
ಮೂಡಿಗೆರೆ: ಚಾರ್ಮಾಡಿ ಘಾಟಿ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಕಾಳ್ಗಿಚ್ಚನ್ನು ಸಂಪೂರ್ಣವಾಗಿ ನಂದಿಸಲಾಗಿದೆ ಎಂದು ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾತ್ರೇಶ್ವರ ಸ್ವಾಮಿ ತಿಳಿಸಿದರು.
ಚಾರ್ಮಾಡಿ ಘಾಟಿಯಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
'ಚಾರ್ಮಾಡಿ ಘಾಟಿಯ ಮೀಸಲು ಅರಣ್ಯಕ್ಕೆ ಬಿದ್ದ ಕಾಳ್ಗಿಚ್ಚಿನ ಬೆಂಕಿಯನ್ನು ಹತೋಟಿ ಮಾಡಲು ಅರಣ್ಯ ಇಲಾಖೆ ಸಿಬ್ಬಂದಿ, ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಗಾಳಿಯ ವೇಗ ಹೆಚ್ಚಿದ್ದರಿಂದ ಅರಣ್ಯಕ್ಕೆ ಬಿದ್ದ ಬೆಂಕಿಯು ತೀವ್ರವಾಗಿ ಹರಡಿದೆ. ಬೆಂಕಿ ನಂದಿಸುವ ಕಾರ್ಯಾಚರಣೆಗೂ ಗಾಳಿ ಅಡ್ಡಿಯಾಯಿತು. ಬೆಂಕಿ ನಂದಿಸುವಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ರಂಜಿತ್, ಅಶ್ವತ್ಥ್, ಗಸ್ತು ಅರಣ್ಯ ಪಾಲಕರಾದ ಅಭಿಜಿತ್, ಉಮೇಶ್, ಸುರೇಶ್ ಅವರ ಕಾರ್ಯಾಚರಣೆಯ ಪಾತ್ರ ಹೆಚ್ಚಿದೆ. ಕಿಡೀಗೇಡಿಗಳಿಂದಾಗಿ ಅರಣ್ಯಕ್ಕೆ ಆಗಾಗ ಬೆಂಕಿ ಅವಘಡ ನಡೆಯುತ್ತಿದೆ’ ಎಂದರು.
‘ಮಲಯ ಮಾರುತ ದುರಸ್ತಿ ಮಾಡಲು ಚಿಂತನೆ ನಡೆಸಲಾಗಿದೆ. ಮಲೆನಾಡು ಭಾಗದ ಮಳೆ ಹಾಗೂ ಚಳಿಯ ವಾತಾವರಣಕ್ಕೆ ಕಟ್ಟಡಕ್ಕೆ ಹಾಕಿದ್ದ ಮರಗಳು ಹಾಳಾಗುತ್ತಿವೆ. ಮರದ ಬದಲಾಗಿ ಕಬ್ಬಿಣದ ಚಾವಣಿ ಹಾಕಲು ಚಿಂತನೆ ನಡೆದಿದೆ. ಟೈಲ್ಸ್ ಬದಲಿಸಲಾಗುವುದು. ಈಗಾಗಲೇ ಚಾವಣಿಯ ಪಕ್ಕಾಸುಗಳು ಹಾನಿಯಾಗಿದೆ. ಮಲಯ ಮಾರುತ ಅತಿಥಿಗೃಹ ಸಂರಕ್ಷಿಸಲು ಚಿಂತನೆ ನಡೆಸಲಾಗಿದೆ’ ಎಂದರು.
ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಜತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.