ಕಳಸ (ಚಿಕ್ಕಮಗಳೂರು): ಮೇ ತಿಂಗಳಿನಿಂದ ಈಚೆಗೆ ಕುಸಿಯುತ್ತಿದ್ದ ಕಾಫಿ ಧಾರಣೆಯು ಎರಡು ವಾರಗಳಿಂದ ಏರಿಕೆಯ ಹಾದಿಯಲ್ಲಿದೆ. ಇದು ಬೆಳೆಗಾರರಲ್ಲಿ ಭರವಸೆ ಮೂಡಿಸಿದೆ.
ಲಂಡನ್ ಮಾರುಕಟ್ಟೆಯಲ್ಲಿ ರೊಬಸ್ಟಾ ಕಾಫಿ ಧಾರಣೆ ವಾರದಲ್ಲಿ ಶೇ 18ರಷ್ಟು ಏರಿಕೆ ಕಂಡು, ಟನ್‌ಗೆ 4,067 ಡಾಲರ್‌ಗೆ ತಲುಪಿದೆ. ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಅರೇಬಿಕಾ ಕಾಫಿ ಶೇ 10ರಷ್ಟು ಏರಿಕೆ ಕಂಡು, ಪೌಂಡ್ ಒಂದಕ್ಕೆ 334 ಸೆಂಟ್ಸ್ ಬೆಲೆ ಪಡೆದಿದೆ.
ಇದರಿಂದಾಗಿ ದೇಶಿ ಮಾರುಕಟ್ಟೆಯಲ್ಲಿ ರೊಬಸ್ಟಾ ಕಾಫಿ ಬೆಳೆ ಕೆ.ಜಿ.ಗೆ ₹455ರಂತೆ ಹಾಗೂ ಅರೇಬಿಕಾ ಬೆಳೆ ಕೆ.ಜಿಗೆ ₹545ಕ್ಕೆ ಮಾರಾಟವಾಗುತ್ತಿದೆ. ಮೇ 3ನೇ ವಾರದಿಂದ ಸತತವಾಗಿ ಕುಸಿದಿದ್ದ ಕಾಫಿ ಬೆಲೆ ಬೆಳೆಗಾರರಲ್ಲಿ ಆತಂಕ ಮೂಡಿಸಿತ್ತು.
ಇದೀಗ ಕಾಫಿ ಬೆಲೆ ಏರಿಕೆಗೆ ಬ್ರೆಜಿಲ್‌ನ ಕೆಲ ಪ್ರದೇಶದಲ್ಲಿ ಬಿದ್ದಿರುವ ಮಂಜು ಪ್ರಮುಖ ಕಾರಣ ಎನ್ನಲಾಗುತ್ತಿದೆ. ಜೊತೆಗೆ ಬ್ರೆಜಿಲ್ ವಾಣಿಜ್ಯ ಸಚಿವಾಲಯ ಕಳೆದ ವಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ ಜುಲೈ ತಿಂಗಳಲ್ಲಿ ಶೇ 20ಕ್ಕೂ ಕಡಿಮೆ ಪ್ರಮಾಣದಲ್ಲಿ ಕಾಫಿ ರಫ್ತು ಮಾಡಲಾಗಿದೆ. ಸೀ ಕೆಫೆ ಸಂಸ್ಥೆಯ ಪ್ರಕಾರ ಬ್ರೆಜಿಲ್ ದೇಶದ ಜುಲೈ ತಿಂಗಳ ರಫ್ತಿನಲ್ಲಿ ಅರೇಬಿಕಾ ಕಾಫಿ ಪ್ರಮಾಣ ಶೇ 21 ಮತ್ತು ರೊಬಸ್ಟಾ ಕಾಫಿ ಪ್ರಮಾಣ ಶೇ 49ಕ್ಕೆ ಕುಸಿದಿದೆ. ಇದರಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾದ ಕೊರತೆ ಕೂಡ ಈಗಿನ ಕಾಫಿ ಬೆಲೆಯ ದಿಢೀರ್ ಏರಿಕೆಗೆ ಕಾರಣ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇನ್ನೊಂದೆಡೆ ಬ್ರೆಜಿಲ್‌ನಿಂದ ಅಮೆರಿಕಕ್ಕೆ ರಫ್ತಾಗುವ ಕಾಫಿ ಮೇಲೆ ಅಧ್ಯಕ್ಷ ಟ್ರಂಪ್ ಶೇ 50ರಷ್ಟು ಸುಂಕ ವಿಧಿಸಿದ್ದಾರೆ. ಇದರಿಂದಾಗಿ ರಫ್ತು ಮಾರುಕಟ್ಟೆಯಲ್ಲಿ ಸುಂಕದ ಬಗೆಗಿನ ಗೊಂದಲವು ಸದ್ಯಕ್ಕೆ ಕಾಫಿ ರಫ್ತು ಮತ್ತು ಬೆಲೆ ಮೇಲೆ ಗಮನಾರ್ಹ ಪರಿಣಾಮ ಬೀರುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.