ಕಡೂರು: ತಾಲ್ಲೂಕಿನ ಹಲವೆಡೆ ಬೆಳೆ ಸಮೀಕ್ಷೆ ಸಂದರ್ಭದಲ್ಲಿ ಪಹಣಿಯಲ್ಲಿ ಬೆಳೆ ವಿವರಗಳು ಮತ್ತು ಭೂ ಮಾಲೀಕರ ವಿವರ ಲಭ್ಯವಾಗುತ್ತಿಲ್ಲ ಎಂದು ರೈತರು ದೂರಿದ್ದಾರೆ.
ಕಡೂರು ತಾಲ್ಲೂಕಿನ ಹಲವಾರು ಭಾಗಗಳಲ್ಲಿ ಈ ಸಮಸ್ಯೆ ಎದುರಾಗಿದೆ. ನಾವು ನಮ್ಮ ಅಜ್ಜನ ಕಾಲದಿಂದ ಈ ಭೂಮಿಯಲ್ಲಿ ಉಳುಮೆ ಮಾಡುತ್ತಿದ್ದರೂ ಎಲ್ಲ ದಾಖಲೆ ಒದಗಿಸಿ ಸರ್ವೇ ಸ್ಕೆಚ್ ಮಾಡಿಸಿದ ಮೇಲೆ 2018ರಲ್ಲಿ ನಮಗೆ ಹಕ್ಕುಪತ್ರ ದೊರೆತಿತ್ತು. ಕಳೆದ ಬಾರಿ ಮುಂಗಾರು ಹಂಗಾಮಿನಲ್ಲಿ ಬೆಳೆ ನಮೂದಿಸಿ ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟ ಮಾಡಿದ್ದೇವೆ. ಈ ಬಾರಿ ಬೆಳೆ ಸಮೀಕ್ಷೆ ನಡೆಸಲು ಕಂದಾಯ ಇಲಾಖೆ ಸಿಬ್ಬಂದಿ ಬಂದಾಗ ಅಪ್ಲಿಕೇಷನ್ ತೆರೆಯುತ್ತಿಲ್ಲ. ನಾವು ಭೂ ಪರಿವರ್ತನೆಗೆ ಅರ್ಜಿಯೇ ಸಲ್ಲಿಸಿಲ್ಲ. ಆದರೂ ಕೃಷಿಯೇತರ ಉಪಯೋಗ ಎಂದು ನಮೂದಾಗಿದೆ. ಇದರಿಂದ ನಾವು ಬೆಳೆ ವಿಮೆ ಪಾವತಿಸಲು ಸಾಧ್ಯವಾಗಿಲ್ಲ. ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ನಮಗೆ ನಷ್ಟವಾದರೆ ಯಾರನ್ನು ಕೇಳುವುದು? ಬೆಂಬಲಬೆಲೆಯಲ್ಲಿ ಧಾನ್ಯ ಮಾರಾಟ ಮಾಡುವುದು ಹೇಗೆ ಎನ್ನುವುದು ತಿಳಿಯುತ್ತಿಲ್ಲ ಎಂದು ಬೀರೂರು ಕಾವಲಿನ ವಲಯದಲ್ಲಿ ಉಳುಮೆ ಮಾಡುವ ಹುಲ್ಲೇಹಳ್ಳಿಯ ನಂಜುಂಡಪ್ಪ ಅಳಲು ತೋಡಿಕೊಂಡರು.
‘ಈ ವಿಷಯವಾಗಿ ತಾಲ್ಲೂಕು ಕಚೇರಿಯನ್ನು ಸಂಪರ್ಕಿಸಿದರೆ ಈ ಜಮೀನುಗಳು ಅಕ್ರಮ ಮಂಜೂರಾತಿ ಎಂದು ಗುರುತಿಸಲ್ಪಟ್ಟಿದ್ದು, ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಅಧಿಕೃತಗೊಳ್ಳಬೇಕು ಎಂದು ಹೇಳುತ್ತಾರೆ’ ಎಂದು ನಂಜುಂಡಪ್ಪ ವಿವರಿಸಿದರು.
ನಾವು ಬೆಳೆ ಸಮೀಕ್ಷೆಗೆ ಹೋದರೆ ಕೆಲ ಪ್ಲಾಟ್ ಅಥವಾ ಬ್ಲಾಕ್‌ಗಳಲ್ಲಿ ಜಿಪಿಎಸ್ ತೆರೆಯುತ್ತಿಲ್ಲ. ಕಳೆದ ಬಾರಿ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಸರ್ವೇ ಯಶಸ್ವಿಯಾಗಿತ್ತು. ಈ ಬಾರಿ ಎಷ್ಟೋ ರೈತರ ಹೆಸರುಗಳು ಕಂದಾಯ ಇಲಾಖೆಯ ಪಟ್ಟಿಯಿಂದಲೇ ನಾಪತ್ತೆಯಾಗಿವೆ. ಮುಂಗಾರು ಸಮೀಕ್ಷೆಯಲ್ಲಿ ಬೆಳೆ ನಮೂದು ಆಗದಿದ್ದರೆ ರೈತರು ಬೆಂಬಲ ಬೆಲೆಯಲ್ಲಿ ಆಹಾರಧಾನ್ಯ ಮಾರಾಟ ಮಾಡಲು ಸಾಧ್ಯ ಆಗುವುದಿಲ್ಲ. ಪಹಣಿಯಲ್ಲಿ ಭೂ ಮಾಲೀಕರ ಹೆಸರು ನಮೂದಾಗದಿದ್ದರೆ ಫ್ರೂಟ್ಸ್ ಐಡಿ (ರೈತರ ಐಡಿ)ಯಿಂದ ಹೊರಗೆ ಉಳಿದು ವಿಮೆ ಅಥವಾ ಬೀಜ, ಗೊಬ್ಬರ ಖರೀದಿ, ಕೃಷಿ ಸಲಕರಣೆಗಳು ಸೇರಿ ಸರ್ಕಾರದ ಸೌಲಭ್ಯಗಳು ಪಡೆಯಲು ಸಾಧ್ಯವಾಗುವುದಿಲ್ಲ ಹಾಗೂ ಬ್ಯಾಂಕ್ ಸಾಲ ಪಡೆಯಲೂ ತೊಂದರೆಯಾಗುತ್ತದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಬೆಳೆ ಸಮೀಕ್ಷೆ ಕೈಗೊಂಡಿರುವ ಸಿಬ್ಬಂದಿ.
ಸರ್ಕಾರಿ ಭೂಮಿ, ಗೋಮಾಳ, ಕಂದಾಯ ಇಲಾಖೆಗೆ ಸೇರಿದ ಭೂಮಿ, ಅರಣ್ಯ ಮೀಸಲು ಭೂಮಿಗಳಲ್ಲಿ ಉಳುಮೆ ಮಾಡಿದ್ದರೆ ಅದು ಭೂಮಿ ತಂತ್ರಾಂಶದಲ್ಲಿಯೇ ತಡೆ ಹಿಡಿಯಲ್ಪಡುತ್ತದೆ. ಅಕ್ರಮ ಸಾಗುವಳಿ, ಅಕ್ರಮ ಮಂಜೂರಾತಿಯ ವಿಷಯವಾಗಿ ತಾಲ್ಲೂಕಿನಲ್ಲಿ ತನಿಖೆಯೂ ನಡೆಯುತ್ತಿದ್ದು, ಅರ್ಹ ರೈತರಿಗೆ ಯಾವ ಸಮಸ್ಯೆಯೂ ಆಗುವುದಿಲ್ಲ ಎನ್ನುತ್ತವೆ ಕಂದಾಯ ಇಲಾಖೆ ಮೂಲಗಳು.
ಅರ್ಹ ಫಲಾನುಭವಿ ರೈತರಿಗೆ ಸಮಸ್ಯೆ ಆಗಿದ್ದರೆ ಸಂಬಂಧಿಸಿದ ವೃತ್ತದ ಗ್ರಾಮ ಲೆಕ್ಕಾಧಿಕಾರಿ ಬಳಿ ಮಾಹಿತಿ ನೀಡಿ ಅವರಿಂದ ವರದಿ ಹಾಕಿಸಿದರೆ ಸಮಸ್ಯೆ ಸರಿಪಡಿಸಲಾಗುವುದುಸಿ.ಎಸ್.ಪೂರ್ಣಿಮಾ ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.