
ಚಿಕ್ಕಮಗಳೂರು: ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಆರಂಭಕ್ಕೆ ತೊಡಕಾಗಿದ್ದ ಜಾಗದ ವಿವಾದ ಕೊನೆಗೂ ಇತ್ಯರ್ಥಗೊಂಡಿದೆ. ಆದರೆ, ಇನ್ನೂ ಕಾಮಗಾರಿ ಆರಂಭವಾಗಿಲ್ಲ. ಈಗಾಗಲೇ ಕಂದಾಯ ಇಲಾಖೆ ನಿರ್ಮಿಸಿ ಅರ್ಧಕ್ಕೆ ನಿಲ್ಲಿಸಿರುವ ಕಟ್ಟಡಕ್ಕೆ ತಗುಲಿರುವ ವೆಚ್ಚ ಭರಿಸಬೇಕು ಎಂಬ ಷರತ್ತು ಸಡಿಲಗೊಳಿಸಲು ಉನ್ನತ ಶಿಕ್ಷಣ ಇಲಾಖೆ ಕೋರಿದೆ.
ಕಡೂರು ರಸ್ತೆಯ ಪವಿತ್ರ ವನ ಮುಂಭಾಗದ ರಸ್ತೆಯಲ್ಲಿರುವ ಗೇಟ್ ವೇ ಹೋಟೆಲ್‌ನಿಂದ ಮುಂದೆ ಸಾಗಿದರೆ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡು ಪಾಳು ಬಿದ್ದಿರುವ ಸ್ಥಿತಿಯಲ್ಲಿ ಕಟ್ಟಡವೊಂದಿದೆ. 2017ರಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಆರಂಭಿಸಿದ್ದ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಅದು ಈಗ ಪಾಳುಬಿದ್ದ ಸ್ಥಿತಿಯಲ್ಲಿದೆ.
ಕುರುವಂಗಿ ಗ್ರಾಮದ ಸರ್ವೆ ನಂಬರ್ 42ರ ಈ ಜಾಗ ವ್ಯಕ್ತಿಯೊಬ್ಬರಿಗೆ ಮಂಜೂರಾಗಿದ್ದ ಕಾರಣಕ್ಕೆ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು. ಜಾಗದ ವಿವಾದ ನ್ಯಾಯಾಲಯದ ಅಂಗಳಕ್ಕೆ ಹೋಗಿದ್ದರಿಂದ ಜಿಲ್ಲಾಧಿಕಾರಿ ಕಚೇರಿ ಕಟ್ಟಡವನ್ನು ದಂಟರಮಕ್ಕಿ ಕೆರೆ ಬಳಿ ನಿರ್ಮಾಣ ಮಾಡಲಾಗುತ್ತಿದೆ. ಆದ್ದರಿಂದ ನಿರ್ಮಾಣ ಹಂತದಲ್ಲಿದ್ದ ಹಳೇ ಕಟ್ಟಡ ಹಾಗೇ ಉಳಿದಿದೆ.
ಜಾಗ ಮರಳಿ ಪಡೆಯಲು ಜಿಲ್ಲಾಡಳಿತ ಪ್ರಯತ್ನಿಸಿತು. ನ್ಯಾಯಾಲಯದ ಮೆಟ್ಟಿಲೇರಿದ್ದ ವ್ಯಕ್ತಿಗೆ ಪರ್ಯಾಯವಾಗಿ 6 ಎಕರೆ ಜಾಗ ನೀಡಿ ವಿವಾದವನ್ನು ಜಿಲ್ಲಾಧಿಕಾರಿ 2024ರಲ್ಲಿ ಅಂತ್ಯಗೊಳಿಸಿದರು. ಕಟ್ಟಡ ಸೇರಿ 15 ಎಕರೆ ಜಾಗವನ್ನು ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ನಿರ್ಮಾಣಕ್ಕೆ ಉನ್ನತ ಶಿಕ್ಷಣ ಇಲಾಖೆಗೆ ಖಾತೆ ವರ್ಗಾವಣೆಯನ್ನೂ ಮಾಡಲಾಗಿದೆ.
ಆದರೆ, ಈಗಾಗಲೇ ನಿರ್ಮಾಣವಾಗಿ ಅರ್ಧಕ್ಕೆ ನಿಂತಿರುವ ಕಟ್ಟಡಕ್ಕೆ ತಗುಲಿರುವ ವೆಚ್ಚವನ್ನು ಕಂದಾಯ ಇಲಾಖೆಗೆ ಭರಿಸಬೇಕು ಎಂಬ ಷರತ್ತನ್ನು ಜಿಲ್ಲಾಧಿಕಾರಿ ವಿಧಿಸಿದ್ದಾರೆ. ಈ ಷರತ್ತು ಪಾಲಿಸಲು ಹಿಂದೇಟು ಹಾಕಿರುವ ಉನ್ನತ ಶಿಕ್ಷಣ ಇಲಾಖೆ ವಿನಾಯಿತಿ ಕೇಳಿದರು.
ಕಡೂರು ಶಾಸಕ ಕೆ.ಎಸ್.ಆನಂದ್ ಅವರು ಬೆಳಗಾವಿ ಅಧಿವೇಶನದಲ್ಲಿ ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ ಅವರು ನೀಡಿರುವ ಲಿಖಿತ ಉತ್ತರದಲ್ಲಿ ಇದನ್ನು ಉಲ್ಲೇಖಿಸಿದ್ದಾರೆ.
ಕುರುವಂಗಿ, ಹಿರೇಮಗಳೂರು ಸರ್ವೆ ನಂಬರ್‌ಗಳಲ್ಲಿ 15 ಎಕರೆ ಜಾಗ ಜಾಗದ ವಿವಾದ ಇತ್ಯರ್ಥಗೊಳಿಸಿರುವ ಜಿಲ್ಲಾಡಳಿತ 2024ರಲ್ಲೇ ಉನ್ನತ ಶಿಕ್ಷಣ ಇಲಾಖೆಗೆ ಜಾಗ ಹಸ್ತಾಂತರ
2012ರಿಂದ ಕಾದಿರುವ ಕಾಲೇಜು ಚಿಕ್ಕಮಗಳೂರು ಜಿಲ್ಲೆಯ ಜನರ ಬಹು ದಿನಗಳ ಬೇಡಿಕೆಯಾಗಿದ್ದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ 2012ರಲ್ಲಿ ಸರ್ಕಾರ ಒಪ್ಪಿಗೆ ನೀಡಿತ್ತು. ಸಿವಿಲ್ ಮೆಕ್ಯಾನಿಕಲ್ ಎಲೆಕ್ಟ್ರಾನಿಕ್ ಆ್ಯಂಡ್ ಕಮ್ಯುನಿಕೇಷನ್ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ ಕೋರ್ಸ್‌ಗಳನ್ನು 2013–14ನೇ ಸಾಲಿನಲ್ಲಿ ಆರಂಭಿಸಲು ಸರ್ಕಾರ ತಿಳಿಸಿತ್ತು. ಎಐಸಿಟಿಇ (ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಷನ್) ನಿಯಮಾವಳಿ ಅನುಸಾರ ಬೋಧಕ ಮತ್ತು ಬೋಧಕೇತರ ಹುದ್ದೆಗಳು ಸೇರಿದಂತೆ ಒಟ್ಟು 211 ಹುದ್ದೆಗಳ ಭರ್ತಿಗೂ ಆದೇಶ ಹೊರಡಿಸಿತ್ತು. ಕಟ್ಟಡ ಇಲ್ಲದ ಕಾರಣ ಈಗಿನ ಪಾಲಿಟೆಕ್ನಿಕ್ ಕಾಲೇಜಿನಲ್ಲಿಯೇ ಕಾಲೇಜು ಆರಂಭಿಸಲು ಚಿಂತನೆ ನಡೆದಿತ್ತು. ಆದರೆ ಇದಕ್ಕೆ ಎಐಸಿಟಿಇ ಒಪ್ಪಿಗೆ ನೀಡಲಿಲ್ಲ. ಕಟ್ಟಡ ಇಲ್ಲದೆ ಅನುಮೋದನೆ ನೀಡಲು ನಿರಾಕರಿಸಿತ್ತು. ಕಟ್ಟಡಕ್ಕೆ ಜಾಗ ನಿಗದಿಯಾಗದ ಕಾರಣ ನಿರ್ಮಾಣ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.