
ಮೂಡಿಗೆರೆ: ತಾಲ್ಲೂಕಿನಲ್ಲಿ ಹಾದು ಹೋಗಿರುವ ಚಾರ್ಮಾಡಿ ಘಾಟಿಯಲ್ಲಿ ಕೆಎಸ್ಆರ್‌ಟಿಸಿ ಬಸ್ಸೊಂದು ಶನಿವಾರ ಸಂಜೆ ಕೆಟ್ಟು ನಿಂತಿದ್ದರಿಂದ ಘಾಟಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು.
ಮಂಗಳೂರಿನಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದ ಬಸ್ ಘಾಟಿಯ ಅಣ್ಣಪ್ಪಸ್ವಾಮಿ ದೇವಾಲಯದ ಬಳಿ ಕಿರಿದಾದ ರಸ್ತೆಯಲ್ಲಿ ಕೆಟ್ಟು ನಿಂತಿದ್ದು, ಎರಡೂ ಬದಿಯಲ್ಲಿ ವಾಹನಗಳು ಸಾಗಲಾಗದೇ, ವಾಹನಗಳು ಸಾಲುಗಟ್ಟಿ ನಿಂತಿದ್ದವು.
ವಾರಾಂತ್ಯವಾಗಿದ್ದರಿಂದ ಘಾಟಿಯಲ್ಲಿ ಸಾಗುವ ವಾಹನಗಳ ಸಂಖ್ಯೆಯೂ ಹೆಚ್ಚಾಗಿದ್ದು, ತಡರಾತ್ರಿಯವರೆಗೂ ವಾಹನಗಳ ಸಂಚಾರದಲ್ಲಿ ಅಸ್ತವ್ಯಸ್ತವಾಗಿತ್ತು. ಭಾನುವಾರ ಬೆಳಿಗ್ಗೆ ಬಸ್ ದುರಸ್ತಿಗೊಳಿಸಿ ಸ್ಥಳದಿಂದ ತೆಗೆದುಕೊಂಡು ಹೋಗಲಾಯಿತು.
ಚಾರ್ಮಾಡಿ ಘಾಟಿಯಲ್ಲಿ ಸಂಚರಿಸುವ ಹಲವು ಬಸ್‌ಗಳು ಸುಸ್ಥಿತಿಯಲ್ಲಿಲ್ಲದೇ ಪದೇ ಪದೇ ಘಾಟಿಯಲ್ಲಿ ಕೆಟ್ಟುನಿಲ್ಲುತ್ತಿವೆ. ಅದರಲ್ಲೂ ರಾತ್ರಿ ವೇಳೆ ಸಂಚರಿಸುವ ಬಸ್‌ಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಘಾಟಿಯಲ್ಲಿ ಕಡಿದಾದ ತಿರುವು ರಸ್ತೆಗಳು, ಕಂದಕಗಳು ಇರುವುದರಿಂದ ಸುಸ್ಥಿತಿಯಲ್ಲಿರುವ ಬಸ್ ಸಂಚಾರಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.