ADVERTISEMENT

ವಿದ್ಯಾರ್ಥಿಗಳ ಪ್ರತಿಭೆ, ಆಸಕ್ತಿಗೆ ತಕ್ಕಂತೆ ಪ್ರೋತ್ಸಾಹ ನೀಡಿ: ಶಾಸಕ ತಮ್ಮಯ್ಯ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 2:41 IST
Last Updated 15 ಫೆಬ್ರುವರಿ 2026, 2:41 IST
ಚಿಕ್ಕಮಗಳೂರು ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಯೋಧ ನಮನ ಕಾರ್ಯಕ್ರಮದಲ್ಲಿ ಪುಲ್ವಾಮ ದಾಳಿಯಲ್ಲಿ ಮಡಿದ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲಾಯಿತು
ಚಿಕ್ಕಮಗಳೂರು ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಯೋಧ ನಮನ ಕಾರ್ಯಕ್ರಮದಲ್ಲಿ ಪುಲ್ವಾಮ ದಾಳಿಯಲ್ಲಿ ಮಡಿದ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲಾಯಿತು   

ಚಿಕ್ಕಮಗಳೂರು: ವಿದ್ಯಾರ್ಥಿಗಳ ಪ್ರತಿಭೆ, ಆಸಕ್ತಿಗೆ ತಕ್ಕಂತೆ ಪೋಷಕರು ಮತ್ತು ಉಪನ್ಯಾಸಕರು ಪ್ರೋತ್ಸಾಹ ನೀಡಬೇಕಾದ ಅಗತ್ಯ ಇದೆ ಎಂದು ಶಾಸಕ ಎಚ್.ಡಿ ತಮ್ಮಯ್ಯ ಹೇಳಿದರು.

ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಸಿರಿ ಫೌಂಡೇಷನ್ ಹಾಗೂ ಕಾಲೇಜಿನ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಯೋಧ ನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪುಲ್ವಾಮ ದಾಳಿಯಲ್ಲಿ ಮಡಿದ ಯೋಧರಿಗೆ ಗೌರವ ಸಲ್ಲಿಸಿದ ಅವರು, ವಿದ್ಯೆಯನ್ನು ಉದ್ಯೋಗಕ್ಕಾಗಿ ಪಡೆಯದೆ ಸಂಸ್ಕಾರ, ಸಂಸ್ಕೃತಿ, ಉತ್ತಮ ಭವಿಷ್ಯಕ್ಕೆ ಶಿಕ್ಷಣ ಪಡೆದುಕೊಳ್ಳಬೇಕು. ಜೀವದ ಹಂಗು ತೊರೆದು ದೇಶ ರಕ್ಷಣೆಯಲ್ಲಿ ತೊಡಗಿರುವ ಯೋಧರ ಕರ್ತವ್ಯ ಪ್ರಶಂಸನೀಯ ಎಂದರು.

ADVERTISEMENT

ಪ್ರಪಂಚದಲ್ಲೇ ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತವು ಧರ್ಮ, ಸಂಸ್ಕಾರದಿಂದ ಬದುಕಿ ಶಾಂತಿಯಿಂದ ಜನತೆ ಜೀವನ ನಡೆಸುವ ಮೂಲಕ ಯಶಸ್ಸುಗಳಿಸಿರುವ ಜಾತ್ಯತೀತ ದೇಶವಾಗಿದೆ ಎಂದು ತಿಳಿಸಿದರು.

ಸಂಪ್ರದಾಯವಾದಿಗಳು ಸೃಷ್ಟಿಸಿದ ವರ್ಣಭೇದ ನೀತಿ, ಜಾತಿ ‌ಮಧ್ಯೆ ವಿಷಬೀಜ ಬಿತ್ತಿ, ಬಡವ ಬಲ್ಲಿದ, ಮೇಲು-ಕೀಳು ಮಾಡಿದ್ದನ್ನು 12ನೇ ಶತಮಾನದಲ್ಲಿಯೇ ಜಗಜ್ಯೋತಿ ಬಸವಣ್ಣನವರು ಜಾತಿ, ವರ್ಣಭೇದನೀತಿ ವಿರೋಧಿಸಿ, ಲಿಂಗಾಯತ ಧರ್ಮ ಸ್ಥಾಪಿಸಿದರು ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಯೋಧ ಮಂಜುನಾಥ್ ಸಿ.ಎಸ್.ಮಾತನಾಡಿ, ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರ ಪೂರ್ಣ ಚಿತ್ರಣ ಹಾಗೂ ದಾಳಿ ಪೂರ್ವದ ಪರಿಸ್ಥಿತಿ ಹಾಗೂ ನಂತರದ ವಿಷಯಗಳನ್ನು ತಿಳಿಸಿದರು.

ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಮೂಡಲಗಿರಿಯಯ್ಯ ಮಾತನಾಡಿ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಹಾಗೂ ಕಟ್ಟಡ ನಿರ್ಮಾಣಕ್ಕೆ ಶಾಸಕ ಎಚ್.ಡಿ.ತಮ್ಮಯ್ಯ ಅವರ ಬೆಂಬಲವನ್ನು ಕೋರಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಐಸಿರಿ ಫೌಂಡೇಷನ್ ಅಧ್ಯಕ್ಷ ರೋಹನ್ ಭಾಗರ್ವಪುರಿ, ಐಕ್ಯೂಎಸಿ ಸಂಚಾಲಕ ದೀಕ್ಷಿತ್‌ಕುಮಾರ್, ಕೆ.ಎಂ.ಅನುಷಾ, ಉಪನ್ಯಾಸಕಿ ಮಾಲಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.