ADVERTISEMENT

ಕಾಫಿ ತೋಟದಲ್ಲಿ ನಳನಳಿಸುವ ಏಲಕ್ಕಿ: 55 ಎಕರೆಯಲ್ಲಿ ಸಮೃದ್ಧ ಬೆಳೆ

ಕೊಪ್ಪದ ದೂಬಳ ಎಸ್ಟೇಟ್‌ನಲ್ಲಿ ವಿಭಿನ್ನ ಪ್ರಯೋಗ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 2:57 IST
Last Updated 20 ಅಕ್ಟೋಬರ್ 2021, 2:57 IST
ಫಸಲು ಭರಿತ ಏಲಕ್ಕಿ ಗಿಡದ ಬಳಿ ನಾರಾಯಣಮೂರ್ತಿ.
ಫಸಲು ಭರಿತ ಏಲಕ್ಕಿ ಗಿಡದ ಬಳಿ ನಾರಾಯಣಮೂರ್ತಿ.   

ಬಾಳೆಹೊನ್ನೂರು: ಮಲೆನಾಡಿನಲ್ಲಿ ಕಾಫಿ, ಅಡಿಕೆ ಬೆಳೆಗಳ ಅಬ್ಬರದ ನಡುವೆ ಬಹುತೇಕ ರೈತರ ತೋಟದಿಂದ ಏಲಕ್ಕಿ ಮರೆಯಾಗಿದೆ. ಮನೆಯಲ್ಲಿನ ಪಾಯಸದೂಟಕ್ಕೂ ಅದೆಷ್ಟೊ ರೈತರು ಅಂಗಡಿ ಏಲಕ್ಕಿಯನ್ನೇ ನೆಚ್ಚಿಕೊಳ್ಳುವಂತಾಗಿದೆ. ಈ ನಡುವೆ 55 ಎಕರೆ ಕಾಫಿ ತೋಟದ ನಡುವೆ ಏಲಕ್ಕಿಯನ್ನು ಬೆಳೆಯುವ ಮೂಲಕ ರೈತರೊಬ್ಬರು ಗಮನ ಸೆಳೆದಿದ್ದಾರೆ.

ಕೊಪ್ಪ ತಾಲ್ಲೂಕಿನ ಹೇರೂರು ಗ್ರಾಮದಲ್ಲಿರುವಎಂ.ಜಿ.ರಮೇಶ್ ಮತ್ತು ಎಂ.ಜಿ ದತ್ತಾತ್ರೇಯ ಒಡೆತನದ ದೂಬಳ ಎಸ್ಟೇಟ್‌ನ ವ್ಯವಸ್ಥಾಪಕ ಆರ್.ನಾರಾಯಣಮೂರ್ತಿ ಅವರು ವಿಶೇಷ ಆಸಕ್ತಿ ವಹಿಸಿ ಕಾಫಿ ಮಧ್ಯೆ ಏಲಕ್ಕಿ ಬೆಳೆದಿದ್ದಾರೆ.

ಕಳೆದ ವರ್ಷ ಪ್ರಾಯೋಗಿಕವಾಗಿ ಕೇರಳ ಮಾದರಿಯಲ್ಲಿ 10 ಎಕರೆ ತೋಟದಲ್ಲಿ ಕಾಫಿಗಿಡಗಳ ರೆಕ್ಕೆಗಳನ್ನು ಕತ್ತರಿಸಿ, ಏಲಕ್ಕಿಯ ಎನ್‌ಕೆಪಿ 14 ಹಾಗೂ ಕೇರಳದ ನೆಲ್ಯಾಣಿ ಗ್ರೀನ್ ಗೋಲ್ಡ್ ಎಂಬ ಎರಡು ತಳಿಗಳನ್ನು ನಾಟಿ ಮಾಡಿದ್ದರು. ಒಂದೊಂದು ಕಂದು ಏಲಕ್ಕಿ ನಾಟಿ ಮಾಡಿದ್ದು, ಇದೀಗ ಎರಡನೇ ವರ್ಷದಲ್ಲಿ ಅದು 80 ರಿಂದ 100 ಕಂದುಗಳಾಗಿ ಟಿಸಿಲು ಒಡೆದಿದ್ದು, ಇಡೀ ತೋಟದಲ್ಲಿ ಕಣ್ಣು ಹಾಯಿಸಿದಷ್ಟು ದೂರ ಹಸಿರು ಹೊದ್ದ ಏಲಕ್ಕಿ ಗಿಡಗಳು ಎದ್ದು ನಿಂತಿದೆ.

ADVERTISEMENT

ನೆಲ್ಯಾಣಿ ಗಿಡಗಳು ಅತಿ ಹೆಚ್ಚು ಕಂದು ಬಿಡುವ ಕಾರಣ 10 ಅಡಿಗೊಂದರಂತೆ ಹಾಗೂ ಎಸ್‌ಕೆಪಿ 14 ತಳಿಯ ಗಿಡಗಳನ್ನು 7 ಅಡಿಗೊಂದರಂತೆ ನಾಟಿ ಮಾಡಲಾಗಿದೆ. ಇದೀಗ 10 ಎಕರೆಯಲ್ಲಿನ ಮೊದಲನೇ ಫಸಲು ಕೈಗೆ ಬರುತ್ತಿದ್ದು, ಏಲಕ್ಕಿ ಗಿಡದ ಬುಡದಲ್ಲಿ ಹೂವುಗಳು ಅರಳಿ ನಿಂತು ಕಾಯಿಗಳಾಗಿದ್ದು, ಬಲಿತ ಕಾಯಿಗಳ ಕೊಯಿಲು ಆರಂಭವಾಗಿದೆ.

ಬಹುತೇಕ ಕಡೆಗಳಲ್ಲಿ 5 ಕೆ.ಜಿ. ಹಸಿ ಏಲಕ್ಕಿಗೆ ಒಂದು ಕೆ.ಜಿ. ಒಣ ಏಲಕ್ಕಿ ಸಿಗುತ್ತಿದ್ದರೆ, ಇಲ್ಲಿ 4.3 ಕೆ.ಜಿ. ಹಸಿ ಏಲಕ್ಕಿ ಒಣಗಿ ಒಂದು ಕೆ.ಜಿ. ತೂಗುತ್ತಿದೆ. ಅದರಲ್ಲೂ ಶೇ 85ರಷ್ಟು 8 ಮತ್ತು 9 ಎಂ.ಎಂ. ಗಾತ್ರದ್ದು. ಈ ವರ್ಷ ಮೊದಲನೇ ಫಸಲಾದ ಕಾರಣ ಸುಮಾರು ನಾಲ್ಕು ಟನ್ ಒಣ ಏಲಕ್ಕಿ ನಿರೀಕ್ಷಿಸಲಾಗಿದೆ. 8 ಎಂ.ಎಂ. ಮೇಲ್ಪಟ್ಟ ಏಲಕ್ಕಿಗೆ ಮಾರುಕಟ್ಟೆಯಲ್ಲಿ ಈಗ ಕೆ.ಜಿ.ಗೆ ₹ 1300ರಿಂದ ₹ 1400 ದರ ಇದ್ದು, ಇನ್ನೂ ಉತ್ತಮ ಧಾರಣೆ ಪಡೆಯುವ ಹುಮ್ಮಸಿನಲ್ಲಿದ್ದಾರೆ ನಾರಾಯಣಮೂರ್ತಿ.

ಎರಡು ಮೂರು ದಿನಕ್ಕೆ 700ರಿಂದ 800 ಕೆ.ಜಿ.ಯಷ್ಟು ಹಸಿ ಏಲಕ್ಕಿ ಕೊಯಿಲು ಮಾಡುತ್ತಿದ್ದು, ಅದನ್ನು ವ್ಯವಸ್ಥಿತವಾಗಿ ಒಣಗಿಸಲು ಕೇರಳದ ಕಂಪನಿಯೊಂದು ವಿಶಿಷ್ಟವಾದ ಡ್ರೈಯರ್ ಯಂತ್ರವನ್ನು ಇಲ್ಲಿ ಅಳವಡಿಸಿದೆ. ವಿದ್ಯುತ್, ಗ್ಯಾಸ್, ಕಟ್ಟಿಗೆ ಬಳಸಿ 13 ರಿಂದ 14 ಗಂಟೆಯಲ್ಲಿ ಒಂದು ಟನ್ ಹಸಿ ಏಲಕ್ಕಿಯನ್ನು ಒಣಗಿಸುವ ಪ್ರಕ್ರಿಯೆ ನಡೆಯುತ್ತಿದೆ.ಈ ಡ್ರೈಯರ್‌ನಲ್ಲಿ ಅಡಿಕೆ, ಕಾಫಿ, ಹಣ್ಣುಗಳನ್ನು ಸಹ ಒಣಗಿಸಬಹುದು. ಹೀಗೆ ಒಣಗಿಸಿದ ಏಲಕ್ಕಿಯಲ್ಲಿ ಬೀಜ ಸೇರಿದಂತೆ ನಾಲ್ಕು ವಿಧಗಳಾಗಿ ವಿಂಗಡಿಸಲು ಕೂಡ ಯಂತ್ರ ಇದ್ದು, ಟನ್ ಗಟ್ಟಲೆ ಏಲಕ್ಕಿಯನ್ನು ಕೆಲವೇ ನಿಮಿಷಗಳಲ್ಲಿ ಬೇರ್ಪಡಿಸಲಾಗುತ್ತದೆ.

ಮಳೆ ಜಾಸ್ತಿಯಾದಲ್ಲಿ ಗಿಡದ ಬುಡ ಹಾಗೂ ಏಲಕ್ಕಿ ಗೆರೆಗಳು ಕೊಳೆಯುತ್ತದೆ. ಬೋರರ್ ಕೂಡ ಈ ಗಿಡಗಳಿಗೆ ತಗಲುತ್ತದೆ. ಮಳೆಗಾಲದಲ್ಲಿ ಗಿಡಗಳ ಬುಡಕ್ಕೆ ಹುಲ್ಲಿನ ಅಥವಾ ಸೊಪ್ಪಿನ ಹೊದಿಕೆ ಹಾಕಿದಲ್ಲಿ ಕೊಳೆ ರೋಗದಿಂದ ಕಾಪಾಡಬಹುದು. ಬೇಸಿಗೆಯಲ್ಲಿ ಕನಿಷ್ಠ 15 ದಿನಕ್ಕೊಮ್ಮೆ ನೀರು ನೀಡುವುದು ಅಗತ್ಯ. ಪೂರ್ಣ ಪ್ರಮಾಣದ ಹಸಿರು ಒಣ ಏಲಕ್ಕಿ ಬೇಕಾದಲ್ಲಿ ಗಿಡದಲ್ಲಿನ ಬಲಿತ ಕಾಯಿಗಳನ್ನು ಕೊಯಿಲು ಮಾಡಬೇಕಾಗುತ್ತದೆ. ಹಾಗಂತ ಕಾಯಿಗಳನ್ನು ಮಾತ್ರ ಕೊಯ್ದಲ್ಲಿ ಹೆಚ್ಚು ತೂಕ ಬರುವುದಿಲ್ಲ. ಹಣ್ಣುಗಳನ್ನೇ ಕೊಯಿಲು ಮಾಡಿ ಒಣಗಿಸಿದಲ್ಲಿ ಅದು ಬಿಳಿ ಏಲಕ್ಕಿಯಾಗುತ್ತದೆ. ಅದಕ್ಕೆ ಮಾರುಕಟ್ಟೆಯಲ್ಲಿ ಧಾರಣೆ ಕಡಿಮೆ ಇದೆ. ಏಲಕ್ಕಿಗೆ ಶೇ 60ರಷ್ಟು ನೆರಳಿನ ಆಶ್ರಯ ಬೇಕು. ಗಿಡದಲ್ಲಿ ಕಾಯಿ ಹಣ್ಣಾಗುವ ಸಮಯದಲ್ಲಿ ಅಳಿಲು, ಏಡಿಗಳ ಕಾಟ ಜಾಸ್ತಿ. ನೆಲ್ಯಾಣಿ ಗ್ರೀನ್ ಗೋಲ್ಡ್ ತಳಿಯನ್ನು ಸರಿಯಾಗಿ ನಿರ್ವಹಣೆ ಮಾಡಿದಲ್ಲಿ ಕನಿಷ್ಠ ಹತ್ತು ವರ್ಷಗಳ ಕಾಲ ಫಸಲು ಪಡೆಯಬಹುದು. ಎರಡನೇ ವರ್ಷ ಎಕರೆಗೆ ನಾಲ್ಕು ಲಕ್ಷ ಲಾಭ ಪಡೆಯಬಹುದು ಎನ್ನುತ್ತಾರೆ ನಾರಾಯಣಮೂರ್ತಿ. ಸಂಪರ್ಕ ಸಂಖ್ಯೆ– 8105895864.

‘30 ಟನ್ ಒಣ ಏಲಕ್ಕಿ ನಿರೀಕ್ಷೆ’

‘ಮುಂದಿನ ವರ್ಷ ಗಿಡಗಳು ಇನ್ನಷ್ಟು ಬಲಿತು ಉತ್ತಮ ಫಸಲು ಬರುತ್ತದೆ. ಇದನ್ನು ಅನುಸರಿಸಿ 45 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಾಫಿ ಗಿಡಗಳ ರೆಕ್ಕೆಗಳನ್ನು ಕಡಿದು ಏಲಕ್ಕಿ ಗಿಡಗಳನ್ನು ನಾಟಿ ಮಾಡಲಾಗಿದೆ. ಬೇಕಾದ ಸಮಯದಲ್ಲಿ ಫಸಲು ನಿಂತ ಏಲಕ್ಕಿ ಗಿಡಗಳನ್ನು ತೆಗೆದು ಕಾಫಿ ಗಿಡಗಳನ್ನು ಮುಂದುವರಿಸಬಹುದಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಪ್ರತಿವರ್ಷ ಒಟ್ಟಾರೆ 25ರಿಂದ 30 ಟನ್ ಒಣ ಗ್ರೀನ್ ಏಲಕ್ಕಿ ಪಡೆಯುವ ನಿರೀಕ್ಷೆ ಇದೆ’ ಎನ್ನುತ್ತಾರೆ ನಾರಾಯಣಮೂರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.