ADVERTISEMENT

ಬಾಳೆಹೊನ್ನೂರು: ಪ್ರದರ್ಶನ ಮಳಿಗೆಗಳಿಗೆ ಮುಗಿಬಿದ್ದ ಬೆಳೆಗಾರರು

ಶತಮಾನೋತ್ಸವ ಸಮಾರಂಭಕ್ಕೆ ಹರಿದು ಬಂದ ಜನಸಾಗರ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 4:02 IST
Last Updated 22 ಡಿಸೆಂಬರ್ 2025, 4:02 IST
ಬಾಳೆಹೊನ್ನೂರು ಸಮೀಪದ ಸೀಗೋಡಿನ ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಸಮಾರಂಭದ ಪ್ರದರ್ಶನ ಮಳಿಗೆಗಳಿಗೆ ಮುಗಿಬಿದ್ದ ಜನ
ಬಾಳೆಹೊನ್ನೂರು ಸಮೀಪದ ಸೀಗೋಡಿನ ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಸಮಾರಂಭದ ಪ್ರದರ್ಶನ ಮಳಿಗೆಗಳಿಗೆ ಮುಗಿಬಿದ್ದ ಜನ   

ಸೀಗೋಡು(ಬಾಳೆಹೊನ್ನೂರು): ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಸಮಾರಂಭದ ಎರಡನೇ ದಿನ ವಿವಿಧ ಭಾಗಗಳಿಂದ ಬಂದಿದ್ದ ಜನಸ್ತೋಮ ಪ್ರದರ್ಶನ ಮಳಿಗೆಗಳಿಗೆ ಮುಗಿಬಿದ್ದರು.

ಭಾನುವಾರ ರಜಾ ದಿನವಾದ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ರಾಷ್ಟ್ರದ ವಿವಿಧ ಭಾಗಗಳಿಂದ ಬೆಳೆಗಾರರು ಬಂದು, ಆಸಕ್ತಿಯಿಂದ ಮೂರು ಗೋಷ್ಠಿಗಳಲ್ಲೂ ಭಾಗವಹಿಸಿದರು. ಚಿಕ್ಕಮಗಳೂರು-ಶೃಂಗೇರಿ ರಾಜ್ಯ ಹೆದ್ದಾರಿಯ ಸೀಗೋಡಿನಲ್ಲಿ ವಾಹನ ನಿಲುಗಡೆ ಜಾಗ ಭರ್ತಿಯಾಗಿತ್ತು.

ಅತಿಥಿಗಳಿಗೆ ಪ್ರತ್ಯೇಕವಾಗಿ ಆಯೋಜಿಸಿದ್ದ ಊಟದ ವ್ಯವಸ್ಥೆ ಅಚ್ಚುಕಟ್ಟಾಗಿತ್ತು. ಎರಡನೇ ದಿನವೂ ಕಾಫಿ ಸಂಶೋಧನಾ ಕೇಂದ್ರದ ವತಿಯಿಂದ ಬಂದಿದ್ದ ಎಲ್ಲರಿಗೂ ಕುಡಿಯುವಷ್ಟು ಉಚಿತವಾಗಿ ಕಾಫಿ ವಿತರಿಸಲಾಯಿತು. ಬ್ರೂ, ಲೆವಿಸ್ಟಾ ಸೇರಿದಂತೆ ಹಲವು ಪ್ರತಿಷ್ಠಿತ ಕಂಪನಿಗಳು ಪ್ರದರ್ಶನ ಮಳಿಗೆಗಳಲ್ಲಿ ಮಳಿಗೆ ತೆರೆದಿದ್ದವು. ಕಾಫಿ ತೋಟದ ಒಳಭಾಗದಲ್ಲಿದ್ದ ಕ್ಷೇತ್ರ ಪ್ರಾತ್ಯಕ್ಷಿಕೆ ಸ್ಥಳಕ್ಕೆ ಬೆಳೆಗಾರರು ತೆರಳಿ ಮಾಹಿತಿ ಪಡೆದರು.

ADVERTISEMENT

‘ಶನಿವಾರ’ (ಡಿ.20) 12 ಸಾವಿರ ಜನ ಭೇಟಿ ನೀಡಿದ್ದಾರೆ. ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ. ದೇಶದಾದ್ಯಂತ 10 ಸಾವಿರ ಕಾಫಿ ಕಿಯೋಸ್ಕ್ ಆರಂಭಿಸುವ ಮೂಲಕ ದೇಶದಲ್ಲಿ ಆಂತರಿಕ ಬಳಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಮಹಿಳೆಯರಿಗೂ ತರಬೇತಿ ನೀಡಿ 500 ಕಿಯೋಸ್ಕ್‌ಗಳನ್ನು ಮಹಿಳೆಯರಿಗೆ ಮೀಸಲಿಡುವ ಚಿಂತನೆ ನಡೆದಿದೆ. ಸೀಗೋಡು ವೃತ್ತದಲ್ಲಿ ಕಂದಾಯ ಇಲಾಖೆ ಜಾಗ ನೀಡಿದರೆ ದೇಶದಲ್ಲೇ ಪ್ರಥಮವಾಗಿ ಇಂಡಿಯನ್ ಕಾಫಿ ಹೌಸ್ ತೆರೆಯಲಾಗುವುದು’ ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಹೇಳಿದರು.

ನಾಗಾಲ್ಯಾಂಡ್ ರಾಜ್ಯದ ಬೀರೇನ್ ಚೆಟ್ರಿ ಜಿಸ್ಸಿ ಪ್ಲೂವಾ ಮತ್ತು ಅಸ್ಸೀ ಜಮೀಲಾ
ಮೂರು ಎಕರೆ ಪ್ರದೇಶದಲ್ಲಿ ಕಾಫಿ ಬೆಳೆದಿದ್ದೇನೆ. ನಾವು ರಾಸಾಯನಿಕ ಗೊಬ್ಬರ ಬಳಸುವುದಿಲ್ಲ. ಬೆಳೆ ವಿಸ್ತರಣೆ ಮಾಡಬೇಕೆಂಬ ಆಸಕ್ತಿಯಿಂದ ಇಲ್ಲಿಗೆ ಬಂದಿದ್ದೇನೆ. ಇಲ್ಲಿನ ಉತ್ತಮ ವಾತಾವರಣ ಮನಸ್ಸಿಗೆ ಖುಷಿ ನೀಡಿದೆ
ಪಿ.ಎ.ಸಂಗ್ಮಾ ಕಾಫಿ ಬೆಳೆಗಾರ ಸಿಕ್ಕಿಂ ರಾಜ್ಯ

‘ಸಾವಯವ ಪದ್ಧತಿಯಲ್ಲೇ ಕಾಫಿ ಬೆಳೆಯುತ್ತಿದ್ದೇವೆ’

2016-17ರಿಂದ ಕಾಫಿ ಕೃಷಿ ಆರಂಭಿಸಿದ್ದು ಇದುವರೆಗೂ 540 ಎಕರೆ ಪ್ರದೇಶದಲ್ಲಿ ಕಾಫಿ ಬೆಳೆಯನ್ನು ವಿಸ್ತರಿಸಲಾಗಿದೆ. ನಾವೀಗ ಕಾಫಿ ಬೆಳೆಯ ಆರಂಭಿಕ ಹಂತದಲ್ಲಿದ್ದೇವೆ. ನಮ್ಮಲ್ಲಿ ಬಹುತೇಕ ಸಣ್ಣ ಬೆಳೆಗಾರರೇ ತುಂಬಿದ್ದಾರೆ. ಕಳೆದ ವರ್ಷ ಒಂದು ಜಿಲ್ಲೆಯಲ್ಲಿ 5 ಸಾವಿರ ಕಿಲೋ ಕಾಫಿ ಬೆಳೆ ಪಡೆದಿದ್ದೇವೆ. ಕಾಫಿ ಮಂಡಳಿ ನಮ್ಮಲ್ಲಿ ಬೆಳೆಗಾರರಿಗೆ ನಾಟಿ ಮಾಡಲು ಕಾಫಿ ಬೀಜಗಳನ್ನು ನೀಡುವ ಮೂಲಕ ನಮ್ಮ ನೆರವಿಗೆ ಧಾವಿಸಿದೆ. ಶೇ 100ರಷ್ಟು ನಾವು ಸಾವಯವ ಪದ್ಧತಿಯಲ್ಲೇ ಕಾಫಿ ಬೆಳೆಯುತ್ತಿದ್ದೇವೆ ಎನ್ನುತ್ತಾರೆ ನಾಗಾಲ್ಯಾಂಡ್‌ನ ಬೀರೇನ್ ಚೆಟ್ರಿ ಜಿಸ್ಸಿ ಪ್ಲೂವಾ ಮತ್ತು ಅಸ್ಸೀ ಜಮೀಲಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.