿಸಿ ಹಾಗೂ ಆಸ್ಪತ್ರೆಯ ಅವ್ಯವಸ್ಥೆ ಖಂಡಿಸಿ ತಾಲ್ಲೂಕು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಡಿ.ಎನ್ ಜೀವರಾಜ್, ‘ಶೃಂಗೇರಿ ಆಸ್ಪತ್ರೆಗೆ ವೈದ್ಯರ ಅಗತ್ಯವಿದೆ. ಬಡವರಿಗೆ ಹಾಗೂ ಪ್ರತಿಭಟನೆ ಮಾಡುವಾಗ ನಮ್ಮ ಕಾರ್ಯಕರ್ತರಿಗೆ ಲಾಠಿಚಾರ್ಜ್ ಆದರೆ ದಾಖಲಾಗಲು ಆಸ್ಪತ್ರೆ ಅವಶ್ಯಕತೆ ಇದೆ. ಹಿಂದಿನ ಸರ್ಕಾರವಿದ್ದಾಗ ಆರೋಗ್ಯ ರಕ್ಷಾ ಸಮಿತಿಯಲ್ಲಿ ₹10 ಲಕ್ಷ ಹಣವಿರುತ್ತಿತ್ತು. ಡಿಸಿಸಿ ಬ್ಯಾಂಕ್‍ನವರು ₹5 ಲಕ್ಷವನ್ನು ರಕ್ಷಾಸಮಿತಿಗೆ ನೀಡಿದ್ದಾರೆ. ಆ ಹಣಗಳು ಎಲ್ಲಿ ಹೋಯಿತು? ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನೂರು ಹಾಸಿಗೆ ಆಸ್ಪತ್ರೆಗೆ ₹ 69 ಲಕ್ಷ ನೀಡಿದ್ದರು. ಅದು ಎಲ್ಲಿ ಹೋಯಿತು? ಸಂಬಂಧ ಪಟ್ಟವರು ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
‘ರೋಗಿಗಳಿಗೆ ಉಚಿತ ಸೇವೆ ನೀಡುವ 108 ಆಂಬುಲೆನ್ಸ್‌ಗಳಲ್ಲಿ ರೋಗಿ ಕಡೆಯಿಂದ ಹಣ ಕೇಳುತ್ತಾರೆ. ಡಯಾಲಿಸಿಸ್ ರೋಗಿಗಳು ಔಷಧಿಯನ್ನು ಹೊರಗಡೆಯಿಂದ ತರಬೇಕು. ಕೊಪ್ಪದಲ್ಲಿ ತಾಯಿ ಹಾಗೂ ಮಕ್ಕಳ ಆಸ್ಪತ್ರೆಗೆ ಅನುದಾನ ನೀಡಿದ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ಕರೆಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ತ್ಯಾವಣದಲ್ಲಿ ನೂರು ಹಾಸಿಗೆ ಆಸ್ಪತ್ರೆ ರಸ್ತೆ ಅಂಚಿನಲ್ಲಿ ಕಟ್ಟಲಾಗುತ್ತಿದೆ. ಅರಣ್ಯ ಸಚಿವರು ಬಾಳೆಹೊನ್ನೂರಿನಲ್ಲಿ ನಡೆಸಿದ ಸಭೆ ಕೇವಲ ಕಾಂಗ್ರೆಸ್ ಕಾರ್ಯಕರ್ತರ ಸಭೆಯಾಗಿತ್ತು' ಎಂದು ಆರೋಪಿಸಿದರು.
ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜ್ ಶೆಟ್ಟಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಕೆ.ಜಾರ್ಜ್ ಜಿಲ್ಲೆಯಲ್ಲಿ ಕೇವಲ ಸರ್ಕಾರಿ ಕಾರ್ಯಕ್ರಮ ಮತ್ತು ಅವರ ತೋಟಕ್ಕೆ ಸೀಮಿತವಾಗಿದ್ದಾರೆ. ಕ್ಷೇತ್ರ ಶಾಸಕರು ಜನವಿರೋಧಿ ಕೆಲಸ ಮಾಡುವ ಬದಲು ಜನಪರ ಕೆಲಸ ಮಾಡಲಿ' ಎಂದರು.
ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ತಲಗಾರು ಉಮೇಶ್ ಮಾತನಾಡಿ, ‘ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ರೋಗಿ ಬಂದಾಗ ಕೊಡಲು ಮಾತ್ರೆ ಇಲ್ಲ. ಎರಡನೇ ಬಾರಿ ಪ್ರತಿಭಟನೆ ಮಾಡುತ್ತಿದ್ದು, ಇದೇ ಸ್ಥಿತಿಯಲ್ಲಿ ಸರ್ಕಾರಿ ಆಸ್ಪತ್ರೆ ಮುಂದುವರಿದ್ದರೆ ಹೈವೇ ರಸ್ತೆಯಲ್ಲಿ ಕುಳಿತು ಮುಂಬರುವ ದಿನಗಳಲ್ಲಿ ಪ್ರತಿಭಟನೆ ಮಾಡಲಾಗುವುದು' ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ನೂತನ್ ಕುಮಾರ್, ಎಚ್.ಎಸ್ ವೇಣುಗೋಪಾಲ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶಿಲ್ಪಾರವಿ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾಗ್ಯನಾಗೇಂದ್ರ, ಬಿಜೆಪಿ ವಕ್ತಾರ ದಿನೇಶ್ ಅಂಗುರ್ಡಿ,ಬಿಜೆಪಿ ಮುಖಂಡ ಕೆ.ಎಸ್ ರಮೇಶ್, ಸತೀಶ್ ನಡುತೋಟ, ಡಿ.ಸಿ.ಶಂಕರಪ್ಪ, ಚೇತನ್ ಹೆಗ್ಡೆ, ಬಿ.ವಿ ಪ್ರವೀಣ್, ಜಯಶೀಲಾ ಚಂದ್ರಶೇಖರ್, ಸುನೀಲ್ ಸಂಪೇಕೊಳಲು, ಅಜಿತ್ ಶೆಟ್ಟಿ, ಶ್ರೀವಿದ್ಯಾ, ಸುಧೀಂದ್ರ ಬೆಟ್ಟಗದ್ದೆ, ಶ್ರೀಧರ್ ಅಣ್ಣುಕೊಡಿಗೆ ಹಾಜರಿದ್ದರು.
ಮನವಿಯನ್ನು ಆರೋಗ್ಯ ಸಚಿವರ ಗಮನಕ್ಕೆ ಕಳುಹಿಸಿ ಮೇ ತಿಂಗಳ ಒಳಗೆ ಆಸ್ಪತ್ರೆಯಲ್ಲಿ ಉಳಿದ ವೈದ್ಯರ ಕೊರತೆ ಸರಿಪಡಿಸುತ್ತೇವೆ.ಡಾ.ಅಶ್ವತ್ ಬಾಬು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.