ಚಿಕ್ಕಮಗಳೂರು: ಮೇ 1ರಂದು ಪೌರ ಕಾರ್ಮಿಕರನ್ನು ಕಾಯಂಗೊಳಿಸುವ ನಿರೀಕ್ಷೆ ಹುಸಿಯಾಗಿದ್ದು, ಕಾರ್ಮಿಕರಿಗೆ ಅರೆಹೊಟ್ಟೆಯೇ ಗತಿಯಾಗಿದೆ.
ಜಿಲ್ಲೆಯಲ್ಲಿ ಒಂದು ನಗರಸಭೆ, ಮೂರು ಪುರಸಭೆ ಮತ್ತು ಐದು ಪಟ್ಟಣ ಪಂಚಾಯಿತಿಗಳಿವೆ. ಎಲ್ಲೆಡೆ ಗುತ್ತಿಗೆ ಆಧಾರದಲ್ಲಿ ನೇರ ಪಾವತಿ ಪಡೆಯುತ್ತಿರುವ ಪೌರ ಕಾರ್ಮಿಕರ ಸಂಖ್ಯೆ ಹೆಚ್ಚಿದೆ. ಒಟ್ಟು 190 ಕಾಯಂ ಪೌರ ನೌಕರರಿದ್ದರೆ, 125 ನೇರ ಪಾವತಿ ಕಾರ್ಮಿಕರಿದ್ದಾರೆ. 44 ಹುದ್ದೆಗಳು ಖಾಲಿ ಇವೆ.
ಇವರೊಂದಿಗೆ ಗುತ್ತಿಗೆ ಆಧಾರದಲ್ಲಿ 30 ವರ್ಷಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸುತ್ತಿರುವ ನೀರು ಸರಬರಾಜು ನೌಕರರಿದ್ದಾರೆ. ಚಿಕ್ಕಮಗಳೂರು ನಗರಸಭೆ ಒಂದರಲ್ಲೇ 50 ಜನ ನೀರು ಸರಬರಾಜುದಾರರು, 13 ಚಾಲಕರು, ಡಾಟಾ ಎಂಟ್ರಿ ಆಪರೇಟರ್, ಕಸ ಲೋಡ್ ಮಾಡುವ ಸಿಬ್ಬಂದಿ ಇದ್ದಾರೆ.
ಇವರನ್ನು ನೇರ ಪಾವತಿ ಯೋಜನೆಯಡಿಗೆ ತರಬೇಕು, ಈಗಾಗಲೇ ನೇರ ಪಾವತಿ ಯೋಜನೆಯಡಿ ಇರುವ ನೌಕರರನ್ನು ಕಾಯಂ ಮಾಡಬೇಕು ಎಂಬುದು ಪೌರ ನೌಕರರ ಒತ್ತಾಯ.
ನಿವೃತ್ತಿ ಹೊಂದಿದ ನೌಕರರ ಸ್ಥಾನಕ್ಕೆ ಬೇರೆಯವರನ್ನು ನೇಮಕ ಮಾಡಿಕೊಂಡಿಲ್ಲ. ಖಾಲಿ ಹುದ್ದೆಗಳ ಭರ್ತಿ ಆಗದಿರುವುದರಿಂದ ಇರುವ ಕಾರ್ಮಿಕರ ಮೇಲೆಯೇ ಒತ್ತಡ ಹೆಚ್ಚಾಗಿದೆ. ಆದ್ದರಿಂದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬುದು ಅವರ ಆಗ್ರಹ.
ರಾಜ್ಯದಲ್ಲಿರುವ ಎಲ್ಲಾ ಮಹಾನಗರ ಪಾಲಿಕೆ, ಪುರಸಭೆ, ನಗರಸಭೆ, ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇದೇ 27ರಂದು ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುತ್ತಿದೆ ಎಂದು ಪೌರ ಸೇವಾ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಣ್ಣಯ್ಯ ತಿಳಿಸಿದರು.
ಜನಸಂಖ್ಯೆಗೆ ತಕ್ಕಂತೆ ಕಾರ್ಮಿಕರಿಲ್ಲದೆ ಪರದಾಟ
ಶೃಂಗೇರಿ: ಪಟ್ಟಣದ ಜನಸಂಖ್ಯೆ ಮತ್ತು ಪ್ರವಾಸಿಗರ ಭೇಟಿಗೆ ತಕ್ಕಂತೆ ನಗರವನ್ನು ಸ್ವಚ್ಛವಾಗಿಡಲು ಪೌರ ಕಾರ್ಮಿಕರ ಪರದಾಡುತ್ತಿದ್ದಾರೆ. ಕಾರ್ಮಿಕರ ಸಂಖ್ಯೆ ಕಡಿಮೆ ಇರುವುದರಿಂದ ಕಾರ್ಮಿಕರು ಪರದಾಡುವ ಸ್ಥಿತಿ ಇದೆ. ಪಟ್ಟಣ ಪಂಚಾಯಿತಿಯಲ್ಲಿ ಮಂಜೂರಾದ 14 ಪೌರ ಕಾರ್ಮಿಕರ ಹುದ್ದೆಯಲ್ಲಿ ನಾಲ್ವರು ಕಾಯಂ ನೌಕರರಿದ್ದಾರೆ. ಇದರಿಂದ ಸ್ವಚ್ಚತಾ ಕಾರ್ಯ ನಡೆಸಲು ತೊಂದರೆಯಾಗಿದೆ. ಪ್ರವಾಸಿಗರ ದಟ್ಟಣೆಯಿಂದ ಶೃಂಗೇರಿ ಪಟ್ಟಣದಲ್ಲಿ ವಿಪರೀತ ಕಸ ಸಂಗ್ರಹವಾಗುತ್ತಿದ್ದು ಕಸವನ್ನು ವಿಲೇವಾರಿ ಮಾಡಲು ಕಷ್ಟವಾಗಿದೆ. ಈಗ ಕೆಲಸ ಮಾಡುವ 10 ಮಂದಿ ಹೊರಗುತ್ತಿಗೆ ಪೌರ ಕಾರ್ಮಿಕರು 6 ಮಂದಿ ನೀರು ಸರಬರಾಜು ನೌಕರರು ಒಬ್ಬರು ಟ್ರ್ಯಾಕ್ಟರ್ ಡ್ರೈವರ್ ಕೆಲಸ ಮಾಡುತ್ತೀದ್ದಾರೆ. ಪ್ರತಿ ವರ್ಷ 80 ಲಕ್ಷದಿಂದ 90 ಲಕ್ಷ ಪ್ರವಾಸಿಗರು ಬರುವ ಈ ಕ್ಷೇತ್ರದಲ್ಲಿ ಪಟ್ಟಣ ಪಂಚಾಯಿತಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ದಿನ ಪ್ರತಿ 2 ರಿಂದ 3 ಟನ್ ಘನತ್ಯಾಜ್ಯ ಸಂಗ್ರಹಿಸಲಾಗುತ್ತಿದ್ದು ಒಣ ಮತ್ತು ಹಸಿ ಕಸ ಬೇರ್ಪಡಿಸದೆ ಹನುಮಂತನಗರದಲ್ಲಿರುವ ಕಸ ವಿಲೇವಾರಿ ಘಟಕಕ್ಕೆ ಹಾಕಲಾಗುತ್ತಿದೆ. ಸುಮಾರು 1300ಕ್ಕೂ ಹೆಚ್ಚು ಮನೆಗಳಿರುವ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 4 ಸಾವಿರಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ. ಪಟ್ಟಣ ಪಂಚಾಯಿತಿಯಲ್ಲಿ 25 ವರ್ಷಗಳಿಂದ ಪಟ್ಟಣ ಸ್ವಚ್ಚ ಮಾಡಿಕೊಂಡು ಬರುವ ಪೌರ ಕಾರ್ಮಿಕರನ್ನು ಕೂಡಲೇ ಕಾಯಂಗೊಳಿಸಬೇಕು. 2009ರಿಂದ ಈವರೆಗೆ 10 ಬಾರಿ ಅನಿರ್ದಿಷ್ಟಾವಧಿ ಅಹೋರಾತ್ರಿ ಮುಷ್ಕರ ನಡೆಸಿದ್ದೇವೆ ಎಂದು ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ನಾಗೇಶ್ ಹೇಳಿದರು.
ಕಾರ್ಮಿಕರ ಕೊರತೆ
ತರೀಕೆರೆ ಪುರಸಭೆ ವ್ಯಾಪ್ತಿಯಲ್ಲಿ 35000 ಜನಸಂಖ್ಯೆ ಇದೆ. ಜನಸಂಖ್ಯೆಗೆ ಅನುಗುಣವಾಗಿ 700 ಜನರಿಗೆ ಒಬ್ಬ ಪೌರಕಾರ್ಮಿಕರಂತೆ ಸುಮಾರು 50 ಪೌರ ಕಾರ್ಮಿಕರ ಅವಶ್ಯಕತೆ ಇದೆ. ತರೀಕೆರೆ ಪುರಸಭೆಯಲ್ಲಿ 31 ಕಾಯಂ ಪೌರಕಾರ್ಮಿಕರು ಎಂಟು ಜನ ನೇರ ಪಾವತಿ ಪೌರಕಾರ್ಮಿಕರಿದ್ದಾರೆ. ಇನ್ನು 11 ಜನ ಪೌರ ಕಾರ್ಮಿಕರ ಕೊರತೆ ಇದೆ. ಪೌರಕಾರ್ಮಿಕರಿಗೆ ಹೆಚ್ಚುವರಿಯಾಗುವ ಕೆಲಸವನ್ನು ಈ ಸಹಾಯಕರಿಂದ ಸರಿದೂಗಿಸಲಾಗುತ್ತಿದೆ. ಆದ್ದರಿಂದ ಸ್ವಚ್ಛತೆ ಹಾಗೂ ಪೌರಕಾರ್ಮಿಕರ ಕೆಲಸಕ್ಕೆ ತೊಂದರೆಯಾಗಿಲ್ಲ ಎಂದು ಪುರಸಭ ಮುಖ್ಯ ಅಧಿಕಾರಿ ಎಚ್. ಪ್ರಶಾಂತ್ ತಿಳಿಸಿದ್ದಾರೆ.
ಪೌರ ಕಾರ್ಮಿಕರ ಹುದ್ದೆ ಖಾಲಿ
ನರಸಿಂಹರಾಜಪುರ: ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು 11 ಹುದ್ದೆಗಳಿದ್ದು 9 ಹುದ್ದೆಗಳು ಭರ್ತಿಯಾಗಿವೆ. 2 ಹುದ್ದೆಗಳು ಖಾಲಿ ಉಳಿದಿದೆ. ಹಿಂದೆ ನೇರ ಪಾವತಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಹುತೇಕ ಪೌರ ಕಾರ್ಮಿಕರು ಖಾಯಂ ಆಗಿದ್ದಾರೆ. ಇಬ್ಬರು ಪೌರಕಾರ್ಮಿಕರನ್ನು ಹೊರಗುತ್ತಿಗೆ ಮೂಲಕ ನೇಮಿಸಿಕೊಳ್ಳಲಾಗಿದ್ದು ಏಜೆನ್ಸಿ ಮೂಲ ವೇತನ ಪಾವತಿಸುತ್ತಿದೆ. ಪಟ್ಟಣ ಪಂಚಾಯಿತಿ ಅನುದಾನದಲ್ಲಿಯೇ ವೇತನ ಪಾವತಿಸುವುದರಿಂದ ಪಟ್ಟಣ ಪಂಚಾಯಿತಿಗೆ ಹೊರೆಯಾಗಿದೆ.
ಕಾಯಂ ಪೌರ ಕಾರ್ಮಿಕರ ಕೊರತೆ
ಕೊಪ್ಪ: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 11 ವಾರ್ಡ್‌ಗಳಿದ್ದು ಜನ ಸಂಖ್ಯೆಗೆ ಅನುಗುಣವಾಗಿ ಕಾಯಂ ಪೌರ ಕಾರ್ಮಿಕರ ಸಂಖ್ಯೆ ಕೊರತೆ ಇದೆ. 2011ರ ಜನಗಣತಿ ಪ್ರಕಾರ 4900 ಜನಸಂಖ್ಯೆ ಇದ್ದು ಸರ್ಕಾರದ ನಿಯಮದಂತೆ 700 ಜನರಿಗೆ ಒಬ್ಬರಂತೆ 7 ಖಾಯಂ ಪೌರ ಕಾರ್ಮಿಕರು ಇದ್ದಾರೆ. ಆದರೆ ಪಂಚಾಯಿತಿ ಸಿಬ್ಬಂದಿ ಮಾಹಿತಿ ಪ್ರಕಾರ ಅಂದಾಜು ಜನ ಸಂಖ್ಯೆ 7000ಕ್ಕೆ ತಲುಪಿದೆ. 11 ಮಂದಿ ನೇರ ಪಾವತಿ ಆಧಾರದಲ್ಲಿ ಇದ್ದಾರೆ. ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಾರ್ಮಿಕರ ಅಗತ್ಯವಿದೆ. ತ್ಯಾಜ್ಯ ವಿಲೇವಾರಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈಗ 18 ಜನ ಪೌರ ಕಾರ್ಮಿಕರು 2 ಮಂದಿ ವಾಹನ ಚಾಲಕರಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಪಟ್ಟಣಕ್ಕೆ ಹೊಂದಿಕೊಂಡಂತೆ ಗ್ರಾಮಾಂತರ ಗ್ರಾಮ ಪಂಚಾಯಿತಿ ಹರಂದೂರು ಗ್ರಾಮ ಪಂಚಾಯಿತಿ ಇದ್ದು ತ್ಯಾಜ್ಯ ನಿರ್ವಹಣೆ ದೊಡ್ಡ ಸಮಸ್ಯೆಯಾಗಿದೆ. ರಾಷ್ಟ್ರೀಯ ಹೆದ್ದಾರಿ 169 ರಲ್ಲಿನ ಸಿಗದಾಳು ಘಾಟಿ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಾರ್ಮಿಕರ ಅಗತ್ಯವಿದೆ. ಆದರೂ ಈಗರುವ ನೌಕರರು ಸ್ವಚ್ಛತೆಗೆ ಆದ್ಯತೆ ಕೊಟ್ಟು ಕೆಲಸ ಮಾಡುತಿದ್ದಾರೆ ಎಂದು ಸ್ಥಳೀಯರು ಹೇಳಿದರು.
ಶೇ 40 ಪೌರ ಕಾರ್ಮಿಕರ ಹುದ್ದೆ ಖಾಲಿ
ಮೂಡಿಗೆರೆ: ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಮಂಜೂರಾದ ಹುದ್ದೆಗಳಲ್ಲಿ ಶೇ 40 ಹುದ್ದೆಗಳು ಖಾಲಿಯಿದ್ದು ಇರುವ ಪೌರ ಕಾರ್ಮಿಕರೇ ಒತ್ತಡದ ನಡುವೆ ಕಾರ್ಯ ನಿರ್ವಹಿಸುವಂತಾಗಿದೆ. ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು 15 ಮಂದಿ ಪೌರ ಕಾರ್ಮಿಕರು ಹಾಗೂ 4 ಮಂದಿ ಲೋಡರ್ಸ್ ಹುದ್ದೆ ಮಂಜೂರಾಗಿದೆ. ಅದರಲ್ಲಿ 9 ಕಾಯಂ ಪೌರ ಕಾರ್ಮಿಕರು ಹಾಗೂ ಇಬ್ಬರು ನೇರ ಪಾವತಿ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿದ್ದು ಉಳಿದ ಹುದ್ದೆಗಳೆಲ್ಲವೂ ಖಾಲಿ ಇವೆ. ಕಸ ತುಂಬಲು ನಾಲ್ಕು ಲೋಡರ್ಸ್ ಹುದ್ದೆ ಮಂಜೂರಾಗಿದ್ದರೂ ಭರ್ತಿಯಾಗಿಲ್ಲ. ಸ್ವಚ್ಛತೆಯಲ್ಲಿ ತೊಡಗದ ಪೌರಕಾರ್ಮಿಕರೇ ಲೋಡರ್ಸ್ ಕಾರ್ಯವನ್ನು ಸಹ ನಿರ್ವಹಿಸಬೇಕಾಗಿದೆ. ಹುದ್ದೆ ಖಾಲಿಯಿದ್ದರೂ ಎಲ್ಲಾ ಕಾರ್ಯಗಳನ್ನು ಒತ್ತಡದಲ್ಲಿಯೇ ಪೌರ ಕಾರ್ಮಿಕರು ನಿರ್ವಹಿಸುತ್ತಿದ್ದಾರೆ. ಹುದ್ದೆ ಖಾಲಿ ಇರುವುದರಿಂದ ಪೌರಕಾರ್ಮಿಕರ ಮೇಲೆ ಒತ್ತಡ ಹೆಚ್ಚಾಗಿದೆ. ಪ್ರತಿದಿನ ಕಸ ಸಂಗ್ರಹ ರಸ್ತೆ ಒಳಚರಂಡಿ ಸ್ವಚ್ಚತೆ ಸಂತೆ ಸ್ವಚ್ಚತೆ ಸೇರಿದಂತೆ ಎಲ್ಲವನ್ನೂ ನಿರ್ವಹಿಸಬೇಕಿದೆ. ಇದರಿಂದ ಪೌರಕಾರ್ಮಿಕರಿಗೆ ವಿಶ್ರಾಂತಿ ಇಲ್ಲದೆ ಕೆಲಸ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮಂಜೂರಾಗಿರುವ ಎಲ್ಲಾ ಹುದ್ದೆಗಳನ್ನು ಸರ್ಕಾರ ಕೂಡಲೆ ಭರ್ತಿ ಮಾಡಬೇಕು. ನೇರ ಪಾವತಿ ಯೋಜನೆಯಲ್ಲಿ ಇರುವ ಪೌರ ಕಾರ್ಮಿಕರನ್ನು ಸರ್ಕಾರ ಖಾಯಂಗೊಳಿಸಬೇಕು. ಲೋಡರ್ಸ್ ಹುದ್ದೆಗಳನ್ನು ಭರ್ತಿ ಮಾಡಬೇಕು. ಪಟ್ಟಣದಲ್ಲಿ ಹಿಂದೆ ಸ್ವೀಪರ್ಸ್ ಕಾಲೊನಿ ನಿರ್ಮಿಸಲಾಗಿತ್ತು. ಅದರಂತೆ ಎಲ್ಲಾ ಪೌರ ಕಾರ್ಮಿಕರಿಗೂ ಉಚಿತವಾಗಿ ನಿವೇಶನ ಹಂಚಿಕೆ ಮಾಡಿ ವಸತಿ ಸೌಲಭ್ಯ ಕಲ್ಪಿಸಿಕೊಡಬೇಕು. ಸರ್ಕಾರಿ ನೌಕರರಿಗೆ ಜಾರಿ ಮಾಡಿರುವ ಸಂಜೀವಿನಿ ಯೋಜನೆಯಂತೆ ಪೌರ ಕಾರ್ಮಿಕರಿಗೆ ನಗದು ರಹಿತ ಉಚಿತ ಆರೋಗ್ಯ ಸೇವೆಗೆ ಯೋಜನೆ ರೂಪಿಸಬೇಕು ಎಂದು ಪೌರ ಕಾರ್ಮಿಕರು ಹೇಳುತ್ತಾರೆ.
ಖಾಲಿ ಹುದ್ದೆ: ಕಾರ್ಮಿಕರಿಗೆ ಹೊರೆ
ಕಡೂರು: ಪುರಸಭೆಯಲ್ಲಿ ಒಟ್ಟು 24 ವಾರ್ಡುಗಳಿವೆ. ಸುಮಾರು 2011ರ ಜನಗಣತಿ ಪ್ರಕಾರ 35400 ಜನಸಂಖ್ಯೆಯಿದೆ. ಮಂಜೂರಾಗಿರುವ ಒಟ್ಟು 47 ಹುದ್ದೆಗಳ ಪೈಕಿ 27 ಖಾಯಂ ನೌಕರರು ಇದ್ದಾರೆ. ಇದರಲ್ಲಿ ಎಂಟು ಮಂದಿ ನೇರ ಪಾವತಿ ನೌಕರರಿದ್ದಾರೆ. ಟೆಂಡರ್ ಮೂಲಕ 11 ಸಹಾಯಕರು ಹಾಗೂ 11 ಚಾಲಕರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಅಗತ್ಯವಿರುವ ಪೌರ ಕಾರ್ಮಿಕರ ಸಂಖ್ಯೆ 93. ಆದರೆ ಈಗ ಕಾರ್ಯನಿರ್ವಹಿಸುತ್ತಿರುವ ಸಂಖ್ಯೆ 39. ಅಗತ್ಯವಿರುವ 54 ಪೌರಕಾರ್ಮಿಕರ ಹುದ್ದೆಗಳಲ್ಲಿ ಡ್ರೈವರ್ - 14 ಸಹಾಯಕರು- 11 ಮತ್ತು ಟ್ರಾಕ್ಟರ್ ಲೋಡರ್- 15 ಸೇರಿದ್ದಾರೆ ಎಂದು ಮುಖ್ಯಾಧಿಕಾರಿ ಮಂಜುನಾಥ್ ಮಾಹಿತಿ ನೀಡಿದರು. ಖಾಲಿ ಹುದ್ದೆಗಳಿಂದ ನೇಮಕಾತಿ ಹೊಂದಿರುವ ಕಾರ್ಮಿಕರ ಮೇಲೆ ಒಂದಿಷ್ಟು ಹೆಚ್ಚಿನ ಹೊರೆ ಬೀಳುತ್ತಿರುವುದು ಕಸ ವಿಲೇವಾರಿಯಲ್ಲಿ. ನಿತ್ಯ ಬೆಳಗಿನ ಜಾವ 4 ಗಂಟೆಗೆ ಕೆಲಸ ಆರಂಭಿಸುವ ಪೌರ ಕಾರ್ಮಿಕರಿಗೆ ಕೆಲವೊಮ್ಮೆ ಹೆಚ್ಚುವರಿ ಹೊರೆಯಾಗುತ್ತದೆ. ಪಟ್ಟಣದ ಕೆಲವೆಡೆ ಕಸದ ರಾಶಿಯೇ ಬಿದ್ದಿರುವುದರಿಂದ ಅಲ್ಲಿಯೂ ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಇದೆ.
ತ್ಯಾಜ್ಯ ವಿಲೇವಾರಿ ಸಮಸ್ಯೆ
ಬೀರೂರು: ಪುರಸಭೆಯಲ್ಲಿ ಒಟ್ಟು 23 ವಾರ್ಡ್‌ಗಳಿವೆ. 94 ಮಂಜೂರಾದ ಪೌರ ಕಾರ್ಮಿಕರ ಹುದ್ದೆಗಳಿದ್ದು ಪ್ರಸ್ತುತ 51 ಪೌರ ಕಾರ್ಮಿಕರಿದ್ದಾರೆ. ಪೌರ ಕಾರ್ಮಿಕರೂ ಸೇರಿದಂತೆ ವಿವಿಧ ಕೆಲಸಗಳಿಗಾಗಿ 45 ಹುದ್ದೆಗಳು ಖಾಲಿಯಿದ್ದು ಈಗಿರುವ ಕಾರ್ಮಿಕರೇ ಹೆಚ್ಚುವರಿಯಾಗಿ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ಪಟ್ಟಣದಲ್ಲಿ ಶುಚಿತ್ವ ಸಮಾಧಾನಕರವಾಗಿ ನಿರ್ವಹಣೆಯಾಗುತ್ತಿದೆ. ಆದರೆ ಬೆಳೆಯುತ್ತಿರುವ ಪಟ್ಟಣ ಪಟ್ಟಣದೊಳಗೆ ನಡೆಯುತ್ತಿರುವ ರಸ್ತೆ ಕಾಮಗಾರಿಗಳಿಂದ ಕಸ ಮಣ್ಣು ಮತ್ತಿತರೆ ತ್ಯಾಜ್ಯ ವಿಲೇವಾರಿಗೆ ಸಮಸ್ಯೆಯಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಪ್ರಕಾಶ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.