ADVERTISEMENT

ಚಿಕ್ಕಮಗಳೂರು|ಪ್ರವಾಸಿ ತಾಣಗಳಿಗೆ ರಾಜ್ಯ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್ ನಿರೀಕ್ಷೆ

ಪ್ರವಾಸಿಗರ ಮೆಚ್ಚಿನ ತಾಣಗಳಿಗೆ ರಸ್ತೆಗಳಿಲ್ಲ: ಅನುದಾನಕ್ಕೆ ಸ್ಥಳೀಯರ ಒತ್ತಾಯ

ವಿಜಯಕುಮಾರ್ ಎಸ್.ಕೆ.
Published 4 ಜನವರಿ 2026, 5:13 IST
Last Updated 4 ಜನವರಿ 2026, 5:13 IST
<div class="paragraphs"><p>ಮೂಡಿಗೆರೆ ತಾಲ್ಲೂಕಿನ ರಾಣಿಝರಿ ಪ್ರವಾಸಿ ತಾಣಕ್ಕೆ ತೆರಳುವ ರಸ್ತೆ ಸಂಪೂರ್ಣ ಹಾಳಾಗಿರುವುದು </p></div>

ಮೂಡಿಗೆರೆ ತಾಲ್ಲೂಕಿನ ರಾಣಿಝರಿ ಪ್ರವಾಸಿ ತಾಣಕ್ಕೆ ತೆರಳುವ ರಸ್ತೆ ಸಂಪೂರ್ಣ ಹಾಳಾಗಿರುವುದು

   

ಪ್ರಜಾವಾಣಿ ಚಿತ್ರ(ಸಂಗ್ರಹ)

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಎಂದ ಕೂಡಲೇ ಪ್ರವಾಸಿ ತಾಣ ಎಂಬ ಕಲ್ಪನೆ ಎಲ್ಲರಲ್ಲಿದೆ. ಆದರೆ, ಇಲ್ಲಿನ ಪ್ರವಾಸಿ ತಾಣಗಳು ಮೂಲ ಸೌಕರ್ಯ ಇಲ್ಲದೆ ಬಳಲುತ್ತಿವೆ. ಈ ವರ್ಷದ ರಾಜ್ಯ ಬಜೆಟ್‌ನಲ್ಲಿ ಹಲವು ಪ್ರವಾಸೋದ್ಯಮ ಅಭಿವೃದ್ಧಿ ಹೆಚ್ಚಿನ ಅನುದಾನ ದೊರಕಬೇಕು ಎಂಬ ಒತ್ತಾಸೆ ಜನರಲ್ಲಿದೆ.

ADVERTISEMENT

ಪ್ರವಾಸೋದ್ಯಮ ಅಭಿವೃದ್ಧಿಗೆ ಜಿಲ್ಲೆಯಲ್ಲಿ ಸಾಕಷ್ಟು ಅವಕಾಶ ಇದೆ. ಆದರೆ, ಪ್ರವಾಸಿ ತಾಣಗಳಿಗೆ ಹೋಗಲು ಸದ್ಯಕ್ಕೆ ರಸ್ತೆಗಳೇ ಇಲ್ಲವಾಗಿವೆ. ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ, ರಾಣಿಝರಿ, ಕ್ಯಾತನಮಕ್ಕಿ ರೀತಿಯ ನಿಸರ್ಗ ತಾಣಗಳಿಗೆ ತೆರಳಲು ಪ್ರವಾಸಿಗರು ಕಷ್ಟಪಡಬೇಕಿದೆ. ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಿ ಸರ್ಕಾರಕ್ಕೆ ವರಮಾನ ತಂದುಕೊಳ್ಳಲು ಸಾಕಷ್ಟು ಅವಕಾಶ ಇದೆ. ಬೇಕಿರುವ ಸಣ್ಣಪುಟ್ಟ ಮೂಲಸೌಕರ್ಯ ಒದಗಿಸಲು ಚಿಕ್ಕಮಗಳೂರು ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂಬುದು ಜಿಲ್ಲೆಯ ಜನರ ಒತ್ತಾಯ.

ಜಿಲ್ಲೆಯ ಮಲೆನಾಡು ಪರಿಸರ ತಾಣಗಳ ಜತೆಗೆ ಪ್ರಸಿದ್ಧ ದೇವಸ್ಥಾನಗಳನ್ನೂ ಹೊಂದಿದೆ. ನಿಸರ್ಗ ತಾಣಗಳಲ್ಲಿ ಬಹುತೇಕ ಕಡೆ ರಸ್ತೆಗಳಿಲ್ಲ. ಕೊಟ್ಟಿಗೆಹಾರ ದಾಟಿ ಚಾರ್ಮಾಡಿ ಘಾಟಿಯಲ್ಲಿ ಸಾಗಿದರೆ ಸಾಕಷ್ಟು ನೋಡಿದಷ್ಟು ದೂರಕ್ಕೂ ಬೆಟ್ಟಗಡ್ಡಗಳ ಸಾಲು ಎದುರಾಗುತ್ತದೆ. ಅಲ್ಲಲ್ಲಿ ಜಿನುಗುವ ಜಲಪಾತಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಆದರೆ, ಅವುಗಳನ್ನು ಪ್ರವಾಸಿ ಸ್ಥಳವಾಗಿಸುವ ಕೆಲಸ ಆಗಿಲ್ಲ. ವಾಹನ ನಿಲುಗಡೆ ಸ್ಥಳಗಳು ಸಮರ್ಪಕವಾಗಿಲ್ಲ. ಕೊಟ್ಟೆಗೆಹಾರದಲ್ಲಿ ಪ್ರವಾಸಿ ಹೋಟೆಲ್ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತು ನಾಲ್ಕೈದು ವರ್ಷಗಳೇ ಕಳದಿವೆ. ಪ್ರವಾಸಿಗರ ಅಚ್ಚುಮೆಚ್ಚಿನ ತಾಣಗಳಲ್ಲಿ ಅರಣ್ಯ ಇಲಾಖೆಯ ಮಲಯ ಮಾರುತ ವಸತಿ ಗೃಹ ಕೂಡ ಒಂದು. ಇದರ ಚಾವಣಿ ಹಾಳಾಗಿದ್ದು, ಆಗಲೋ ಈಗಲೂ ಕುಸಿಯುವ ಸ್ಥಿತಿಯಲ್ಲಿದೆ. ಇದನ್ನು ದುರಸ್ತಿಪಡಿಸಲು ಹಣ ನಿಗದಿ ಮಾಡಲಾಗಿದ್ದರೂ ಕಾಮಗಾರಿಯನ್ನು ಅರಣ್ಯ ಇಲಾಖೆ ಆರಂಭಿಸಿಲ್ಲ.

ದೇವರಮನೆ ಪ್ರವಾಸಿ ತಾಣಕ್ಕೆ ಹೋಗುವ ರಸ್ತೆ ಇದೆ. ಅಲ್ಲಿನ ವೀಕ್ಷಣಾ ಸ್ಥಳವನ್ನು ಗುರುತು ಮಾಡಿಲ್ಲ. ಸೂಕ್ತ ವಾಹನ ನಿಲುಗಡೆ ವ್ಯವಸ್ಥೆ, ಶೌಚಾಲಯ ಸೇರಿ ಯಾವುದೇ ಸೌಕರ್ಯ ಇಲ್ಲ. ಎತ್ತಿನಭುಜಕ್ಕೆ ರಸ್ತೆ ಇದೆ, ಶೌಚಾಲಯ ಇಲ್ಲ. ಚಾರಣಕ್ಕೆ ತೆರಳುವ ವಾಪಸ್ ಬಂದಾಗ ಬಟ್ಟೆ ಬದಲಿಸಲು ಕೊಠಡಿ ಇಲ್ಲ. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ.

ರಾಣಿಝರಿ ಮತ್ತು ಎತ್ತಿನಭುಜ ಎರಡು ಕಡೆ ಚಾರಣ ಹೋಗುವ ಜನರಿಗೆ ಗೈಡ್‌ಗಳ ವ್ಯವಸ್ಥೆ ಇಲ್ಲ. ಆಗಾಗ ದಾರಿ ತಪ್ಪುವುದು ಸಾಮಾನ್ಯವಾಗಿದೆ. ಕುದುರೆಮುಖದಲ್ಲಿ ಚಾರಣಕ್ಕೆ ಗೈಡ್‌ಗಳಿದ್ದಾರೆ. ಆದರೆ, ಎಲ್ಲಿಯೂ ಚಾರಣಿಗರಿಗೆ ಬಟ್ಟೆ ಬದಲಿಸುವ ಕೊಠಡಿಗಳಿಲ್ಲ. ಕೆಮ್ಮಣ್ಣುಗುಂಡಿಗೆ ಸಾಗುವ ರಸ್ತೆ ಹಾಳಾಗಿ ಹಲವು ವರ್ಷಗಳೇ ಕಳೆದಿವೆ, ರಸ್ತೆ ದುರಸ್ತಿಯಾಗಿಲ್ಲ.

ಮಾಣಿಕ್ಯಧಾರ, ಹೆಬ್ಬೆ, ಝರಿ, ಹೊನ್ನಮ್ಮನಹಳ್ಳ ಸೇರಿ ಹಲವು ಜಲಪಾತಗಳಿದ್ದು, ಎಲ್ಲಿಯೂ ಪ್ರವಾಸಿಗರು ಬಟ್ಟೆ ಬದಲಿಸಲು ವ್ಯವಸ್ಥೆಗಳಿಲ್ಲ. ವರ್ಷಕ್ಕೆ ಲಕ್ಷಾಂತರ ಜನ ಭೇಟಿ ನೀಡುತ್ತಿದ್ದರೂ ಪ್ರವಾಸಿ ತಾಣಗಳ ಸ್ಥಿತಿ ಸುಧಾರಿಸಿಲ್ಲ. ಅಭಿವೃದ್ಧಿಪಡಿಸಿ ಸಣ್ಣಪುಟ್ಟ ಮೂಲಸೌಕರ್ಯ ಒದಗಿಸಿದರೆ ಸ್ಥಳೀಯ ಆರ್ಥಿಕ ವಹಿವಾಟು ವೃದ್ಧಿಯಾಗಲಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಈ ವರ್ಷ ಬಜೆಟ್‌ನಲ್ಲಿ ಚಿಕ್ಕಮಗಳೂರು ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಪ್ರಕಟಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿದ್ದು ಅವುಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ವಿಶೇಷ ಪ್ಯಾಕೇಜ್ ನೀಡಬೇಕು. ಆಗ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಸ್ಥಳೀಯರ ಆರ್ಥಿಕ ವಹಿವಾಟು ಕೂಡ ಜಾಸ್ತಿಯಾಗಲಿದೆ
ಸಂಜಯ್ ಕೊಟ್ಟೆಗೆಹಾರ
ಮಲೆನಾಡಿನ ಪ್ರವಾಸಿ ತಾಣಗಳಿಗೆ ಹೋಗಲು ಇಷ್ಟ. ಆದರೆ ರಸ್ತೆಗಳ ಸ್ಥಿತಿ ನೋಡಿದರೆ ಬೇಸರವಾಗುತ್ತದೆ. ರಾಣಿಝರಿ ನನ್ನ ಅಚ್ಚುಮೆಚ್ಚಿನ ತಾಣ. ಅಲ್ಲಿಗೆ ಹೋಗಲು ರಸ್ತೆಯೇ ಇಲ್ಲ. ಬಜೆಟ್‌ನಲ್ಲಿ ರಸ್ತೆಗೆ ಅನುದಾನ ನೀಡಬೇಕು
ಶರಣು ಚಿಕ್ಕಮಗಳೂರು

ರಾಣಿಝರಿ ಗಾಜಿನ ಸೇತುವೆ ನನೆಗುದಿಗೆ

ರಾಣಿಝರಿ ಪ್ರವಾಸಿ ತಾಣ ಪ್ರವಾಸಿ ಅಚ್ಚುಮೆಚ್ಚಿನ ತಾಣಗಳಲ್ಲಿ ಒಂದು. ಒಂದೆಡೆ 3 ಸಾವಿರ ಅಡಿ ಆಳದ ಪ್ರಪಾತ ನೋಡಲು ಜನ ಬರುತ್ತಿದ್ದು ಮತ್ತೊಂದೆಡೆ ಬಂಡಾಜೆ ಚಾರಣ ಹೋಗುವ ಜನರ ಆರಂಭಿಕ ಸ್ಥಳವೂ ಹೌದು. ಇಲ್ಲಿಗೆ ಸಾಗಲು ರಸ್ತೆ ಎಂಬುದೇ ಇಲ್ಲವಾಗಿದೆ. ಇದ್ದ ಜಲ್ಲಿ ರಸ್ತೆ ಸಂಪೂರ್ಣ ಹಾಳಾಗಿದ್ದು ವಾಹನಗಳ ಸಂಚಾರವೇ ಸಾಧ್ಯವಿಲ್ಲದಂತಾಗಿದೆ. ಗಾಜಿನ ಸೇತುವೆ ನಿರ್ಮಿಸಿ ರಾಣಿಝರಿ ವೀಕ್ಷಣಾ ಸ್ಥಳನ್ನು ಇನ್ನಷ್ಟು ಜನರಿಗೆ ಹತ್ತಿರ ಮಾಡಬೇಕು ಎಂಬ ಪ್ರವಾಸೋದ್ಯಮ ಇಲಾಖೆ ಪ್ರಸ್ತಾಪ ಹಾಗೇ ಇಳಿದಿದೆ. ಶೌಚಾಲಯ ಚಾರಣಿಗರಿಗೆ ಬಟ್ಟೆ ಬದಲಿಸುವ ವ್ಯವಸ್ಥೆ ಸೇರಿ ಯಾವುದೂ ಇಲ್ಲವಾಗಿದೆ. ರಾಣಿಝರಿ ರೀತಿಯ ಪ್ರವಾಸಿ ತಾಣ ಅಭಿವೃದ್ಧಿಪಡಿಸಲು ಸರ್ಕಾರ ವಿಶೇಷ ಗಮನ ಹರಿಸಿ ಈ ಬಾರಿಯ ಬಜೆಟ್‌ನಲ್ಲಿ ಅನುದಾನ ನೀಡಬೇಕು ಎಂಬುದು ಪ್ರವಾಸಿಗರ ಒತ್ತಾಯ.

ಮುಳ್ಳಯ್ಯನಗಿರಿ– ಕೆಮ್ಮಣ್ಣುಗುಂಡಿ ರಸ್ತೆ ಅಭಿವೃದ್ಧಿಯಾಗಲಿ

ಮುಳ್ಳಯ್ಯನಗಿರಿ ನೋಡಲು ಬರುವ ಪ್ರವಾಸಿಗರು ನೇರವಾಗಿ ಕೆಮ್ಮಣ್ಣುಗುಂಡಿ ತಲುಪಲು ಇರುವ ರಸ್ತೆ ಅಭಿವೃದ್ಧಿಪಡಿಸುವ ಯೋಜನೆ ಕೂಡ ಹಾಗೇ ಉಳಿದ್ದು ಈ ಬಾರಿ ಬಜೆಟ್‌ನಲ್ಲಿ ಅನುದಾನ ನೀಡಬೇಕು ಎಂಬುದು ಸ್ಥಳೀಯರ ಒತ್ತಾಯ. ಅತ್ತಿಗುಂಡಿ–ಮಹಲ್ ಮಾರ್ಗವಾಗಿ ನೇರವಾಗಿ ಕೆಮ್ಮಣ್ಣುಗುಂಡಿಗೆ ತಲುಪಲು ಇದ್ದ ರಸ್ತೆಯನ್ನು ಈಗ ಮುಚ್ಚಲಾಗಿದೆ. ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ ಬೈಕ್‌ನಲ್ಲಿ ಸಾಗುವವರಿಗೆ ಮಾತ್ರ ಅವಕಾಶ ಇದೆ. ರಸ್ತೆ ಅಭಿವೃದ್ಧಿಪಡಿಸಲು ಯೋಜನೆಯನ್ನು ಲೋಕೋಪಯೋಗಿ ಇಲಾಖೆ ರೂಪಿಸಿದ್ದು ಸಚಿವ ಸತೀಶ್ ಜಾರಕಿಹೊಳಿ ಅವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು. ಈ ಬಾರಿಯ ಬಜೆಟ್‌ನಲ್ಲಿ ಅನುದಾನ ನೀಡಿದರೆ ಕೆಮ್ಮಣ್ಣಗುಂಡಿ–ಮುಳ್ಳಯ್ಯನಗಿರಿ ರಸ್ತೆಗೆ ನೇರ ಸಂಪರ್ಕ ದೊರಕಲಿದೆ. ಅಲ್ಲದೇ ಮಳೆಗಾಲದಲ್ಲಿ ರಸ್ತೆ ಕುಸಿದರೆ ಪರ್ಯಾಯ ರಸ್ತೆಯೇ ಇಲ್ಲವಾಗಿದೆ. ಆದ್ದರಿಂದ ಸರ್ಕಾರ ಮೊದಲ ಆದ್ಯತೆಯಲ್ಲಿ ಈ ರಸ್ತೆ ಅಭಿವೃದ್ಧಿಪಡಿಸಬೇಕು ಎಂಬುದು ಅತ್ತಿಗುಂಡಿ ನಿವಾಸಿಗಳ ಆಗ್ರಹ.