ADVERTISEMENT

ಚಿಕ್ಕಮಗಳೂರು | ಬೈಪಾಸ್-‌ದೀಪಾ ನರ್ಸಿಂಗ್‌ ಹೋಂ ರಸ್ತೆಯಲ್ಲಿ ಕಸದ ರಾಶಿ

​ಪ್ರಜಾವಾಣಿ ವಾರ್ತೆ
Published 5 ಮೇ 2025, 4:13 IST
Last Updated 5 ಮೇ 2025, 4:13 IST
ದೀಪಾ ನರ್ಸಿಂಗ್ ಹೋಂ –ಬೈಪಾಸ್ ರಸ್ತೆಯ ಬದಿಯಲ್ಲಿ ಕಂಡುಬಂದ ಕಸದ ರಾಶಿ
ದೀಪಾ ನರ್ಸಿಂಗ್ ಹೋಂ –ಬೈಪಾಸ್ ರಸ್ತೆಯ ಬದಿಯಲ್ಲಿ ಕಂಡುಬಂದ ಕಸದ ರಾಶಿ   

ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ದೀಪಾ ನರ್ಸಿಂಗ್ ಹೋಂ ಎದುರಿನ ರಸ್ತೆಯಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು, ಸಾರ್ವಜನಿಕರು ಮೂಗು ಮುಚ್ಚಿ ಸಂಚರಿಸುವಂತಾಗಿದೆ.

ಬೈಪಾಸ್ ರಸ್ತೆ ಮತ್ತು ಮಾರ್ಕೇಟ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಶಂಕರಪುರದ ಮೂಲಕ ಹಾದು ಹೋಗುವ ರಸ್ತೆಯಲ್ಲಿ ನಿತ್ಯ ಸಾವಿರಾರು ಜನ ಸಂಚಾರಿಸುತ್ತಾರೆ.

ಶಂಕರಪುರ, ಪಟಾಕಿ ಮೈದಾನ ಹಾಗೂ ದಂಟರಮಕ್ಕಿ ರಸ್ತೆ ಬದಿಯಲ್ಲಿ ಎಲ್ಲಿ ನೋಡಿದರೂ ಕಸ, ಹೋಟೇಲ್‌ ತ್ಯಾಜ್ಯ, ಮದ್ಯದ ಬಾಟಲು, ಪ್ಲಾಸ್ಟಿಕ್‌ ಬಾಟಲಿ, ಮನೆ ತೆರವು ಮಾಡಿದ ಹಳೆಯ ವಸ್ತುಗಳು ಎಲ್ಲಂದರಲ್ಲಿ ರಾಶಿ ಬಿದ್ದಿವೆ.

ADVERTISEMENT

ಮನೆ ಬಾಗಿಲಿಗೆ ನಗರಸಭೆ ಕಸದ ವಾಹನ ಬಂದರು ಕೆಲವರು ಕಸ ನೀಡುತ್ತಿಲ್ಲ. ರಾತ್ರಿ ವೇಳೆ ಬೈಕ್‌, ಕಾರುಗಳಲ್ಲಿ ತಂದು ಕಸ ಬಿಸಾಡುತ್ತಿರುವುದರಿಂದ ಸಮಸ್ಯೆಯಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಇನ್ನೂ ಕೆಲವರು ಹಗಲಿನ ವೇಳೆಯೇ ಪ್ಲಾಸ್ಟಿಕ್‌ಗಳಲ್ಲಿ ಕಸ ತುಂಬಿಕೊಂಡು ಬಂದು ರಸ್ತೆ ಬದಿಯಲ್ಲಿ ಬಿಸಾಡುತ್ತಿದ್ದಾರೆ. ಟ್ರ್ಯಾಕ್ಟರ್‌ಗಳಲ್ಲಿ ಬಂದು ಹಳೆ ಮನೆಯ ವಸ್ತುಗಳ ಹಾಗೂ ಕಟ್ಟಡ ತ್ಯಾಜ್ಯಗಳನ್ನು ರಸ್ತೆ ಬದಿಯಲ್ಲಿ ರಾಶಿ ಸುರಿಯುತ್ತಿದ್ದಾರೆ.

ಪ್ರತಿನಿತ್ಯ ರಸ್ತೆ ಬದಿಯಲ್ಲಿ ಈ ರೀತಿ ಕಸ ಬೀಳುತ್ತಿದ್ದರು ನಗರಸಭೆ ಮಾತ್ರ ಮೌನ ವಹಿಸಿದೆ. ಯಾವುದೇ ಎಚ್ಚರಿಕೆಯ ಫಲಕ ಹಾಕುವುದಾಗಲಿ, ಗಸ್ತು ನಡೆಸುವುದಾಗಲಿ, ದಂಡ ವಿಧಿಸುವುದಾಗಲಿ ಈವರೆಗೆ ಮಾಡಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಹೋಟೆಲ್‌ ತ್ಯಾಜ್ಯ, ಕೋಳಿ ಅಂಗಡಿ ತ್ಯಾಜ್ಯ ಸುರಿಯುತ್ತಿರುವುದರಿಂದ ಬೀದಿ ನಾಯಿಗಳ ಹಾವಳಿಯೂ ಹೆಚ್ಚಾಗಿದೆ. ರಾತ್ರಿ ವೇಳೆ ಬೀದಿ ನಾಯಿಗಳು ದಾಳಿ ಮಾಡಿರುವ ಉದಾಹಣೆಗಳೂ ಇವೆ. ಸಂಜೆ ನಂತರ ಈ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟವಾಗಿದೆ ಎಂದು ಕಲ್ಯಾಣ ನಗರದ ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ಇನ್ನೂ ರಸ್ತೆಯಲ್ಲಿ ಖಾಲಿ ನಿವೇಶನಗಳಿದ್ದು, ಅಲ್ಲಲ್ಲಿ ಮದ್ಯ ಸೇವನೆ ಮಾಡಿ ಬಾಟಲಿ ಬಿಸಾಡುತ್ತಿರುವುದು ಕೂಡ ತ್ಯಾಜ್ಯ ಹೆಚ್ಚಳಕ್ಕೆ ಕಾರಣವಾಗಿದೆ. ಪೊಲೀಸ್‌ ವಾಹನ ಸಂಚಾರ ಮಾಡಿದರೂ ಮದ್ಯ ವ್ಯಸನಿಗಳು ನಿರಾಂತಕವಾಗಿ ರಸ್ತೆ ಬದಿ ವಾಹನ ನಿಲ್ಲಿಸಿಕೊಂಡು ಮದ್ಯ ಸೇವನೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಕಸ ರಾಶಿ ಹಾಕುವ ಸ್ಥಳ ಶಂಕರಪುರದ ವಸತಿ ಪ್ರದೇಶಕ್ಕೆ ಹೊಂದಿಕೊಂಡಂತೆ ಇದೆ. ಸಮೀಪದಲ್ಲೇ ಖಾಸಗಿ ಸ್ಕ್ಯಾನಿಂಗ್ ಸೆಂಟರ್, ಹೋಟೆಲ್, ಕ್ಯಾಂಟೀನ್‌, ಜೂಸ್‌ ಅಂಗಡಿಗಳು ಇದ್ದು, ವಾಸನೆ ನಡುವೆ ಜೀವನ ಸವೆಸುವಂತಾಗಿದೆ. ಕಸಕ್ಕೆ  ಕೆಲವರು ಬೆಂಕಿ ಹಚ್ಚುತ್ತಿದ್ದು, ಇದು ಕೂಡ ನೈರ್ಮಲ್ಯ ಹೆಚ್ಚುವಂತೆ ಮಾಡಿದೆ ಎಂದರು.

ದೀಪಾವಳಿ ಸಂದರ್ಭದಲ್ಲಿ ಪಟಾಕಿ ಮಾರಾಟಕ್ಕೆ ರಸ್ತೆ ಬದಿಯಲ್ಲಿ ವರ್ಷಕ್ಕೆ ಒಂದು ಬಾರಿ ಮಾತ್ರ ಕಸ ವಿಲೇವಾರಿ ಮಾಡಲಾಗುತ್ತದೆ. ರಸ್ತೆ ಬದಿಯಲ್ಲಿ ಜೆಸಿಬಿ ಮೂಲಕ ಸ್ವಚ್ಛಗೊಳಿಸಲಾಗುತ್ತೆ. ಅದನ್ನು ಬಿಟ್ಟರೆ ಯಾವುದೇ ಸಂದರ್ಭದಲ್ಲಿ ಕಸ ವಿಲೇವಾರಿಗೆ ನಗರಸಭೆ ಮುಂದಾಗಿಲ್ಲ ಎಂದು ಶಂಕರಪುರದ ನಿವಾಸಿಗಳು ಹೇಳಿದರು.

ಮಳೆಯಿಂದ ಜಲಾವೃತಗೊಂಡಿರುವ ಶಂಕರಪುರ ರಸ್ತೆ

ಶಂಕರಪುರ ರಸ್ತೆಗೆ ಮಳೆ ನೀರಿನ ಕಂಟಕ ದೀಪಾ ನರ್ಸಿಂಗ್ ಹೋಂ ಸುತ್ತಮುತ್ತ, ಶಂಕರಪುರ ಸೇರಿದಂತೆ ವಿವಿಧ ಪ್ರದೇಶದ ಮಳೆ ನೀರು ಇದೇ ರಸ್ತೆಯ ಮೇಲೆ ಹರಿಯುತ್ತದೆ. ಚರಂಡಿ ಸಮರ್ಪಕವಾಗಿ ಇಲ್ಲ ಕಾರಣ ಸಂಪೂರ್ಣ ಜಲಾವೃತವಾಗಿ ವಾಹನ ಸವಾರರು ನಿತ್ಯ ಪರದಾಡುತ್ತಿದ್ದಾರೆ. ಪಟಾಕಿ ಮೈದಾನ ಸೇರಿದಂತೆ ವಿವಿಧೆಡೆ ಕ್ರೀಡಾಕೂಟಗಳು, ಎಕ್ಸಿಬಿಷನ್, ಪಟಾಕಿ ವ್ಯಾಪಾರ ಸೇರಿದಂತೆ ಮನೋರಂಜನೆ ಕಾರ್ಯಕ್ರಮಗಳು ನಡೆಯುವ ಪ್ರಮುಖ ಸ್ಥಳ ಇದಾಗಿದೆ. ಪ್ರತಿನಿತ್ಯ ಸಾವಿರಾರು ಜನ ಸಂಚಾರ ಮಾಡುವ ಪ್ರಮುಖ ರಸ್ತೆ ಇದಾಗಿದೆ. ಮಳೆ ಬಂದರೆ ತೊಂದರೆ ಸಿಲುಕುವುದು ಸಾಮಾನ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.