
ಮೂಡಿಗೆರೆ: ತಾಲ್ಲೂಕಿನಾದ್ಯಂತ ಗುರುವಾರ ಕ್ರೈಸ್ತ ಸಮುದಾಯದವರು ಕ್ರಿಸ್‌ಮಸ್ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದರು.
ಹಬ್ಬದ ಪ್ರಯುಕ್ತ ಪಟ್ಟಣ ಸೇರಿದಂತೆ ಕಸ್ಕೇಬೈಲ್, ಬಣಕಲ್, ಕೊಟ್ಟಿಗೆಹಾರ, ಕೆಳಗೂರು, ಕೂವೆ, ಬಾಳೂರು, ಜಾವಳಿ ಮುಂತಾದ ಚರ್ಚ್‌ಗಳಲ್ಲಿ ಬುಧವಾರ ರಾತ್ರಿ ಕ್ರಿಸ್‌ಮಸ್ ವಿಶೇಷ ಪ್ರಾರ್ಥನೆಯನ್ನು ನಡೆಸಲಾಯಿತು.
ಚರ್ಚ್ ಆವರಣದಲ್ಲಿ ಪಟಾಕಿ ಸಿಡಿಸಿ, ಕೇರಲ್ಸ್ ಹಾಡಿ ಏಸು ಕ್ರಿಸ್ತನ ಜನ್ಮ ದಿನವನ್ನು ಸ್ವಾಗತಿಸಲಾಯಿತು. ರಾತ್ರಿ 12ಕ್ಕೆ ಕೇಕ್ ಕತ್ತರಿಸಿ, ಪಾನೀಯ, ಮಕ್ಕಳಿಗೆ ಚಾಕಲೇಟ್ ವಿತರಿಸಿ ಹಬ್ಬವನ್ನು ಸಂಭ್ರಮಿಸಲಾಯಿತು.
ಗುರುವಾರ ಬೆಳಿಗ್ಗೆ ಮತ್ತೆ ಚರ್ಚ್‌ಗಳಿಗೆ ತೆರಳಿದ ಕ್ರೈಸ್ತ ಸಮುದಾಯದವರು, ಹಬ್ಬದ ಪ್ರಾರ್ಥನೆ ನಡೆಸಿ, ಪರಸ್ಪರ ಶುಭಾಶಯ ಕೋರಿ ಸಂಭ್ರಮಿಸಿದರು. ಹಬ್ಬದ ಅಂಗವಾಗಿ ಚರ್ಚ್‌ಗಳಲ್ಲಿ ಗೋದಾಲಿ ನಿರ್ಮಿಸಿ, ವಿವಿಧ ಬಗೆಯ ಆಕಾಶ ಬುಟ್ಟಿಗಳನ್ನು ಹಾಕಿ ಸಡಗರ ವ್ಯಕ್ತ ಪಡಿಸಲಾಯಿತು.
ಪಟ್ಟಣದ ಸೇಂಟ್ ಅಂತೋಣಿ ಚರ್ಚಿನಲ್ಲಿ ಫಾ.ಮಾರ್ಸೆಲ್ ಪಿಂಟೋ ಹಬ್ಬದ ಪೂಜೆ ನೆರವೇರಿಸಿ ಮಾತನಾಡಿ, ‘ಗೌರವ, ಶಾಂತಿ, ಮಾನವೀಯತೆಯ ಕಂಪನ್ನು ಪಸರಿಸಿದಾಗ ಜಗತ್ತಿನಲ್ಲಿ ವಿಜೃಂಭಿಸುತ್ತಿರುವ ದುಷ್ಕೃತ್ಯವನ್ನು ಬುಡ ಸಮೇತ ಕಿತ್ತೊಗೆಯಲು ಸಾಧ್ಯವಾಗುತ್ತದೆ. ಇದರಿಂದ ಭೂಲೋಕದಲ್ಲಿ ಕ್ರಿಸ್ತರ ಪ್ರೀತಿ ಎಲ್ಲರ ಹೃದಯದಲ್ಲೂ ನೆಲೆಸುತ್ತದೆ. ಮಾನವೀಯತೆ ಹಾಗೂ ಶಾಂತಿಯು ಭೂಲೋಕದಲ್ಲಿಯೇ ಸ್ವರ್ಗವನ್ನು ಸೃಷ್ಟಿಸುತ್ತದೆ' ಎಂದರು.
ಬಣಕಲ್ ಬಾಲಿಕಾ ಮರಿಯ ಚರ್ಚಿನಲ್ಲಿ ಗುರು ಫಾ.ಆದರ್ಶ್ ಸಂದೇಶ ನೀಡಿ, 'ಏಸು ಕ್ರಿಸ್ತರನ್ನು ಪ್ರೀತಿಸಿ ಅವರ ಉದ್ದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಕ್ರಿಸ್ತರು ತಮ್ಮ ಜೀವನವನ್ನು ಮಾರ್ಪಡಿಸಲು ಸಾಧ್ಯವಾಗುತ್ತದೆ. ನಮ್ಮ ಹೃದಯದಲ್ಲಿ ನಿಷ್ಕಳಂಕ ಪ್ರೀತಿ ಇದ್ದರೆ ನಿಜವಾದ ಕ್ರೈಸ್ತ ಜೀವನ ಕುಟುಂಬದಲ್ಲಿ ನೆಲೆಸಲು ಸಾಧ್ಯವಾಗುತ್ತದೆ’ ಎಂದರು.
ಧರ್ಮಗುರು ಫಾ.ಪ್ರೇಮ್ ಲಾರೆನ್ಸ್ ಡಿಸೋಜ ಮಾತನಾಡಿ, ‘ದನದ ಗೋದಲಿಯಲ್ಲಿ ಏಸುಕ್ರಿಸ್ತರು ಜನಿಸಿ ಜನರಿಗೆ ಸರಳತೆಯ ಪ್ರತೀಕವಾಗಿದ್ದಾರೆ. ಅವರ ಜೀವನವೇ ನಮಗೆ ಸಂದೇಶವಾಗಿದೆ. ಕ್ರಿಸ್ತರ ಸಂದೇಶ ಜಗತ್ತಿಗೆ ಸೌಹಾರ್ದದ ಸಂಕೇತವಾಗಿದೆ. ನಾವು ಸಮಾಜದಲ್ಲಿ ಬಡವರು, ದೀನ ದಲಿತರಿಗೆ ನೆರವು ನೀಡುವ ಮೂಲಕ ನೈಜವಾದ ಕ್ರೈಸ್ತ ಜೀವನ ನಡೆಸಬೇಕು’ ಎಂದರು.
ಧರ್ಮಗುರು ಫಾ.ಥಾಮಸ್ ಕಲಘಟಗಿ, ಫಾ.ಡೆನಿಸ್ ಡಿಸೋಜ ಭಾಗವಹಿಸಿದ್ದರು.
ಕೊಟ್ಟಿಗೆಹಾರ ಸೆಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಧರ್ಮಗುರು ಫಾ.ಪ್ರಕಾಶ್ ಮಾತನಾಡಿ 'ಕ್ರಿಸ್ತರ ಜನನದ ಮೂಲಕ ಆಧ್ಯಾತ್ಮಿಕತೆಯ ಮರು ಜನ್ಮವಾಗಿದೆ. ಯೇಸು ಕ್ರಿಸ್ತರ ಮೂಲಕ ಪ್ರೀತಿಯೇ ಧರೆಗಿಳಿದು ಬಂದಿದೆ’ ಎಂದರು.
ಧರ್ಮಗುರು ಫಾ. ವಿಲಿಯಂ ಬರ್ನಾರ್ಡ್ ಮಾತನಾಡಿದರು.
ಕೂವೆ ಪವಿತ್ರ ಕುಟುಂಬದ ಚರ್ಚಿನಲ್ಲಿ ಫಾ.ಲ್ಯಾನ್ಸಿ ಪಿಂಟೊ ಸಂದೇಶ ನೀಡಿ, ‘ಸರ್ವರನ್ನು ಪ್ರೀತಿಯಿಂದ ಕಂಡು ಸಮಾಜದಲ್ಲಿ ಬದುಕುವುದೇ ಕ್ರಿಸ್ತರ ಜೀವನದ ತತ್ವವಾಗಿದೆ. ಸಮಾಜದಲ್ಲಿ ನೆರೆಹೊರೆಯವರು ಸಂಭ್ರಮದಿಂದ ಇರುವಂತೆ ಮಾಡುವುದೇ ಕ್ರಿಸ್‌ಮಸ್ ಸಂದೇಶವಾಗಿದೆ’ ಎಂದರು.
ಕಸ್ಕೇಬೈಲ್ ಚರ್ಚಿನಲ್ಲಿ ಹಾಸನ ಸಂತ ಜೋಸೆಫರ ಕಾಲೇಜಿನ ಪ್ರಾಂಶುಪಾಲ ಫಾ. ರಾಯನ್ ಪಿರೇರಾ ಮಾತನಾಡಿ ‘ಏಸು ಕ್ರಿಸ್ತರು ಯುಗಪುರುಷರಾಗಿ ಲೋಕಕ್ಕೆ ಬಂದು ಶಾಂತಿ ಪ್ರೀತಿ ಬಿತ್ತಿದ್ದಾರೆ. ಅವರಂತೆ ನಾವು ಶಾಂತಿದೂತರಾಗಿ ಬದುಕೋಣ’ ಎಂದರು
ಬೋಧಕ ಫಾ.ಆಲ್ವಿನ್, ಪೀಟರ್ ಬ್ರ್ಯಾಂಕ್, ಫಾ.ಸ್ಟೀವನ್ ಡಿಸೋಜ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.