ADVERTISEMENT

ಚಿಕ್ಕಮಗಳೂರು: ಬಾರ್ ತೆರೆದಿದ್ದನ್ನು ವಿರೋಧಿಸಿ ಗಲಾಟೆ ಪ್ರಕರಣ ; ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 9:28 IST
Last Updated 15 ನವೆಂಬರ್ 2021, 9:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿಕ್ಕಮಗಳೂರು: ಕಡೂರು ತಾಲ್ಲೂಕಿನ ಎಮ್ಮೆದೊಡ್ಡಿ ಬಳಿ ಮುಸ್ಲಾಪುರಹಟ್ಟಿಯಲ್ಲಿ ಬಾರ್‌ ತೆರೆದಿರುವುದನ್ನು ವಿರೋಧಿಸಿ ನ.12ರಂದು ನಡೆದಿದ್ದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‌ಐ ರಮ್ಯಾ ನೇತೃತ್ವದ ತಂಡದವರು ಗ್ರಾಮಕ್ಕೆ ತೆರಳಿ ಮನೆಯೊಳಗಿದ್ದ ಐವರನ್ನು ಬಂಧಿಸಿದ್ದಾರೆ.

ತನಿಖೆಗೆ ಗ್ರಾಮಕ್ಕೆ ತೆರಳಿದ್ದ ಪೊಲೀಸರು ಮನೆಯೊಳಗಿದ್ದ ಪ್ರೇಮಾಬಾಯಿ, ಜಾನಿಬಾಯಿ, ಕಿರಣ್, ಮಲ್ಲೇಶ್, ಶೀಲಾಬಾಯಿ ಎಂಬವರನ್ನು ಬಂಧಿಸಿದ್ದಾರೆ.

‘ಪೊಲೀಸರು ಚಾವಣಿಯ ಹೆಂಚು ತೆಗೆದು, ಬಾಗಿಲು ಮುರಿದು ಮನೆಯೊಳಕ್ಕೆ ನುಗ್ಗಿ ಎಳೆದೊಯ್ದಿದ್ದಾರೆ’ ಎಂದು ಗ್ರಾಮದ ಕೆಲವರು ಆರೋಪಿಸಿದ್ದಾರೆ.

ADVERTISEMENT

‘ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿದ್ದೇವೆ. ಕೋರ್ಟ್‌ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಚಾವಣಿಯ ಹೆಂಚು ತೆಗೆದು ,ಬಾಗಿಲು ಮುರಿದು ಮನೆಯೊಳಕ್ಕೆ ಒಳ ನುಗ್ಗಿ ಬಂಧಿಸಿದ್ದೇವೆ ಆರೋಪಿಗಳು ಕತೆ ಕಟ್ಟಿದ್ದಾರೆ. ಅದರಲ್ಲಿ ಹುರುಳಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

ನ.12ರಂದು ಗ್ರಾಮದ ಹಲವರು ಬಾರ್‌ಗೆ ತೆರಳಿ ಮದ್ಯ ಮಾರಾಟ ಮಾಡಬಾರದು ಎಂದು ಆಗ್ರಹಿಸಿದ್ದರು. ಈ ಸಂದರ್ಭದಲ್ಲಿ ಗಲಾಟೆ ನಡೆದು ಬಾರ್‌ನಲ್ಲಿದ್ದ ಕೆಲ ಪಿಠೋಪಕರಣಗಳು, ಗಾಜು, ಕಿಟಕಿ ಚೆಲ್ಲಾಪಿಲ್ಲಿಯಾಗಿದ್ದವು.

ಮುಸ್ಲಾಪುರದಹಟ್ಟಿಯ ಸನ್‌ಮೂನ್‌ ಗ್ರೂಪ್‌ ಹೋಟೆಲ್‌ ಬಾರ್‌ ಅಂಡ್‌ ರೆಸ್ಟೊರೆಂಟ್‌ನ ನೌಕರ ಮಹಂತೇಶ ದೂರು ದಾಖಲಿಸಿದ್ದರು. ಮುಸ್ಲಾಪುರದಹಟ್ಟಿಯ ಪ್ರೇಮಾ ಬಾಯಿ ಅವರು ಪ್ರತಿದೂರು ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.