ಚಿಕ್ಕಮಗಳೂರು: ಜಿಲ್ಲೆಯಲ್ಲಿ ಎಲ್ಲೆಡೆ ಹೋಂಸ್ಟೇ ಮತ್ತು ರೆಸಾರ್ಟ್‌ಗಳು ತಲೆ ಎತ್ತುತ್ತಿದ್ದರೆ, ಮತ್ತೊಂದೆಡೆ ಸದ್ಯ ಇರುವ ಹೋಂಸ್ಟೆಗಳು ಅತಿಥಿಗಳ ಬರಗಾಲ ಎದುರಿಸುತ್ತಿವೆ. ಎರಡು ತಿಂಗಳಿನಿಂದ ಈಚೆಗೆ ಅತಿಥಿಗಳು ಕಡಿಮೆಯಾಗಿದ್ದು, ನಿರ್ವಹಣೆ ಮಾಡಲಾಗದೆ ಹೋಂಸ್ಟೇ ಮಾಲೀಕರು ಕಂಗಾಲಾಗಿದ್ದಾರೆ.
ಜಿಲ್ಲೆಯ ಮಲೆನಾಡು ಭಾಗದಲ್ಲಿ ಅದರಲ್ಲೂ ಮುಳ್ಳಯ್ಯನಗಿರಿ ಸುತ್ತಮುತ್ತ ಹೋಂಸ್ಟೇ ಮತ್ತು ರೆಸಾರ್ಟ್‌ಗಳ ಸಂಖ್ಯೆ ಹೆಚ್ಚಾಗುತ್ತಿವೆ. ಕೈಮರ, ಮಲ್ಲೇನಹಳ್ಳಿ ರಸ್ತೆಯಲ್ಲಿ ಸಾಗಿದರೆ ಹೊಸದಾಗಿ ನಿರ್ಮಾಣವಾಗುತ್ತಿರುವ ರೆಸಾರ್ಟ್‌ಗಳ ಸಂಖ್ಯೆ ಎಣಿಕೆಗೆ ಸಿಗದಷ್ಟಾಗಿವೆ.
ಈ ನಡುವೆ ಮುಳ್ಳಯ್ಯನಗಿರಿ ಭಾಗಕ್ಕೆ ಪ್ರವಾಸಿಗರ ಭೇಟಿಗೆ ಇದ್ದ ಮುಕ್ತ ಅವಕಾಶವನ್ನು ಸೆಪ್ಟೆಂಬರ್ 1ರಿಂದ ನಿಯಂತ್ರಣ ಮಾಡಲಾಗಿದೆ. ಗಿರಿಭಾಗದಲ್ಲಿ ಆಗುತ್ತಿದ್ದ ವಾಹನ ದಟ್ಟಣೆ ನಿವಾರಿಸಲು ಜಿಲ್ಲಾಡಳಿತ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಮಾಡಿದೆ. ಆ ಬಳಿಕ ಗಿರಿಭಾಗದಲ್ಲಿ ದಟ್ಟಣೆ ಸುಧಾರಣೆಯೂ ಆಗಿದೆ.
ವಾರಾಂತ್ಯ ಮತ್ತು ಸಾಲು ಸಾಲು ರಜೆಗಳ ಸಂದರ್ಭದಲ್ಲಿ ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ, ಮಾಣಿಕ್ಯಧಾರ, ಗಾಳಿಕೆರೆ, ಝರಿ ಜಲಪಾತ, ಹೊನ್ನಮ್ಮನಹಳ್ಳ ವೀಕ್ಷಣೆಗೆ ಜನ ಮುಗಿ ಬೀಳುವುದು ಸಾಮಾನ್ಯ. ಲೆಕ್ಕವಿಲ್ಲದಷ್ಟು ವಾಹನಗಳು ಗಿರಿ ಏರಿ ಉಂಟಾಗುತ್ತಿದ್ದ ದಟ್ಟಣೆ ನಡುವೆ ಸಿಲುಕಿ ಪ್ರವಾಸಿಗರೂ ನರಳುತ್ತಿದ್ದರು.
ಇದನ್ನು ತಪ್ಪಿಸಲು ಏಕಕಾಲಕ್ಕೆ 600 (ದಿನಕ್ಕೆ 1,200) ವಾಹನಗಳಿಗಷ್ಟೇ ಅವಕಾಶ ನೀಡಲು ಜಿಲ್ಲಾಡಳಿತ ನಿರ್ಧರಿಸಿತು. ಈ ನಿರ್ಧಾರ ಕೈಗೊಂಡ ಬಳಿಕ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ ಎನ್ನುತ್ತಾರೆ ಹೋಂಸ್ಟೇ ಮಾಲೀಕರು.
‘ಜಿಲ್ಲಾಡಳಿತ ಮುಳ್ಳಯ್ಯನಗಿರಿ ದಟ್ಟಣೆ ಉಂಟಾಗದಂತೆ ಕ್ರಮ ಕೈಗೊಂಡಿದೆ. ಆದರೆ, ಪ್ರವಾಸಿಗರಿಗೆ ಚಿಕ್ಕಮಗಳೂರು ಎಂದರೆ ಮುಳ್ಳಯ್ಯನಗಿರಿ ಎಂಬಂತಾಗಿದೆ. ಆದ್ದರಿಂದ ನಿರ್ಬಂಧ ಇದೆ ಎಂಬ ಕಲ್ಪನೆಯಲ್ಲಿ ಪ್ರವಾಸಿಗರು ಚಿಕ್ಕಮಗಳೂರು ಕಡೆಗೆ ಪ್ರವಾಸವನ್ನೇ ಕಡಿಮೆ ಮಾಡಿದ್ದಾರೆ’ ಎಂಬುದು ಅವರ ಅಭಿಪ್ರಾಯ.
‘ಕೊಡಗು, ಸಕಲೇಶಪುರ ಭಾಗಕ್ಕೆ ಹೆಚ್ಚು ಪ್ರವಾಸಿಗರು ಹೋಗುತ್ತಿದ್ದಾರೆ. ಇಡೀ ವಾರ ಒಬ್ಬರೂ ಅತಿಥಿಗಳಿಲ್ಲದ ದಿನಗಳನ್ನು ಈಗ ನೋಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಈ ಪರಿಸ್ಥಿತಿ ಎದುರಾಗಿರುವುದು ಇದೇ ಮೊದಲು. ಹೋಂಸ್ಟೇಗಳ ನಿರ್ವಹಣೆಯೇ ಈಗ ಕಷ್ಟವಾಗಿದೆ’ ಎಂದು ಅವರು ಹೇಳುತ್ತಾರೆ.
ಮುಳ್ಳಯ್ಯನಗಿರಿ ಭಾಗಕ್ಕೆ ಪ್ರವಾಸಿಗರ ಸಂಖ್ಯೆಯನ್ನು ನಿಯಂತ್ರಿಸಿದರೆ ಇತರೆಡೆಗಳಿಗೆ ಪ್ರವಾಸಿಗರು ಬರಲಿದ್ದಾರೆ ಎಂದು ಜಿಲ್ಲಾಡಳಿತ ಅಂದಾಜಿಸಿತ್ತು. ಆದರೆ, ಇಡೀ ಜಿಲ್ಲೆಗೆ ಪ್ರವಾಸಿಗರು ಕಡಿಮೆಯಾಗಿದ್ದಾರೆ. ಇದು ಜಿಲ್ಲೆಯ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಎಂದು ಹೋಂಸ್ಟೇ ಮಾಲೀಕ ಸಂಜಯಗೌಡ ಬೇಸರ ವ್ಯಕ್ತಪಡಿಸುತ್ತಾರೆ.