ಡೂರು (ಚಿಕ್ಕಮಗಳೂರು): ತಾಲ್ಲೂಕಿನ ಸಖರಾಯಪಟ್ಟಣ ಗ್ರಾಮದಲ್ಲಿ ಬಜರಂಗದಳ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಗುಂಪಿನ ನಡುವೆ ನಡೆದ ಘರ್ಷಣೆಯಲ್ಲಿ ಗ್ರಾಮ ಪಂಚಾಯಿತಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಗಣೇಶ ಗೌಡ (38) ಮೃತಪಟ್ಟಿದ್ದಾರೆ.
ಗಣೇಶ ಗೌಡ ಮತ್ತು ಬಜರಂಗ ದಳ ಕಾರ್ಯಕರ್ತ ಸಂಜಯ್ ನಡುವೆ ಶುಕ್ರವಾರ ಸಂಜೆ ಜಗಳ ಆರಂಭವಾಗಿ ಹೊಡೆದಾಟ ನಡೆದಿತ್ತು. ಬಳಿಕ ಮದ್ಯದ ಅಂಗಡಿ ಬಳಿ ಸಂಜಯ್ ಮತ್ತು ಸ್ನೇಹಿತರು ಗಣೇಶ ಗೌಡ ಅವರ ಮೇಲೆ ಹಲ್ಲೆ ನಡೆಸಿದ್ದರು.
ಸಖರಾಯಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಕಲ್ಮರಡಿ ಮಠದ ಬಳಿ ಕಾರ್‌ನಲ್ಲಿ ಬಂದ ಗಣೇಶ ಗೌಡ ತಂಡದ ಮೇಲೆ ಸಂಜಯ್ ಮತ್ತು ಸ್ನೇಹಿತರು ಕಲ್ಲು ತೂರಾಟ ನಡೆಸಿದ್ದರು. ಈ ಸಂದರ್ಭದಲ್ಲಿ ಗಣೇಶ ಗೌಡ ಅವರ ಜತೆಗಿದ್ದವರು ಓಡಿದ್ದಾರೆ. ಒಬ್ಬರೇ ಇದ್ದ ಗಣೇಶ ಗೌಡ ಅವರ ಮೇಲೆ ಮತ್ತೊಂದು ಗುಂಪಿನವರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತಲೆಗೆ ಪೆಟ್ಟಾಗಿದ್ದರಿಂದ ಅವರು ಮೃತಪಟ್ಟರು.
ಶನಿವಾರ ಬೆಳಿಗ್ಗೆ ಶವವನ್ನು ಸಖರಾಯಪಟ್ಟಣಕ್ಕೆ ತಂದಾಗ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಬಜರಂಗದಳ ಮತ್ತು ಬಿಜೆಪಿ ವಿರುದ್ಧ ಘೋಷಣೆ ಕೂಗಿ ಹತ್ಯೆ ನಡೆಸಿದವರನ್ನು ಬಂಧಿಸುವಂತೆ ಆಗ್ರಹಿಸಿದರು.
ಶಾಸಕ ಎಚ್.ಡಿ. ತಮ್ಮಯ್ಯ, ಮುಖಂಡರಾದ ಬಿ.ಎಲ್. ಶಂಕರ್ ಮತ್ತು ಮಹಡಿಮನೆ ಸತೀಶ್
ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಚ್.ಡಿ. ತಮ್ಮಯ್ಯ, ‘ಐವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಮತ್ತು ನಾನು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಈ ಪ್ರಕರಣದ ಹಿಂದೆ ಎಷ್ಟೇ ಪ್ರಭಾವಿಗಳಿದ್ದರೂ
ಬಂಧಿಸುವಂತೆ ತಿಳಿಸಿದ್ದೇವೆ. ಗಣೇಶಗೌಡ ಅವರ ಏಳಿಗೆ ಸಹಿಸದ ಎದುರಾಳಿಗಳು ಈ ಕೃತ್ಯ ನಡೆಸಿದ್ದಾರೆ’ ಎಂದರು.
ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಕುರಿತು ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿರುವೆಸಿದ್ದರಾಮಯ್ಯ, ಮುಖ್ಯಮಂತ್ರಿ
ಘರ್ಷಣೆಯಲ್ಲಿ ಗಾಯಗೊಂಡಿರುವ ಮತ್ತೊಂದು ಗುಂಪಿನ ಸಂಜಯ್ ಮತ್ತು ನಿತೀನ್ ಕೂಡ ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಣೇಶ್‌ಗೌಡ ಹತ್ಯೆ ಪ್ರಕರಣದಲ್ಲಿ ಇಬ್ಬರಿಗೂ ಜೈಲ್ ಗಾರ್ಡ್(ಕಾವಲಿಗೆ ಪೊಲೀಸರ ನಿಯೋಜನೆ) ಹಾಕಿದ್ದಾರೆ. ಸಖರಾಯಪಟ್ಟಣದಲ್ಲಿ ಬಿಗುವಿನ ವಾತಾವರಣ ಇರುವುದರಿಂದ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
‘ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ. ಆಸ್ಪತ್ರೆಯಲ್ಲಿರುವ ಇಬ್ಬರಿಗೆ ಜೈಲ್ ಗಾರ್ಡ್ ಹಾಕಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.