ADVERTISEMENT

ಚಿಕ್ಕಮಗಳೂರು | ಕಕ್ಷಿದಾರರನ್ನು ವಕೀಲರು ಅನ್ನದಾತರೆಂದು ಭಾವಿಸಿ: ಎಚ್.ಪಿ. ಸಂದೇಶ್

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 6:33 IST
Last Updated 8 ಡಿಸೆಂಬರ್ 2025, 6:33 IST
ನಗರದ ಟಿ.ಎಂ.ಎಸ್. ಕಾಲೇಜಿನ ರೋಟರಿ ಸಭಾಂಗಣದಲ್ಲಿ ಶನಿವಾರ ಚಿಕ್ಕಮಗಳೂರು ವಕೀಲರ ಸಂಘದಿಂದ ಆಯೋಜಿಸಿದ್ಧ ವಕೀಲರ ದಿನಾಚರಣೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ.
ನಗರದ ಟಿ.ಎಂ.ಎಸ್. ಕಾಲೇಜಿನ ರೋಟರಿ ಸಭಾಂಗಣದಲ್ಲಿ ಶನಿವಾರ ಚಿಕ್ಕಮಗಳೂರು ವಕೀಲರ ಸಂಘದಿಂದ ಆಯೋಜಿಸಿದ್ಧ ವಕೀಲರ ದಿನಾಚರಣೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ.   

ಚಿಕ್ಕಮಗಳೂರು: ‘ಕಕ್ಷಿದಾರರನ್ನು ವಕೀಲರು ಅನ್ನದಾತರೆಂದು ಭಾವಿಸಬೇಕು. ವೃತ್ತಿಯಲ್ಲಿ ಸಾರ್ಥಕತೆ ಕಂಡುಕೊಂಡು ನಿಷ್ಠೆ, ಪ್ರಾಮಾಣಿಕತೆಯಿಂದ ವಾದ ಮಂಡಿಸುವ ಮುಖೇನ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಲು ಶ್ರಮಿಸಬೇಕು’ ಎಂದು ಹೈಕೋರ್ಟ್‌ನ ನ್ಯಾಯಾಧೀಶ ಎಚ್.ಪಿ. ಸಂದೇಶ್ ಹೇಳಿದರು.

ನಗರದ ಟಿ.ಎಂ.ಎಸ್. ಕಾಲೇಜಿನ ರೋಟರಿ ಸಭಾಂಗಣದಲ್ಲಿ ಶನಿವಾರ ಚಿಕ್ಕಮಗಳೂರು ವಕೀಲರ ಸಂಘದಿಂದ ಆಯೋಜಿಸಿದ್ದ ‘ವಕೀಲರ ದಿನಾಚರಣೆ ಹಾಗೂ ಬಹುಮಾನ ವಿತರಣಾ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ವಕೀಲರ ಮೇಲೆ ನಂಬಿಕೆ, ವಿಶ್ವಾಸವನ್ನಿಟ್ಟು ಕಕ್ಷಿದಾರರು ಬರುತ್ತಾರೆ. ಆ ವಿಶ್ವಾಸಕ್ಕೆ ಚ್ಯುತಿ ಬರದಂತೆ ಕಾರ್ಯನಿರ್ವಹಿಸಬೇಕು. ಪ್ರಕರಣದಲ್ಲಿ ಸೋಲು ಅಥವಾ ಗೆಲುವು ಸಾಮಾನ್ಯ. ಆದರೆ, ವಕೀಲರು ಪ್ರಯತ್ನವಿಲ್ಲದೇ ಸೋಲನ್ನು ಒಪ್ಪಿಕೊಳ್ಳಬಾರದು. ಕಕ್ಷಿದಾರರು ನೀಡಿದ ಶುಲ್ಕಕ್ಕೆ ಸತ್ಯ, ನಿಷ್ಠೆಯಿಂದ ವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

ಸಮಾಜದ ಬದಲಾವಣೆ, ಒಳಿತನ್ನು ಬಯಸುವ ವೃತ್ತಿ ವಕೀಲರದು. ರಾಷ್ಟ್ರದ ಏಳಿಗೆಗಾಗಿ ಗಾಂಧೀಜಿ, ನೆಹರೂ, ಅಂಬೇಡ್ಕರ್, ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ರಾಜ್ಯದಲ್ಲಿ ಜನರಿಂದ ಪ್ರಥಮವಾಗಿ ಚುನಾಯಿತರಾದ ಕೆಂಗಲ್ ಹನುಮಂತಯ್ಯ ಸೇರಿದಂತೆ ಅನೇಕ ಸಚಿವರು ವಕೀಲರಾದ ಮೇಲೆ ದೇಶದಲ್ಲಿ ಉನ್ನತ ಸ್ಥಾನಮಾನ ಗಳಿಸಿದ್ದಾರೆ ಎಂದು ತಿಳಿಸಿದರು.

ದೀಪ ಉರಿದು ಬೆಳಕು ನೀಡಿದಂತೆ, ವಕೀಲರು ಕಕ್ಷಿದಾರರ ಹಿತ ಕಾಪಾಡಲು ಜವಾಬ್ದಾರಿ ಹೊರಬೇಕು. ನೊಂದವರ ಹಕ್ಕಿಗೆ ಚ್ಯುತಿ, ದೌರ್ಜನ್ಯಕ್ಕೆ ಒಳಗಾದಾಗ ದೀಪದ ಬೆಳಕಿನಂತೆ ದಾರಿ ತೋರಿಸಬೇಕು. ಪೂರ್ವಿಕರು ಉಳಿಸಿದ ವಕೀಲ ವೃತ್ತಿಗೆ ಆಧುನಿಕ ಜಗತ್ತಿನಲ್ಲಿ ಸ್ವಾರ್ಥಕ್ಕೆ ಬಳಸುವುದು ಸರಿಯಲ್ಲ. ಈ ಬಗ್ಗೆ ವಕೀಲರು ತಮ್ಮಲ್ಲಿ ಅವಲೋಕನ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ರಾಷ್ಟ್ರದ ಸ್ವಾತಂತ್ರ್ಯ ಹೋರಾಟದಲ್ಲಿ ಜನಸಾಮಾನ್ಯರು ಸೇರಿದಂತೆ ಅನೇಕ ವಕೀಲ ಬಾಂಧವರು ದೇಶದ ಹಿತಕ್ಕಾಗಿ ಸ್ವಾರ್ಥ, ಹಣಕ್ಕಾಗಿ ಆಸೆಪಡದೆ ದಿನಪೂರ್ತಿ ಚಳವಳಿಯಲ್ಲಿ ಭಾಗಿಯಾಗಿ ಹೋರಾಟ ಮಾಡಿದ್ದಾರೆ. ಹೀಗಾಗಿ ಜನರ ವೇದನೆ ಕೇಳಬೇಕು. ನಂಬಿಕೆಯಿಟ್ಟು ನ್ಯಾಯಾಲಯಕ್ಕೆ ಬರುವ ಕಕ್ಷಿದಾರರಿಗೆ ಸಮರ್ಪಕ ನ್ಯಾಯ ಒದಗಿಸುವುದು ಆದ್ಯಕರ್ತವ್ಯ ಎಂದರು.

ಇಂದಿನ ಯುವ ವಕೀಲರು ಹಣಕ್ಕಾಗಿ ಆಸೆಪಡದೆ ಕೆಲವು ವರ್ಷಗಳು ನಿರಂತರವಾಗಿ ಪುಸ್ತಕ ಪ್ರೇಮ, ಹಿರಿಯ ವಕೀಲರ ಮಾರ್ಗದರ್ಶನದಲ್ಲಿ ಜ್ಞಾನಾರ್ಜನೆ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಮನುಷ್ಯ ಎಂದಿಗೂ ಲಕ್ಷ್ಮಿ ಹಿಂಬಾಲಿಸದೆ, ಸರಸ್ವತಿಯನ್ನು ಹಿಂಬಾಲಿಸಬೇಕು. ಎಲ್ಲಿ ಸರಸ್ವತಿ ನೆಲೆಸಿರುವಳೋ, ಅಲ್ಲಿ ಲಕ್ಷ್ಮಿ ಕೃಪ ಕಟಾಕ್ಷ ಸದಾ ಇರಲಿದೆ ಎಂದು ಕಿವಿಮಾತು ಹೇಳಿದರು.

ಪರಿಪಕ್ವತೆ, ಚಾಕಚಕ್ಯತೆ, ಕಾನೂನು ತಿಳಿವಳಿಕೆ, ಪುಸ್ತಕಗಳ ಅಭ್ಯಾಸದಿಂದ ವಕೀಲರು ಸಮರ್ಥರಾಗುತ್ತಾರೆ. ಕಕ್ಷಿದಾರರು ನ್ಯಾಯಾಲಯಕ್ಕೆ ಮೋಜು, ಮಸ್ತಿಗಾಗಿ ಬರುವುದಿಲ್ಲ. ನೋವು, ದೌರ್ಜನ್ಯ, ಅನ್ಯಾಯವವನ್ನು ಮೆಟ್ಟಿನಿಲ್ಲಲು ವಕೀಲರ ಹತ್ತಿರ ಧಾವಿಸುತ್ತಾರೆ. ಇದನ್ನು ಸವಾಲಾಗಿ ವಕೀಲರು ಸ್ವೀಕರಿಸಿ ನ್ಯಾಯ ಬದ್ಧವಾಗಿ ವಾದ ಮಂಡಿಸಬೇಕು ಎಂದು ಎಚ್.ಪಿ. ಸಂದೇಶ್ ತಿಳಿಸಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜೇಶ್ವರಿ ಎನ್. ಹೆಗಡೆ ಮಾತನಾಡಿ, ವಕೀಲ ವೃತ್ತಿಯಲ್ಲಿ ಶಿಸ್ತು, ಸಮಯಪ್ರಜ್ಞೆ ಮತ್ತು ಪರಿಶ್ರಮದಿಂದ ಕೆಲಸ ನಿರ್ವಹಿಸಿದಾಗ ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಸಾಧ್ಯ. ಹಿರಿಯ ವಕೀಲರ ಸನ್ಮಾರ್ಗದಲ್ಲಿ ಸಾಗಿ ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಂಡರೆ ನಾಡಿನ ಶ್ರೇಷ್ಠ ವಕೀಲರಾಗಿ ಸಾಧನೆ ಮಾಡಬಹುದು ಎಂದರು.

ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಅನಿಲ್‌ಕುಮಾರ್ ಮಾತನಾಡಿ, ಬಿಡುವಿಲ್ಲದ ವಕೀಲ ವೃತ್ತಿಯಲ್ಲಿ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಖುಷಿಯ ಸಂಗತಿ. ಜೊತೆಗೆ ವೃತ್ತಿಯಲ್ಲಿ ನೊಂದವರ ಬಾಳಿಗೆ ಅಂಬೇಡ್ಕರ್ ಆಶಯದಂತೆ ನ್ಯಾಯ ಒದಗಿಸುವ ಸದ್ಗುಣ ಬೆಳೆಸಿಕೊಂಡರೆ ಉತ್ತಮ ವಕೀಲರಾಗಿ ಹೊರಹೊಮ್ಮಲು ಸಾಧ್ಯ ಎಂದರು.

ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಕೀಲರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಕೀಲರ ಸಂಘದ ಅಧ್ಯಕ್ಷ ಡಿ.ಬಿ. ಸುಜೇಂದ್ರ ವಹಿಸಿದ್ದರು. ವೇದಿಕೆಯಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಕೆ.ಎಸ್. ಶರತ್‌ಚಂದ್ರ, ಖಜಾಂಚಿ ಡಿ.ಬಿ. ದೀಪಕ್, ಸಹ ಕಾರ್ಯದರ್ಶಿ ಎಂ.ವಿ. ಪ್ರಿಯ ದರ್ಶಿನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.