
ಚಿಕ್ಕಮಗಳೂರು: ಗಾಲ್ಫ್ ಒಂದು ಶಿಸ್ತಿನ ಆಟ. ಇದು ಮನುಷ್ಯನಲ್ಲಿ ಶಿಸ್ತು ಮತ್ತು ಆತ್ಮ ವಿಶ್ವಾಸ ಹೆಚ್ಚಿಸುತ್ತದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಚಿಕ್ಕಮಗಳೂರು ಗಾಲ್ಫ್ ಕ್ಲಬ್ (ಸಿಜಿಸಿ) ಬೆಳ್ಳಿ ಹಬ್ಬ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ನಾನು ಉತ್ತಮ ಗಾಲ್ಫ್ ಆಟಗಾರ ಅಲ್ಲ. ಹಾಕಿ ಆಟಗಾರ. ಆದರೆ, ಗಾಲ್ಫ್ ಬಗ್ಗೆ ಗೊತ್ತಿದೆ. ಗಾಲ್ಫ್ ಕೇವಲ ಆಟ ಮಾತ್ರವಲ್ಲ. ಪರಸ್ಪರ ಸ್ನೇಹ ಬೆಳೆಸುತ್ತದೆ, ಮೌಲ್ಯಗಳನ್ನು ಕಲಿಸುತ್ತದೆ’ ಎಂದರು.
ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಮಾತನಾಡಿ, 'ಗಾಲ್ಫ್ ಆಟ ಉತ್ತಮ ವ್ಯಕ್ತಿತ್ವ ರೂಪಿಸುತ್ತದೆ. ಒಳ್ಳೆಯ ಮನುಷ್ಯ ಆಗಬೇಕೆಂದರೆ ಈ ಆಟದಲ್ಲಿ ತೊಡಗಿಸಿಕೊಂಡರೆ ಸಾಕು. ತನ್ನೊಂದಿಗೆ ತಾನೇ ಆಟವಾಡಿ ಉತ್ತಮ ವ್ಯಕ್ತಿಯಾಗಲು ಇದು ಸಹಾಯವಾಗುತ್ತದೆ' ಎಂದು ಹೇಳಿದರು.
ಸದಾ ಸಂತೋಷ, ಉತ್ಸಾಹ, ಚಟುವಟಿಕೆಯಿಂದ ಇರಬೇಕಾದರೆ ಈ ಆಟ ಪ್ರಮುಖ ಪಾತ್ರ ವಹಿಸುತ್ತದೆ. ಗಾಲ್ಫ್ ಕ್ಲಬ್ ಕಟ್ಟಿರುವ ಸಂಸ್ಥಾಪಕ ಅಧ್ಯಕ್ಷ ಎ.ಬಿ.ಸುದರ್ಶನ್ ಮತ್ತು ತಂಡದ ಸಾಧನೆ ಮರೆಯುವಂತಹದಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಿವೃತ್ತ ಐಪಿಎಸ್ ಅಧಿಕಾರಿ ಪರಶಿವಮೂರ್ತಿ ಮಾತನಾಡಿ, 'ಚಿಕ್ಕಮಗಳೂರಿನಲ್ಲಿ ಗಾಲ್ಫ್ ಕ್ಲಬ್ ಆರಂಭಿಸಿದ್ದೇ ದೊಡ್ಡ ಸಾಹಸ. ಸುದರ್ಶನ್ ಅವರು ಆರಂಭದಲ್ಲಿ ಅನೇಕ ವಿರೋಧ ಮತ್ತು ತೊಂದರೆಗಳನ್ನು ಎದುರಿಸಿದರು. ಆದರೆ, ಛಲ ಬಿಡದೇ ಕ್ಲಬ್ ಕಟ್ಟಿದರು. ನಾನು ಆ ಸಂದರ್ಭದಲ್ಲಿ ಇಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದೆ. ಕ್ಲಬ್‌ಗೆ ನನ್ನ ಸಹಕಾರ ನಿಮಿತ್ತ ಮಾತ್ರ' ಎಂದರು.
ಒಳ್ಳೆಯ ಕೆಲಸ ಮಾಡುವಾಗ ತೊಂದರೆಗಳು ಎದುರಾಗುವುದು ಸಾಮಾನ್ಯ. ಒಳ್ಳೆಯ ಕೆಲಸಕ್ಕೆ ತೊಂದರೆಗಳು ಕ್ಷಣಿಕ ಮಾತ್ರ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, 'ಕಾಫಿನಾಡಾಗಿರುವ ಚಿಕ್ಕಮಗಳೂರನ್ನು ಗಾಲ್ಫ್ ನಾಡಾಗಿಸುವ ಪ್ರಯತ್ನವನ್ನು ಸುದರ್ಶನ್ ಮಾಡಿದ್ದಾರೆ. ಅವರ ತಂಡ ಮಾಡಿರುವ ಕೆಲಸವನ್ನು ಮುಂದಿನ ಪೀಳಿಗೆ ಸದಾ ಸ್ಮರಿಸುತ್ತದೆ' ಎಂದರು.
ಶಾಸಕ ಎಚ್.ಡಿ. ತಮ್ಮಯ್ಯ, ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಎ.ಬಿ.ಸುದರ್ಶನ್, ಕ್ಯಾಪ್ಟನ್ ಎ.ಬಿ.ರವಿಶಂಕರ್ ಉಪಸ್ಥಿತರಿದ್ದರು.
ವೈದ್ಯ ಡಾ. ಜೆ.ಪಿ.ಕೃಷ್ಣೇಗೌಡ, ಉದ್ಯಮಿ ಕಿಶೋರ್ ಕುಮಾರ್ ಹೆಗ್ಡೆ, ಪ್ರಕಾಶ್ ಅಲ್ವಾರಿಸ್ ಅವರನ್ನು ಕ್ಲಬ್ ನಿಂದ ಸನ್ಮಾನಿಸಲಾಯಿತು.
ಚಿಕ್ಕಮಗಳೂರಿನಲ್ಲಿ ಕ್ಲಬ್ ಆರಂಭಿಸಬೇಕು ಎಂದು ಹೊರಟಾಗ ಹಲವು ಸವಾಲುಗಳು ಎದುರಾದವು. ಆಗ ಬೆನ್ನಿಗೆ ನಿಂತವರು ಹಲವಾರು. ಅವರನ್ನು ಎಂದಿಗೂ ಮರೆಯುವಂತಿಲ್ಲ.ಎ.ಬಿ.ಸುದರ್ಶನ್ ಸಂಸ್ಥಾಪಕ ಅಧ್ಯಕ್ಷ
ಸುದರ್ಶನ್ ಪ್ರತಿಮೆ ಅನಾವರಣ
ಬೆಳ್ಳಿ ಹಬ್ಬದ ನೆನಪಿಗಾಗಿ ಕ್ಲಬ್ ಆವರಣದಲ್ಲಿ ನಿರ್ಮಿಸಿರುವ ಎ.ಬಿ.ಸುದರ್ಶನ್ ಅವರ ಪ್ರತಿಮೆಯನ್ನು ಕೆ.ಜೆ.ಜಾರ್ಜ್ ಅನಾವರಣಗೊಳಿಸಿದರು. 82 ಎಕರೆ ಜಾಗದಲ್ಲಿ 25 ವರ್ಷಗಳ ಹಿಂದೆ ಕ್ಲಬ್ ಆರಂಭಿಸಿ ಇಷ್ಟು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಬಂದಿರುವ ಅವರ ಸಾಧನೆಯನ್ನು ಮುಂದಿನ ಪೀಳಿಗೆಗೆ ಸದಾ ನೆನಪಿನಲ್ಲಿ ಉಳಿಸಲು ಪ್ರತಿಮೆ ಸ್ಥಾಪಿಸಲಾಗಿದೆ ಎಂದು ಕ್ಲಬ್ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.