ಕೊಪ್ಪ: ತಾಲ್ಲೂಕಿನ ಹರಿಹರಪುರದ ಬಳಿ ಅದ್ದಡ ಗ್ರಾಮದ ಚಿತ್ರಕೂಟಕ್ಕೆ ಸಂಪರ್ಕ ಕಲ್ಪಿಸಲು ತುಂಗಾ ನದಿಗೆ ದಶಕಗಳ ಹಿಂದೆ ನಿರ್ಮಿಸಿರುವ ನಿರ್ಮಿಸಿರುವ ತೂಗು ಸೇತುವೆ ಈಗ ಅಪಾಯಕಾರಿ ಸ್ಥಿತಿಯಲ್ಲಿದೆ. ಸೇತುವೆಗೆ ಅಳವಡಿಸಿರುವ ಕಾಂಕ್ರಿಟ್ ಹಲಗೆ ಅಲ್ಲಲ್ಲಿ ಒಡೆದಿವೆ.
ಹರಿಹರಪುರದಿಂದ ಪ್ರಬೋಧಿನಿ ಗುರುಕುಲ, ಬೊಮ್ಮಲಾಪುರದ ಸೇರಿದಂತೆ ಹಲವು ಗ್ರಾಮಗಳಿಗೆ ಸಂಚರಿಸಲು ಜನರು ಸೇತುವೆಯನ್ನೇ ಅವಲಂಬಿಸಿದ್ದಾರೆ. ತೂಗು ಸೇತುವೆ ಬಳಸಿಕೊಂಡು ಜನರು ಬೈಕ್ ಮೂಲಕ ಪ್ರತಿನಿತ್ಯ ಈ ಮಾರ್ಗದಲ್ಲಿ ಓಡಾಡುತ್ತಾರೆ. ಬೊಮ್ಮಲಾಪುರದಿಂದ ನಾಲ್ಕೈದು ಕಿ.ಮೀ ಕ್ರಮಿಸಿದರೆ ಸೂರ್ಯದೇವಸ್ಥಾನದ ಬಳಿ ರಾಷ್ಟ್ರೀಯ ಹೆದ್ದಾರಿ 169ಕ್ಕೆ ಈ ಮಾರ್ಗ ಸಂಪರ್ಕ ಕಲ್ಪಿಸುತ್ತದೆ.
ಈ ಸೇತುವೆಯನ್ನು ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಬಳಸಿಕೊಂಡು 1998ರಲ್ಲಿ ನಿರ್ಮಿಸಲಾಗಿತ್ತು. ಐದಾರು ಕಿ.ಮೀ ಸುತ್ತಿಬಳಸಿ ಓಡಾಡುತ್ತಿದ್ದ ಅಪಾರ ಸಂಖ್ಯೆಯ ಜನರಿಗೆ ಇದು ಹತ್ತಿರದ ದಾರಿ. ಇದೀಗ ನಿರ್ವಹಣೆ ಇಲ್ಲದೆ ಸಂಪರ್ಕ ಕಡಿತದ ಆತಂಕ ಎದುರಾಗಿದೆ.
ಸೇತುವೆಯ ಕೈಪಿಡಿಗೆ ಹೊಂದಿಕೊಂಡಂತೆ ಅಳವಡಿಸಿದ್ದ ಮೆಷ್ ಅಲ್ಲಲ್ಲಿ ಕಿತ್ತು ಬಂದಿದೆ. ಕೆಲವರು ಸೇತುವೆಯಲ್ಲಿ ನಿಂತು ಮಕ್ಕಳೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಈಗ ಮೆಷ್ ಕಿತ್ತುಬಂದಿರುವುದರಿಂದ ತುಸು ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಸ್ಥಳೀಯ ಪಂಚಾಯಿತಿ, ಸೇತುವೆ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಪಂಚಾಯತ್ ರಾಜ್ ಎಂಜಿಯರಿಂಗ್ ಇಲಾಖೆಯ ಅಗತ್ಯ ದುರಸ್ತಿ ಕಾರ್ಯವನ್ನು ತುರ್ತಾಗಿ ಕೈಗೊಳ್ಳಬೇಕು ಎನ್ನುವುದು ಜನರ ಆಗ್ರಹ.
ಸೇತುವೆಯ ಹಲಗೆ ಒಡೆದಿದ್ದು ಓಡಾಡಲು ಸಮಸ್ಯೆಯಾಗುತ್ತಿದೆ. ದುರಸ್ತಿಗೆ ಆಗ್ರಹಿಸಿ ಸಾರ್ವಜನಿಕರು ಪಂಚಾಯಿತಿಗೆ ಮನವಿ ಕೊಟ್ಟಿದ್ದಾರೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಉಪ ವಿಭಾಗಕ್ಕೆ ಪತ್ರ ರವಾನಿಸಲಾಗಿದೆ'- ಗೀತಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರಿಹರಪುರ
ಇಲಾಖೆಯಲ್ಲಿ ಅನುದಾನ ಇದ್ದರೆ ದುರಸ್ತಿಪಡಿಸುವಂತೆ ಗ್ರಾಮ ಪಂಚಾಯಿತಿಯಿಂದ ಪತ್ರ ಬಂದಿದೆ. ಶಾಸಕರ ಗಮನಕ್ಕೆ ತಂದು ಅನುದಾನ ಬಂದ ಬಳಿಕ ದುರಸ್ತಿಪಡಿಸಲಾಗುವುದುಅಶೋಕ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಕೊಪ್ಪ ಉಪ ವಿಭಾಗ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.