ADVERTISEMENT

ಪರ್ಯಾಯ ಆದಾಯ ಮೂಲ |ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪಿಸಿ: ಪಶುಪಾಲನಾ ಇಲಾಖೆ

ರವಿಕುಮಾರ್ ಶೆಟ್ಟಿಹಡ್ಲು
Published 3 ಮಾರ್ಚ್ 2026, 7:11 IST
Last Updated 3 ಮಾರ್ಚ್ 2026, 7:11 IST
   

ಕೊಪ್ಪ: ತಾಲ್ಲೂಕಿನಲ್ಲಿ ಅಡಿಕೆ ಬೆಳೆಗೆ ಎಲೆಚುಕ್ಕಿ, ಹಳದಿ ಎಲೆ ರೋಗ, ಕಾಳು ಮೆಣಸಿಗೆ ಸೊರಗು ರೋಗ ಬಾಧಿಸುತ್ತಿದೆ. ಹವಾಮಾನ ವೈಪರೀತ್ಯದಿಂದ ಕಾಫಿ ಉತ್ಪಾದನೆಯೂ ಕುಸಿತವಾಗುತ್ತಿದೆ. ಈ ಹಿನ್ನೆಲೆ ಪರ್ಯಾಯ ಆದಾಯ ಮೂಲದ ಚರ್ಚೆಗಳು ಶುರುವಾಗಿವೆ.

ಎಂತಹ ಬರಗಾಲದಲ್ಲಿಯೂ ಬಯಲುಸೀಮೆ ಭಾಗದಲ್ಲಿ ಹೈನುಗಾರಿಕೆ ಬಸವಳಿಯದ ಉದಾಹರಣೆಗಳಿವೆ. ಮಲೆನಾಡಿನಲ್ಲೂ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸ್ಥಾಪಿಸಿ, ಹೈನುಗಾರಿಕೆಗೆ ಉತ್ತೇಜನ ನೀಡಿದರೆ ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಸಾಧ್ಯವಿದೆ ಎಂದು ಪಶುಪಾಲನಾ ಇಲಾಖೆ ಅಭಿಪ್ರಾಯಪಟ್ಟಿದೆ.

ಹೈನುಗಾರಿಕೆ ಉತ್ತೇಜಿಸಲು ರೈತರಿಗೆ ನೇರ ಆರ್ಥಿಕ ನೆರವು, ಪಶು ಆಹಾರ ಸಹಾಯಧನ, ಪ್ರತಿ ಲೀಟರ್ ಹಾಲಿಗೆ ₹5 ಸರ್ಕಾರಿ ಪ್ರೋತ್ಸಾಹಧನ, ಉತ್ತಮ ಜಾನುವಾರುಗಳ ಆಯ್ಕೆ, ಚಿಕಿತ್ಸಾ ಸೌಲಭ್ಯಗಳ ಒದಗಿಸುವಿಕೆ ಹಾಗೂ ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ರೈತರಿಗೆ ಬಲ ಸಿಗುತ್ತದೆ. ಕೊಪ್ಪ ಹೊರತುಪಡಿಸಿ ತಾಲ್ಲೂಕಿನ ಇತರ ಭಾಗಗಳಲ್ಲಿ ಸಹಕಾರ ಸಂಘ ಇದೆ. ಆದರೆ, ಕೊಪ್ಪ ತಾಲ್ಲೂಕಿನಲ್ಲಿಯೇ ಇಲ್ಲ. ಬೇರೆ ತಾಲ್ಲೂಕುಗಳಲ್ಲಿ ಇದೆ ಎಂದು ಇಲಾಖೆ ತಿಳಿಸಿದೆ.

ADVERTISEMENT

ಈ ಹಿಂದೆ ಕೃಷಿಯೊಂದಿಗೆ ಜಾನುವಾರು ಸಾಕಾಣಿಕೆ ಪ್ರಮುಖವಾಗಿತ್ತು. ಈಗ ತಾಲ್ಲೂಕಿನಲ್ಲಿ ದನಗಳ ಸಂಖ್ಯೆ ಕುಸಿದಿದೆ. ನೆಲಹಾಸು, ಹಾಲು ಕರೆಯುವ ಯಂತ್ರ, ಉಚಿತ ಮೇವಿನ ಬೀಜ, ಲಸಿಕೆ, ತುರ್ತು ಚಿಕಿತ್ಸೆ, ಆಕಸ್ಮಿಕ ಮರಣ ಪರಿಹಾರ, ಹೆಣ್ಣುಕರು ಜನಿಸುವ ವೀರ್ಯ ನಳಿಕೆ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೊಟ್ಟಿಗೆ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳಿದ್ದರೂ ಜಾನುವಾರು ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಪಶುಪಾಲನಾ ಇಲಾಖೆಯ ಅಂಕಿ–ಅಂಶಗಳ ಪ್ರಕಾರ ತಾಲ್ಲೂಕಿನಲ್ಲಿ 5 ವರ್ಷಗಳ ಹಿಂದೆ ಸುಮಾರು 37 ಸಾವಿರದಷ್ಟಿದ್ದ  ಜಾನುವಾರುಗಳ ಸಂಖ್ಯೆ ಈಹ 10ಸಾವಿರದಿಂದ 12 ಸಾವಿರಕ್ಕೆ ಇಳಿಕೆಯಾಗಿದೆ. ಜಾನುವಾರು ನಿರ್ವಹಣಾ ವೆಚ್ಚ ಏರಿಕೆ, ರಾಸಾಯನಿಕ ಗೊಬ್ಬರ ಅವಲಂಬನೆ, ರೈತರು ಭತ್ತ ಬೆಳೆಯುವುದನ್ನು ಬಿಟ್ಟು ವಾಣಿಜ್ಯ ಬೆಳೆಗಳಿಗೆ ತಿರುಗಿರುವುದು ಪ್ರಮುಖ ಕಾರಣಗಳೆಂದು ಗುರುತಿಸಲಾಗಿದೆ.

ಭತ್ತ ಬೆಳೆಯುತ್ತಿದ್ದ ರೈತಾಪಿ ವರ್ಗ ಅದರ ಖರ್ಚು– ವೆಚ್ಚಗಳನ್ನು ನಿಭಾಯಿಸಲಾಗದೆ, ವಾಣಿಜ್ಯ ಬೆಳೆಗಳತ್ತ ಮುಖ ಮಾಡಿದಂತೆ ದನಗಳ ಸಾಕಾಣಿಕೆ ಕಡಿಮೆಯಾಯಿತು. ದನಗಳಿಗೆ ಮೇವು ಆಗಿದ್ದ ಭತ್ತದ ಹುಲ್ಲಿನ ಕೊರತೆ ಎದುರಾದಾಗ ಹಾಗೂ ಸಾವಯವ ಗೊಬ್ಬರದ ಬದಲಾಗಿ ರಾಸಾಯನಿಕ ಗೊಬ್ಬರ ಅವಲಂಬನೆ ಹೆಚ್ಚಾದ ಬಳಿಕ, ಗೋಮಾಳ, ಸೊಪ್ಪಿನ ಬೆಟ್ಟ ಜಾಗವನ್ನು ಅರಣ್ಯ ಇಲಾಖೆ ಸ್ವಾಧೀನಪಡಿಸಿಕೊಂಡಿತು. ಇದರಿಂದ ದನಗಳ ಸಾಕಾಣಿಕೆಯಿಂದ ಕೃಷಿಕರು ದೂರ ಸರಿಯುತ್ತಾ ಬಂದರು. ಆದರೆ, ಹೈನುಗಾರಿಕೆಯನ್ನು ಪುನಃಶ್ಚೇತನಗೊಳಿಸುವತ್ತ ಗಮನ ಹರಿಸಬೇಕು ಎಂದು ಇಲಾಖೆ ಸೂಚಿಸಿದೆ.

ಈಗಿನ ಪರಿಸ್ಥಿತಿಯಲ್ಲಿ ಮಲೆನಾಡಿನಲ್ಲಿ ಅಡಿಕೆ ಬೆಳೆ ಕಷ್ಟ. ಪರ್ಯಾಯವಾಗಿ ಹೈನುಗಾರಿಕೆಗೆ ಆದ್ಯತೆ ಸಿಗಬೇಕು. ಪೂರಕ ಸವಲತ್ತುಗಳೊಂದಿಗೆ ಸರ್ಕಾರ ಹಾಲಿನ ಡೇರಿ ಸ್ಥಾಪಿಸಬೇಕು
ಅರುಣ್ ಶಿವಪುರ, ಕೃಷಿಕ
ಈ ಭಾಗದಲ್ಲಿ ಅಡಿಕೆ ನಶಿಸುತ್ತಿರುವುದರಿಂದ ರೈತರಿಗೆ ಹೈನುಗಾರಿಕೆ ಅನಿವಾರ್ಯ. ಸರ್ಕಾರ ಶೀತಲೀಕರಣ ಘಟಕ ಸ್ಥಾಪಿಸಿ, ಹಾಲು ಕೊಂಡೊಯ್ಯುವ ವ್ಯವಸ್ಥೆ ಕಲ್ಪಿಸಬೇಕು
ನವೀನ್ ಕರುವಾನೆ, ರೈತ ಸಂಘದ ಅಧ್ಯಕ್ಷ

ಇಚ್ಛಾಶಕ್ತಿ ಕೊರತೆ: ಯೋಜನೆಗಳು ನನೆಗುದಿಗೆ

ಪರಿಸರ ಸಂರಕ್ಷಣೆ ಮತ್ತು ಮಾನವ ಆರೋಗ್ಯದ ದೃಷ್ಟಿ ಯಿಂದ ಜಾನುವಾರು ಸಾಕಾಣಿಕೆ ಅಗತ್ಯವಾಗಿದೆ. ಆದರೆ, ಲಾಭದ ಲೆಕ್ಕಾಚಾರ, ಕಾರ್ಮಿಕರ ಕೊರತೆ, ಹುಲ್ಲಿನ ಅಭಾವ, ಶೀತಲೀಕರಣ ವೆಚ್ಚ, ಮಾರುಕಟ್ಟೆ ಸಮಸ್ಯೆ ಇತ್ಯಾದಿ ಕಾರಣಗಳಿಂದ ಹಲವರು ಹೈನುಗಾರಿಕೆ ತೊರೆದವರೇ ಹೆಚ್ಚು ಎನ್ನುತ್ತಾರೆ ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪ್ರದೀಪ.

ಹೈನುಗಾರಿಕೆಗೆ ಆಸಕ್ತಿ, ಅನುಭವ ಮತ್ತು ಮಾರುಕಟ್ಟೆ ಬೆಂಬಲ ಅಗತ್ಯ. ಬಯಲುಸೀಮೆ, ಕರಾವಳಿ ಹಾಗೂ ಮಲೆನಾಡಿನ ಅನೇಕ ಭಾಗಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಕೊಪ್ಪ ತಾಲ್ಲೂಕಿನಲ್ಲೂ ಅವಕಾಶವಿದ್ದರೂ ಇಚ್ಛಾಶಕ್ತಿ ಕೊರತೆಯಿಂದ ಯೋಜನೆಗಳು ನೆನೆಗುದಿಗೆ ಬಿದ್ದಿವೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.