ನರಸಿಂಹರಾಜಪುರ: ಹೊರ ರಾಜ್ಯದ ಮಾರುಕಟ್ಟೆಯಿಂದ ಹೆಚ್ಚಿನ ಬೇಡಿಕೆ ಬಂದ ಪರಿಣಾಮ, ಸ್ಥಳೀಯ ಮಾರುಕಟ್ಟೆಯಲ್ಲಿ ನೇಂದ್ರಬಾಳೆಕಾಯಿಗೆ ಬಂಪರ್ ಬೆಲೆ ಬಂದಿದೆ. ತಮಿಳುನಾಡು, ಕೇರಳದಲ್ಲಿ ನೇಂದ್ರಬಾಳೆ ಇಳುವರಿ ಕಡಿಮೆಯಾಗಿರುವುದರಿಂದ ರಾಜ್ಯದಲ್ಲಿ ಬೆಳೆಯುವ ನೇಂದ್ರ ಬಾಳೆಗೆ ಹೆಚ್ಚಿನ ಬೇಡಿಕೆ ಬಂದಿದೆ. ಹೀಗಾಗಿ ಇಲ್ಲಿನ ಬೆಳೆಗಾರರಿಗೆ ಉತ್ತಮ ಬೆಲೆ ಲಭಿಸುತ್ತಿದೆ.
ಕಳೆದ ವಾರ ಎನ್‌ಆರ್‌ಪುರ ಮಾರುಕಟ್ಟೆಯಲ್ಲಿ ನೇಂದ್ರ ಬಾಳೆಕಾಯಿ ಕೆ.ಜಿಗೆ ₹60ರ ಗಡಿ ದಾಟಿತ್ತು. ಈ ವಾರ ಬೆಲೆ ತುಸು ಕಡಿಮೆಯಾಗಿದ್ದು, ₹55ರ ಆಸುಪಾಸಿನಲ್ಲಿದೆ ಎಂದು ಬಾಳೆಕಾಯಿ ಮಾರಾಟಗಾರರು ಹೇಳಿದರು.
ತಾಲ್ಲೂಕಿನಿಂದ ನೇಂದ್ರ ಬಾಳೆಕಾಯಿ ಮುಂಬೈ ಮಾರುಕಟ್ಟೆಗೆ ಚಿಪ್ಸ್ ತಯಾರಿಕೆಗಾಗಿ ಪೂರೈಕೆಯಾಗುತ್ತದೆ. ಸ್ಥಳೀಯವಾಗಿಯೂ ಚಿಪ್ಸ್ ತಯಾರಿಸಿ ನೇರವಾಗಿ ಮಾರುಕಟ್ಟೆಗೆ ಪೂರೈಸುವವರಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ತಾಲ್ಲೂಕಿನಲ್ಲಿ ಬಾಳೆ ಬೆಳೆಯುವ ಪ್ರದೇಶ ಕಡಿಮೆಯಾಗಿದೆ. ಹಾಗಾಗಿ ಇಳುವರಿ, ಪೂರೈಕೆ ಕಡಿಮೆಯಾಗಿದ್ದು, ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನುತ್ತಾರೆ ವರ್ತಕರು. ಸದ್ಯ ಮಂಡಿಯಲ್ಲಿ ಸಗಟು ಬೆಲೆ ಪುಟ್ಟಬಾಳೆಗೆ ಕೆ.ಜಿಗೆ ₹30, ರಸಬಾಳೆ ಕೆ.ಜಿಗೆ ₹30ರಿಂದ 35, ಪಚ್ಚಬಾಳೆಗೆ ₹12ರಿಂದ 15ರ ಅಸುಪಾಸಿನಲ್ಲಿದೆ. ಚಿಲ್ಲರೆ ಮಾರಾಟದ ಬೆಲೆ ಸಗಟು ಬೆಲೆಗಿಂತಲೂ ಹೆಚ್ಚಿದೆ.
ಈ ಬಾರಿ ಸುವರ್ಣ ಗಡ್ಡೆಯ ಬೆಲೆಯಲ್ಲೂ ಏರಿಕೆ ಕಂಡುಬಂದಿದೆ. ಸದ್ಯ ಸುವರ್ಣಗಡ್ಡೆ ಕೆ.ಜಿಗೆ ₹50 ದರ ಇದೆ. ಕೇರಳ, ಮಂಗಳೂರು, ಉಡುಪಿ ಮಾರುಕಟ್ಟೆಗೆ ಇಲ್ಲಿಂದ ಸುವರ್ಣಗಡ್ಡೆ ಪೂರೈಕೆಯಾಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಶುಂಠಿಗೆ ಕೆ.ಜಿಗೆ ₹100 ದರ ಇತ್ತು. ಇದರಿಂದ ಉತ್ಸಾಹಗೊಂಡಿದ್ದ ರೈತರು ದೊಡ್ಡ ಪ್ರಮಾಣದಲ್ಲಿ ಶುಂಠಿ ಬೆಳೆದಿದ್ದರು. ಆದರೆ, ಪೂರೈಕೆ ಹೆಚ್ಚಾಗಿ ಈಗ ಬೆಲೆ ಕೆ.ಜಿಗೆ ₹25ಕ್ಕೆ ಕುಸಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.