ADVERTISEMENT

ಚಿಕ್ಕಮಗಳೂರು: ಝರಿ ಅವಲಂಬಿತ ಹಳ್ಳಿಗಳಲ್ಲೂ ಆತಂಕ

ಕಡಿಮೆಯಾಗುತ್ತಿರುವ ಝರಿಗಳ ನೀರು: ಸಮಸ್ಯೆ ತಲೆದೋರುವ ಸಾಧ್ಯತೆ

ವಿಜಯಕುಮಾರ್ ಎಸ್.ಕೆ.
Published 25 ಫೆಬ್ರುವರಿ 2024, 6:22 IST
Last Updated 25 ಫೆಬ್ರುವರಿ 2024, 6:22 IST
ಝರಿಗಳಲ್ಲಿ ನೀರು ಕಡಿಮೆಯಾಗಿರುವುದು
ಝರಿಗಳಲ್ಲಿ ನೀರು ಕಡಿಮೆಯಾಗಿರುವುದು   

ಚಿಕ್ಕಮಗಳೂರು: ಮಲೆನಾಡಿನಲ್ಲಿ ಝರಿ–ತೊರೆಗಳಿಗೆ ಕೊರತೆ ಇಲ್ಲ. ಈ ಝರಿಗಳಿಗೆ ಪೈಪ್‌ ಅಳವಡಿಸಿ ಐನೂರಕ್ಕೂ ಹೆಚ್ಚು ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಈ ಝರಿಗಳೂ ಈಗ ಬತ್ತುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಆತಂಕ ಎದುರಾಗಿದೆ.

ಜಿಲ್ಲೆಯಲ್ಲಿ ವಾಡಿಕೆ ಮಳೆಯಾಗಿದ್ದರೆ ಝರಿಗಳು ಬೇಸಿಗೆಯಲ್ಲೂ ಮೈದುಂಬಿ ಹರಿಯುತ್ತಿದ್ದವು. ವರ್ಷವಿಡೀ ಹರಿಯುವ ಝರಿಗಳನ್ನು ಗುರುತಿಸಿ ಅವುಗಳಿಗೆ ಪೈಪ್‌ಲೈನ್ ಅಳವಡಿಕೆ ಮಾಡಿ ಹಳ್ಳಿಗಳು ಮತ್ತು ಜನವಸತಿಗೆ ನೀರು ಪೂರೈಸಲಾಗುತ್ತಿದೆ. ಮೋಟರ್ ಅಳವಡಿಸದೆ ಹರಿಯುವ ನೀರಿಗೆ ಪೈಪ್‌ ಜೋಡಿಸಿ ನೇರವಾಗಿ ಹಳ್ಳಿಗಳಿಗೆ ನೀರು ಪೂರೈಕೆಯಾಗುತ್ತಿದೆ.

ಮುಳ್ಳಯ್ಯನಗಿರಿ ಸೇರಿ ಚಂದ್ರದ್ರೋಣ ಪರ್ವತಗಳಲ್ಲಿ ಝರಿಗಳು ಹರಿದು ಹಳ್ಳಕೊಳ್ಳಗಳ ಮೂಲಕ ಅಕ್ಕ–ಪಕ್ಕದ ಜಿಲ್ಲೆಗಳಿಗೆ ಹೋಗುತ್ತವೆ. ಈ ನೀರನ್ನು ಕಡಿಮೆ ಖರ್ಚಿನಲ್ಲಿ ಜಿಲ್ಲೆಯ ಹಳ್ಳಿಗಳಿಗೆ ಒದಗಿಸುವ ಕೆಲಸವನ್ನು ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಕೈಗೊಳ್ಳಲಾಗಿದೆ.  ದಿನದ 24 ಗಂಟೆಯೂ ನೇರವಾಗಿ ನೀರು ಪೂರೈಕೆಯಾಗುತ್ತಿದ್ದು, ಕುಡಿಯುವ ನೀರಿನ ಸಮಸ್ಯೆಯಿಂದ ಝರಿಗಳನ್ನ ಆಧರಿಸಿ ನೀರು ಪಡೆಯುತ್ತಿರುವ ಹಳ್ಳಿಗಳು ಮುಕ್ತಿ ಹೊಂದಿವೆ. 

ADVERTISEMENT

ಈ ವರ್ಷ ಮಳೆ ಕೊರತೆಯಾಗಿದ್ದರಿಂದ ಮುಂಗಾರಿನಲ್ಲೇ ಝರಿಗಳು ಮೈದುಂಬಿ ಹರಿಯಲಿಲ್ಲ. ಈಗ ಬೇಸಿಗೆ ಆರಂಭದಲ್ಲೇ ಝರಿಗಳಲ್ಲಿ ನೀರು ಕಡಿಮೆಯಾಗಿದೆ. ಬಿರು ಬಿಸಿಲು ಈ ತೊರೆಗಳ ನೀರನ್ನು ಇನ್ನಷ್ಟು ಕಡಿಮೆ ಮಾಡಿದ್ದು, ಮುಂದಿನ ದಿನಗಳಲ್ಲಿ ನೀರಿನ ಹರಿವು ನಿಂತರೆ ಗತಿಯೇನು ಎಂಬ ಚಿಂತೆ ಅಧಿಕಾರಿಗಳಲ್ಲಿ ಇದೆ.

ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದಾದ ಜಿಲ್ಲೆಯ ಒಟ್ಟು 319 ಹಳ್ಳಿಗಳನ್ನು ಜಿಲ್ಲಾ ಪಂಚಾಯಿತಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಗುರುತಿಸಿದ್ದಾರೆ. ಝರಿಗಳ ನೀರು ಬತ್ತಿದರೆ ಈ ಸಂಖ್ಯೆ ಇನ್ನಷ್ಟು ಜಾಸ್ತಿಯಾಗುವ ಸಾಧ್ಯತೆ ಇದೆ. 

ಝರಿ ಅವಲಂಭಿತ 547 ಜನವಸತಿ ಜಿಲ್ಲೆಯಲ್ಲಿ ಒಟ್ಟು 547 ಜನವಸತಿಗೆ ಝರಿಗಳ ನೀರು ಪೂರೈಕೆಯಾಗುತ್ತಿದೆ. ಚಿಕ್ಕಮಗಳೂರು ಶೃಂಗೇರಿ ಮತ್ತು ಮೂಡಿಗೆರೆ ತಾಲ್ಲೂಕಿನಲ್ಲೇ ಹೆಚ್ಚಿನ ಹಳ್ಳಿಗಳು ಝರಿಯನ್ನು ಅವಲಂಭಿಸಿವೆ. ಮೂರು ತಾಲ್ಲೂಕಿನಲ್ಲಿ ಹಳ್ಳಿಗಳು ಗುಡ್ಡಗಾಡುಗಳ ನಡುವೆಯೇ ಇದ್ದು ವರ್ಷವಿಡಿ ಹರಿಯುವ ಸಮೀಪದ ಝರಿಗಳನ್ನು ಗುರುತಿಸಿ ನೀರು ಪೂರೈಸಲಾಗುತ್ತಿದೆ. ಕೊಪ್ಪ ಮತ್ತು ಚಿಕ್ಕಮಗಳೂರು ತಾಲ್ಲೂಕಿನ ಕೆಲ ಝರಿಗಳ ನೀರು ಕಡಿಮೆಯಾಗಿರುವುದನ್ನು ಅಧಿಕಾರಿಗಳು ಗುರುತಿಸಿದ್ದಾರೆ. ಸಂಪೂರ್ಣವಾಗಿ ಝರಿ ಬತ್ತಿದರೆ ಖಾಸಗಿ ಕೊಳವೆ ಬಾವಿಗಳು ಮತ್ತು ಟ್ಯಾಂಕರ್ ಮೂಲಕ ನೀರು ಪೂರೈಸಲು ಆಲೋಚನೆ ನಡೆಸಿದ್ದಾರೆ. ‘ನೀರು ಕಡಿಮೆಯಾಗಿರುವ ಝರಿಗಳನ್ನು ಗುರುತಿಸಿ ಪರ್ಯಾಯ ವ್ಯವಸ್ಥೆಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ‘‍ಪ್ರಜಾವಾಣಿ’ಗೆ ತಿಳಿಸಿದರು.

ಝರಿ ನೀರು ಪೂರೈಕೆಯಾಗುತ್ತಿರುವ ಜನವಸತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.