ADVERTISEMENT

ಮನೆಗೆ ನುಗ್ಗಿ ಕಳವು ಪ್ರಕರಣ: ಯೂಟ್ಯೂಬ್‌ನಲ್ಲಿ ತಂತ್ರಗಾರಿಕೆ ನೋಡಿ ಸಂಚು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 5:19 IST
Last Updated 1 ಮಾರ್ಚ್ 2021, 5:19 IST
ಎಸ್ಪಿ ಅಕ್ಷಯ್‌ ಎಂ.ಹಾಕೆ ಅವರು ಅಗ್ನಿಶಾಮಕ ವಾಹನ ಚಾಲಕ ಎಚ್‌.ಕೆ. ದೇವೇಂದ್ರಪ್ಪ ಅವರಿಗೆ ನಗದು ಬಹುಮಾನ, ಪ್ರಶಂಸೆ ಪತ್ರ ನೀಡಿದರು.
ಎಸ್ಪಿ ಅಕ್ಷಯ್‌ ಎಂ.ಹಾಕೆ ಅವರು ಅಗ್ನಿಶಾಮಕ ವಾಹನ ಚಾಲಕ ಎಚ್‌.ಕೆ. ದೇವೇಂದ್ರಪ್ಪ ಅವರಿಗೆ ನಗದು ಬಹುಮಾನ, ಪ್ರಶಂಸೆ ಪತ್ರ ನೀಡಿದರು.   

ಚಿಕ್ಕಮಗಳೂರು: ‘ಆರೋಪಿಗಳಾದ ಸಚಿನ್‌, ಮೋಹನ್‌ ‘ಯೂ ಟ್ಯೂಬ್‌’ನಲ್ಲಿ ಕಳ್ಳತನದ ತಂತ್ರಗಾರಿಕೆಗಳನ್ನು ನೋಡಿ ಸಂಚು ರೂಪಿಸಿ ಬೈಪಾಸ್‌ ರಸ್ತೆಯ (ಕಲ್ಯಾಣನಗರದ)‌ ಚಂದ್ರೇಗೌಡ ಅವರ ಮನೆಗೆ ನುಗ್ಗಿ ಕಳವು ಮಾಡಿ ಸಿಕ್ಕಿಬಿದ್ದಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಎಂ.ಹಾಕೆ ಇಲ್ಲಿ ಭಾನುವಾರ ತಿಳಿಸಿದರು.

‘ಯೂ ಟ್ಯೂಬ್‌’ನಲ್ಲಿ ಹಲವಾರು ಕಳ್ಳತನ ಪ್ರಕರಣಗಳನ್ನು ನೋಡಿ, ತಯಾರಿ ಮಾಡಿಕೊಂಡಿದ್ದಾರೆ. ಸಾಕ್ಷ್ಯ ಸಿಗದಂತೆ ಕೃತ್ಯ ಎಸಗಲು ಸಂಚು ಮಾಡಿದ್ದಾರೆ. ಒಂದೇ ರೀತಿಯ ಹೆಲ್ಮೆಟ್‌, ಜಾಕೆಟ್‌ ಖರೀದಿಸಿದ್ದಾರೆ. ನಂಬರ್‌ ಅಳವಡಿಸದ ಬೈಕ್‌ನಲ್ಲಿ ತೆರಳಿದ್ದಾರೆ. ಬ್ಯಾಗ್‌ನಲ್ಲಿ ರಾಡ್‌, ಚಾಕು ಇತರ ಆಯುಧ ಒಯ್ದಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿಗಳ ಪೈಕಿ ಸಚಿನ್‌ ಎಂಬಾತ ಚಂದ್ರೇಗೌಡ ಅವರ ಸಂಬಂಧಿ. ಚಂದ್ರೇಗೌಡ ಅವರ ಮನೆಯಲ್ಲಿ ಹಣ, ಒಡವೆ ಇರುವುದನ್ನು ತಿಳಿದುಕೊಂಡು ಕಳ್ಳತನ ಮಾಡಿದ್ದಾರೆ. ಮೋಹನ್‌(28) ದಂಟರಮಕ್ಕಿ ನಿವಾಸಿ, ಸಚಿನ್‌ (23) ಚಂದ್ರಕಟ್ಟೆ ನಿವಾಸಿ. ಸಾಲ ಇದೆ, ಅದಕ್ಕಾಗಿ ಕಳವಿಗೆ ಕೈಹಾಕಿದೆವು ಎಂದು ಆರೋಪಿಗಳು ವಿಚಾರಣೆ ವೇಳೆ ಹೇಳಿದ್ದಾರೆ. ಆರೋಪಿಗಳಿಂದ 75 ಗ್ರಾಂ ಚಿನ್ನದ ಒಡವೆ, ₹ 50 ಸಾವಿರ ನಗದು, ಕೃತ್ಯಕ್ಕೆ ಬಳಸಿದ ಬೈಕ್‌ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಸಾರ್ವಜನಿಕರು, ಅಗ್ನಿ ಶಾಮಕ ವಾಹನ ಚಾಲಕ ಎಚ್‌.ಕೆ.ದೇವೇಂದ್ರಪ್ಪ ಅವರ ಸಮಯ ಪ್ರಜ್ಞೆ, ಪೊಲೀಸರ ಕಾರ್ಯಾಚರಣೆಯಿಂದ ಆರೋಪಿಗಳನ್ನು ತ್ವರಿತವಾಗಿ ಪತ್ತೆ ಮಾಡಲು ಸಾಧ್ಯವಾಯಿತು ಎಂದರು.

‘ಕಳ್ಳತನ ಪ್ರಕರಣಗಳಿಗೆ ದತ್ತ ಜಯಂತ್ಯುತ್ಸವ ಸಂದರ್ಭದಲ್ಲಿ (ಡಿಸೆಂಬರ್‌) ಗ್ಯಾಂಗ್‌ವೊಂದನ್ನು ಹಿಡಿದಿದ್ದೇವೆ. ಇಮ್ರಾನ್‌, ಷಹನವಾಜ್‌, ಬಿಲಾನ್‌ ಆರೋಪಿಗಳನ್ನು ಹಿಡಿಯ ಲಾಗಿದೆ. ಮೂವರು ಬೆಂಗಳೂರಿನವರು’ ಎಂದು ತಿಳಿಸಿದರು.

‘ಈಜಿ ಡ್ರೈವ್‌’ ವಾಹನ (ಹಳದಿ ಫಲಕ) ಬಾಡಿಗೆ ಪಡೆದು ವಾರಾಂತ್ಯದ ದಿನಗಳಲ್ಲಿ ಇಲ್ಲಿಗೆ ಬಂದು ಕಳವು ಮಾಡಿದ್ದರು. ಕಲ್ಯಾಣ ನಗರ, ಕಾಳಿದಾಸ ನಗರ, ದುಬೈ ನಗರದಲ್ಲಿ ನಾಲ್ಕುಕಡೆ ಕಳವು ಮಾಡಿದ್ದರು. ವಾಹನ ಟ್ರ್ಯಾಪ್‌ ಮಾಡಿ ಕಳ್ಳರನ್ನುಪತ್ತೆ ಹಚ್ಚಿದೆವು. ಇದರ ಇದೆ ದೊಡ್ಡ ಜಾಲ ಇದೆ. ಶಿವಮೊಗ್ಗದಲ್ಲಿ ಗ್ಯಾಂಗ್‌ ಮೇಲೆ ಸುಮಾರು 20 ದರೋಡೆ ಪ್ರಕರಣಗಳು ಇವೆ’ ಎಂದು ಉತ್ತರಿಸಿದರು.

ಡಿವೈಎಸ್ಪಿ ಪ್ರಭು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.