ADVERTISEMENT

ಕಾಡಾನೆ ದಾಳಿಯಿಂದ ಮೃತಪಟ್ಟ ಮಹಿಳೆ ಶವ ಇಟ್ಟು ಪ್ರತಿಭಟನೆ: 29 ಜನರ ವಿರುದ್ಧ FIR

ಕಲ್ಲುತೂರಾಟ, ಕರ್ತವ್ಯಕ್ಕೆ ಅಡ್ಡಿ, ಪೊಲೀಸ್ ವಾಹನ ಉರುಳಿಸಲು ಯತ್ನ ಆರೋಪ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 5:22 IST
Last Updated 23 ಫೆಬ್ರುವರಿ 2026, 5:22 IST
   

ಚಿಕ್ಕಮಗಳೂರು: ಕಾಡಾನೆ ದಾಳಿಯಿಂದ ಮೃತಪಟ್ಟ ಮಹಿಳೆ ಶವದೊಂದಿಗೆ ಕಡಬಗೆರೆಯಲ್ಲಿ ಭಾನುವಾರ ದಿನವಿಡೀ ರಸ್ತೆತಡೆ, ಕಲ್ಲುತೂರಾಟ, ಪೊಲೀಸ್ ವಾಹನ ಉರುಳಿಸಲು ಯತ್ನ, ಕರ್ತವ್ಯಕ್ಕೆ ಅಡ್ಡಿ ಮಾಡಿದ ಆರೋಪದಲ್ಲಿ 29 ಜನರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಬಾಳೆಹೊನ್ನೂರು ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ ಅಂಬರೀಶ್ ನೀಡಿರುವ ದೂರು ಆಧರಿಸಿ ಹೊನ್ನೆಕೊಪ್ಪದ ಚಂದ್ರಶೇಖರ ರೈ, ಹೊಸಳ್ಳಿ ಅಭಿಷೇಕ್, ಕಡಬಗೆರೆ ಮಂಜಶೆಟ್ಟಿ, ಪ್ರವೀಣ್ ಖಾಂಡ್ಯ, ಕುಂಬರಗೋಡು ಆದರ್ಶ, ಹಳೆಹಳ್ಳಿ ಕಾರ್ತಿಕ್, ಕೂಸ್ಕಲ್ ಪುರುಷೋತ್ತಮ, ಮೂಡುಬಾಗಿಲು ಸಚಿನ್, ವರ್ಕಟ್ಟೆ ಧನಂಜಯ ಮತ್ತು ಇತರ 20 ಜನರ ವಿರುದ್ಧ ಬಾಳೆಹೊನ್ನೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಹ್ಯಾರಂಬಿಪುರ‌ದ ನಾಗೇಶಗೌಡ ತೋಟದಲ್ಲಿ ಕಾಡಾನೆ ತುಳಿತದಿಂದ ಬೋರಮ್ಮ ಮೃತಪಟ್ಟಿದ್ದರು. ಅವರ ಮಗ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಶವ ತರುತ್ತಿದ್ದಾಗ ಚಂದ್ರಶೇಖರ ರೈ, ಮಂಜಶೆಟ್ಟಿ ಇತರರು ಕಡಬಗೆರೆಯಲ್ಲಿ ವಾಹನ ಅಡ್ಡಗಟ್ಟಿ ತಡೆದು ಕರ್ತವ್ಯಕ್ಕೆ ಅಡ್ಡಿ ಮಾಡಿದರು. ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದಾಗ ರಸ್ತೆ ಮಧ್ಯ ಶವ ಇಟ್ಟು ಪ್ರತಿಭಟನೆ ಮಾಡುತ್ತಿದ್ದರು. ಪ್ರಚೋದನೆ ಘೋಷಣೆ ಕೂಗಿ ರಸ್ತೆ ತಡೆ ಮಾಡಿ ಸುಗಮ ಸಂಚಾರಕ್ಕೆ ತಡೆ ಮಾಡುತ್ತಿದ್ದರು’ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

ADVERTISEMENT

‘ಕಾಡಾನೆ ಸೆರೆ ಹಿಡಿಯಲಾಗಿದೆ ಎಂದು ಹೇಳಿದರೂ ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿ ಸುಳ್ಳು ಹೇಳುತ್ತಿದ್ದಾರೆ, ಪ್ರತಿಭಟನೆ ಮಾಡಲು ಬನ್ನಿ ಎಂದು ಪ್ರಚಾರ ಮಾಡಿದರು. ಪ್ರವೀಣ್ ಖಾಂಡ್ಯ, ಅಭಿಷೇಕ್, ಆದರ್ಶ, ಕಾರ್ತಿಕ್, ಪುರುಷೋತ್ತಮ, ಸಚಿನ್, ಧನಂಜಯ ಸೇರಿ 150ಕ್ಕೂ ಹೆಚ್ಚು ಜನರ ಗುಂಪು ಸೇರಿಸಿದರು. ಅರಣ್ಯ ಸಚಿವರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಬರಬೇಕೆಂದು ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿದರು. ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಮನವೊಲಿಸಿದರೂ ಕೇಳದೆ ರಸ್ತೆ ಮಧ್ಯ ಟೆಂಟ್ ಅಳವಡಿಸಿದರು’ ಎಂದು ದೂರಲಾಗಿದೆ.

‘ಸಂಜೆ 5 ಗಂಟೆ ಸುಮಾರಿಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಉಪಅರಣ್ಯ ಸಂರಕ್ಷಣಾಧಿಕಾರಿ ಬಂದು ಮೃತರ ಕುಟುಂಬಕ್ಕೆ ₹20 ಲಕ್ಷ ಪರಿಹಾರ ನೀಡಲು ಮುಂದಾದರು. ₹50 ಲಕ್ಷ ಪರಿಹಾರ ಬೇಕು ಎಂದು ಒತ್ತಾಯಿಸಿದರು. ಶವ ಸಂಸ್ಕಾರಕ್ಕೆ ಕುಟುಂಬದವರು ಅವಕಾಶ ನೀಡಿ ಎಂದು ಗೋಗರೆದರೂ ಅನುವು ಮಾಡಿಕೊಡದೆ ತೊಂದರೆ ಮಾಡಿದರು. ಅಲ್ಲದೇ ಸಂಜೆ 6 ಗಂಟೆ ಸುಮಾರಿಗೆ ಪೊಲೀಸರ ಮೇಲೆ ಕಲ್ಲುತೂರಾಟ ಮಾಡಲು ಆರಂಭಿಸಿದರು. ಈ ಸಂದರ್ಭದಲ್ಲಿ ಡಿವೈಎಸ್‌ಪಿ, ಪಿಎಸ್‌ಐ ಮಧು, ಪೊಲೀಸ್ ಸಿಬ್ಬಂದಿ ರೇಖಾ, ಜಯರಾಮೇಗೌಡ, ಮಂಜುನಾಥ, ಭೀಮಸೇನ ಕಣಬೂರು, ಹನುಮಂತ ಗುಡದಿನ್ನಿ, ರಘುನಾಯ್ಕ, ಶಿವಾನಂದ ಇವರಿಗೆ ರಕ್ತ ಗಾಯಗಳಾಗಿವೆ’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ನಂತರ ಇದೇ ಗುಂಪು ಸಶಸ್ತ್ರ ಮೀಸಲು ಪಡೆಯ ವಾಹನವನ್ನು ಎತ್ತಿ ಬೀಳಿಸಲು ಪ್ರಯತ್ನ ಮಾಡಿತು. ಸಾರ್ವಜನಿಕ ಆಸ್ತಿಪಾಸ್ತಿ ಹಾಗೂ ಪ್ರಾಣಹಾನಿ ತಡೆಯುವ ಉದ್ದೇಶದಿಂದ ಸ್ಥಳದಲ್ಲಿದ್ದ ಸಿಬ್ಬಂದಿ ಗುಂಪು ಚದುರಿಸಿದರು. ಬಳಿಕ ಮಹಿಳೆ ಶವವನ್ನು ಸಂಬಂಧಿಕರಿಗೆ ಒಪ್ಪಿಸಲಾಯಿತು ಎಂದು ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.