ADVERTISEMENT

ರಕ್ತದಾನದಿಂದ ಜೀವ ಉಳಿಸಲು ಸಾಧ್ಯ: ಶಾಸಕ ರಾಜೇಗೌಡ

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 6:30 IST
Last Updated 9 ಜುಲೈ 2022, 6:30 IST
ಕೊಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಿದರು.
ಕೊಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಿದರು.   

ಕೊಪ್ಪ: ‘ರಕ್ತದಾನದಿಂದ ವ್ಯಕ್ತಿಯೊಬ್ಬರ ಜೀವ ಉಳಿಸಲು ಸಾಧ್ಯವಾಗುತ್ತದೆ’ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ರಕ್ತನಿಧಿ ಕೇಂದ್ರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರೆಡ್ ಕ್ರಾಸ್ ಘಟಕದ ವತಿಯಿಂದ ಇಲ್ಲಿನ ಎಂ.ಎಸ್.ದ್ಯಾವೇಗೌಡ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ರಕ್ತದಾನ ಸಂದರ್ಭ ರಕ್ತ ಪರೀಕ್ಷೆ ಮಾಡುವುದರಿಂದ ಯಾವುದಾದೂ ಕಾಯಿಲೆ ಇದ್ದರೆ ಗೊತ್ತಾಗುತ್ತದೆ, ಇದರಿಂದ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ. ವ್ಯಕ್ತಿಯೊಬ್ಬರ ಜೀವ ಉಳಿಸಲು ರಕ್ತ ಅಗತ್ಯವಾಗಿ ಬೇಕಾಗುತ್ತದೆ. ರಕ್ತದಾನ ಶ್ರೇಷ್ಠವಾದ ದಾನವಾಗಿದೆ. ಹೆರಿಗೆ ಸಮಯದಲ್ಲಿ, ಶಸ್ತ್ರಚಿಕಿತ್ಸೆ ಸಂದರ್ಭ ರಕ್ತದ ಅಗತ್ಯತೆ ಹೆಚ್ಚಿರುತ್ತದೆ’ ಎಂದು ಅವರು ತಿಳಿಸಿದರು.

ADVERTISEMENT

ಜಿಲ್ಲಾ ರಕ್ತನಿಧಿ ಕೇಂದ್ರದ ಡಾ.ಮುರಳೀಧರ ಮಾತನಾಡಿ,
‘ರಕ್ತದ ಉತ್ಪಾದನೆ ಸಾಧ್ಯವಾಗದ ಕಾರಣ, ದಾನಿಗಳನ್ನೇ ಅವಲಂಬಿಸಬೇಕಾಗಿದೆ. ಜಿಲ್ಲೆಯಲ್ಲಿ
ಪ್ರತಿ ತಿಂಗಳು 350 ರಿಂದ 400 ಯೂನಿಟ್ ರಕ್ತದ ಬೇಡಿಕೆ ಇದೆ. ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಬಹುದು. ಪುರುಷರು 3 ತಿಂಗಳಿಗೊಮ್ಮೆ, ಸ್ತ್ರೀಯರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಗಣ್ಯರ ಜನ್ಮ ದಿನವನ್ನು ರಕ್ತದಾನ ಶಿಬಿರದ ಮೂಲಕ ಅರ್ಥವತ್ತಾಗಿ ಆಚರಿಸಬಹುದು’ ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಸಿ.ರಾಜೇಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ರಕ್ತವನ್ನು ಪ್ರತ್ಯೇಕವಾಗಿ ಉತ್ಪತ್ತಿ ಮಾಡಲು ಸಾಧ್ಯವಿಲ್ಲ. ರಕ್ತ ನೀಡಿದ 24 ಗಂಟೆಗಳಲ್ಲಿ ಮರು ಸಂಗ್ರಹಗೊಳ್ಳುವುದರಿಂದ ರಕ್ತದಾನ ಮಾಡಲು ಹಿಂಜರಿಯಬಾರದು’ ಎಂದು ಹೇಳಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಹೇಂದ್ರ ಕಿರೀಟಿ, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಗಾನವಿ, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಜೆ.ಪಿ.ವಿನಯ್, ಖಜಾಂಚಿ ಸುರೇಶ್, ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ರಾಜೇಶ್, ಮಾರುತಿ ಪ್ರಸಾದ್, ಆರೋಗ್ಯ ಶಿಕ್ಷಣಾಧಿಕಾರಿ ಸುಧಾಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.