
ಚಿಕ್ಕಮಗಳೂರು: ಕ್ರಿಸ್‌ಮಸ್ ಮತ್ತು ವರ್ಷಾಂತ್ಯದ ಸಾಲು ರಜೆ ನಡುವೆ ಪ್ರವಾಸಿಗರು ಜಿಲ್ಲೆಗೆ ಲಗ್ಗೆ ಇಟ್ಟಿದ್ದು, ಎಲ್ಲಾ ಹೋಂಸ್ಟೆ ಮತ್ತು ರೆಸಾರ್ಟ್‌ಗಳು ಭರ್ತಿಯಾಗಿವೆ.
ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ, ಗಾಳಿಕೆರೆ, ಕೆಮ್ಮಣ್ಣುಗುಂಡಿ, ಕುದುರೆಮುಖ, ದೇವರಮನೆ, ರಾಣಿಝರಿ, ಶೃಂಗೇರಿ, ಹೊರನಾಡು ಸೇರಿ ಎಲ್ಲೆಡೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಶುಕ್ರವಾರ ಜಮಾಯಿಸಿದ್ದರು.
ಹೊರ ರಾಜ್ಯಗಳು ಮತ್ತು ನಾಡಿನ ವಿವಿಧೆಡೆಗಳಿಂದ ಜನ ದಾಂಗುಡಿ ಇಟ್ಟಿದ್ದರು. ಗಿರಿ ಶ್ರೇಣಿ ತಾಣಗಳು, ಧಾರ್ಮಿಕ ಕ್ಷೇತ್ರಗಳು, ಜಲಪಾತಗಳು, ಇತರ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವಾಸಿಗರ ಕಲರವ ಮೇಳೈಸಿತ್ತು.
ಅಲ್ಲಲ್ಲಿ ಕಾರುಗಳನ್ನು ನಿಲ್ಲಿಸಿ ಕಾಫಿ ಮತ್ತು ಟೀ ತೋಟಗಳಲ್ಲಿ ಫೋಟೊ ಕ್ಲಿಕ್ಕಿಸಿಕೊಂಡರು. ತಂಡೋಪ ತಂಡವಾಗಿ ಸುತ್ತಾಡಿದರು. ಬಹುತೇಕರು ಕಾರುಗಳಲ್ಲಿ ಬಂದಿದ್ದರಿಂದ ಚಿಕ್ಕಮಗಳೂರು ನಗರ ಸೇರಿ ಎಲ್ಲೆಡೆ ವಾಹನ ದಟ್ಟಣೆ ಉಂಟಾಗಿತ್ತು. ಹೆದ್ದಾರಿಗಳಲ್ಲೂ ಕಾರುಗಳ ಸಾಲು ದೊಡ್ಡದಾಗಿತ್ತು.
ಅದರಲ್ಲೂ ರಾಜ್ಯದ ಅತೀ ಎತ್ತರದ ಶಿಖರವಾಗಿರುವ ಮುಳ್ಳಯ್ಯನಗಿರಿಯಲ್ಲಿ ಆಹ್ಲಾದಕರ ಅನುಭವ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. ಮುಳ್ಳಯ್ಯನಗಿರಿ ರಸ್ತೆಯಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪ್ರವಾಸೋದ್ಯಮ ಇಲಾಖೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿ ಮಿತ್ರರನ್ನು ನೇಮಿಸಿದ್ದು, ಅವರು ಕೂಡ ಪ್ರವಾಸಿಗರಿಗೆ ಮಾರ್ಗದರ್ಶನ ನೀಡಿದರು.
ಶೃಂಗೇರಿ, ಕಳಸ, ಹೊರನಾಡು, ಅಮೃತಾಪುರ ದೇಗುಲಗಳಿಗೂ ಜನ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದರು. ಪ್ರವಾಸಿಗರು ಹೆಚ್ಚಾಗಿದ್ದರಿಂದ ಕೆಎಸ್ಆರ್‌ಟಿಸಿ ಬಸ್‌ಗಳು ಕೂಡ ಭರ್ತಿಯಾಗಿ ಕಾರ್ಯಾಚರಣೆ ಮಾಡಿದವು.
ಶನಿವಾರ ಮತ್ತು ಭಾನುವಾರ ಮುಳ್ಳಯ್ಯನಗಿರಿ ಮತ್ತು ಬಾಬಾಬುಡನ್‌ಗಿರಿಗೆ ತೆರಳಲು ಈಗಾಗಲೇ ಅನ್‌ಲೈನ್ ಬುಕ್ಕಿಂಗ್ ಪೂರ್ಣಗೊಂಡಿದೆ. ದಿನಕ್ಕೆ 1200 ವಾಹನಗಳಿಗೆ ಮಾತ್ರ ಅವಕಾಶ ಇದ್ದು, ಅಷ್ಟೂ ಬುಕ್ಕಿಂಗ್ ಆಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಇನ್ನೊಂದೆಡೆ ಮೂಡಿಗೆರೆ ಭಾಗದಲ್ಲಿ ಪ್ರವಾಸಿಗರ ಸಂಖ್ಯೆ ನಿರೀಕ್ಷೆಗಿಂತ ಕಡಿಮೆಯಾಗಿದೆ. ಅಲ್ಲಿನ ಹೋಂಸ್ಟೆ ಮತ್ತು ರೆಸಾರ್ಟ್‌ಗಳಿಗೆ ಅಷ್ಟೇನು ಬೇಡಿಕೆ ಇರಲಿಲ್ಲ. ಬಹುತೇಕ ಹೋಂಸ್ಟೆಗಳು ಖಾಲಿ ಇವೆ. ಚಿಕ್ಕಮಗಳೂರಿಗೆ ಬರುವ ಪ್ರವಾಸಿಗರು ದೇವರಮನೆ, ರಾಣಿಝರಿ ಕಡೆಗೆ ಬರುತ್ತಿಲ್ಲ ಎಂದು ಕೊಟ್ಟಿಗೆಹಾರದ ಹೋಂಸ್ಟೆ ಮಾಲೀಕ ಸಂಜಯ್‌ಗೌಡ ಹೇಳಿದರು.
Cut-off box - 28ರ ತನಕ ಹೋಂಸ್ಟೆ ಭರ್ತಿ ಕ್ರಿಸ್‌ಮಸ್ ಸಂದರ್ಭದಲ್ಲಿ ಪ್ರವಾಸಿಗರ ಸಂಖ್ಯೆ ನಿರೀಕ್ಷೆಗಿಂತಲೂ ಜಾಸ್ತಿ ಇದೆ. ಡಿ.28ರ ತನಕ ಎಲ್ಲಾ ಹೋಂಸ್ಟೆಗಳು ಬುಕ್ ಆಗಿವೆ ಎಂದು ಹೋಂಸ್ಟೆ ಮಾಲೀಕರ ಸಂಘದ ಅಧ್ಯಕ್ಷ ಎನ್.ಆರ್. ತೇಜಸ್ವಿ ಹೇಳಿದರು. ಡಿ.21ರಿಂದಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಬರುತ್ತಿದ್ದಾರೆ. ವರ್ಷಾಂತ್ಯ ಡಿ.31ಕ್ಕೆ ಅಷ್ಟೇನು ಬೇಡಿಕೆ ಕಾಣಿಸುತ್ತಿಲ್ಲ. ವಾರದ ಮಧ್ಯದಲ್ಲಿ ವರ್ಷಾಂತ್ಯ ಬಂದಿರುವ ಕಾರಣಕ್ಕೆ ಬೇಡಿಕೆ ಕಡಿಮೆಯಾಗಿರಬಹುದು ಎಂದು ತಿಳಿಸಿದರು.
Cut-off box - ವರ್ಷಾಚರಣೆ: ರಾತ್ರಿ 12.30ರ ತನಕ ಅವಕಾಶ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಅವರು ಹೋಂಸ್ಟೆ ಮಾಲೀಕರ ಸಭೆ ನಡೆಸಿದರು. ಹೊಸ ವರ್ಷಾಚರಣೆಗೆ ರಾತ್ರಿ 12.30ರ ತನಕ ಅವಕಾಶವನ್ನು ಪೊಲೀಸ್ ಇಲಾಖೆ ನೀಡಿದೆ. ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸ್ವಯಂ ಸೇವಕರು ಖಾಸಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಬೇಕು. ವಿದೇಶಿಯರು ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಹೋಂಸ್ಟೆ ಮಾಲೀಕರಿಗೆ ಸೂಚನೆ ನೀಡಿದರು. ರೆಸಾರ್ಟ್ ಹೋಂಸ್ಟೆಗಳಲ್ಲಿ ಹೊಸ ವರ್ಷಾಚರಣೆ ಸಂಬಂಧ ಕಾರ್ಯಕ್ರಮ ಆಯೋಜಿಸುವಾಗ ಧ್ವನಿವರ್ಧಕ ಅವಶ್ಯಕತೆ ಇದ್ದರೆ ಸಂಬಂಧಪಟ್ಟ ಪೊಲೀಸ್ ಠಾಣೆಯಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು. ನೆರೆಯವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ರೇವ್ ಪಾರ್ಟಿ ಆಯೋಜಿಸಬಾರದು. ನೈತಿಕ ಪೊಲೀಸ್‌ಗಿರಿಗೆ ಅವಕಾಶ ಇರಬಾರದು. ಅಹಿತಕರ ಸನ್ನಿವೇಶ ಉಂಟಾದರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು. ಮಾದಕ ವಸ್ತು ಬಳಕೆ ಕಂಡು ಬಂದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಅತಿಥಿಗಳ ಹೆಸರು ವಿಳಾಸ ಸಮಯ ಗುರುತಿನ ಚೀಟಿ ವಾಹನ ಚಾಲನಾ ಪರವಾನಗಿ ವಿವರ ಕಲೆ ಹಾಕಬೇಕು. ಮದ್ಯ ಸರಬರಾಜು ಮಾಡುವುದಿದ್ದರೆ ಸಿಎಲ್ -5 ಪರವಾನಗಿ ಪಡೆದುಕೊಳ್ಳಬೇಕು. ಅಧಿಕಾರಿಗಳಿಂದ ಲಿಖಿತ ಅನುಮತಿ ಪಡೆದುಕೊಳ್ಳಬೇಕು. ಆಚರಣೆ ನಂತರ ಪಾನಮತ್ತರಾಗಿ ವಾಹನ ಚಾಲನೆ ಮಾಡಿದರೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.