ADVERTISEMENT

ಚಿಕ್ಕಮಗಳೂರು | ಶೋಷಣೆ ಸಹಿಸಿಕೊಳ್ಳದೆ ಸಂಘಟಿತರಾಗಿ ಹೋರಾಡಿ: ಚಿಂತಕ ರಾಜ್ ಚಿಂತನ್

ಭೀಮಾ ಕೋರೆಂಗಾವ್ ವಿಜಯೋತ್ಸವ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 8:04 IST
Last Updated 3 ಜನವರಿ 2026, 8:04 IST
ಚಿಕ್ಕಮಗಳೂರಿನಲ್ಲಿ ಭೀಮ್ ಆರ್ಮಿ ಕಾರ್ಯಕರ್ತರು ಬೈಕ್ ರ್‍ಯಾಲಿ ನಡೆಸಿದರು
ಚಿಕ್ಕಮಗಳೂರಿನಲ್ಲಿ ಭೀಮ್ ಆರ್ಮಿ ಕಾರ್ಯಕರ್ತರು ಬೈಕ್ ರ್‍ಯಾಲಿ ನಡೆಸಿದರು   

ಚಿಕ್ಕಮಗಳೂರು: ದಲಿತರು ಈ ದೇಶದ ಮೂಲ ನಿವಾಸಿಗಳು. ಜಾತಿ ಕಾರಣದ ಶೋಷಣೆ ಸಹಿಸಿಕೊಳ್ಳದೆ ಅದರ ವಿರುದ್ಧ ಸಂಘಟಿತರಾಗಿ ಹೋರಾಡಬೇಕು. ಸ್ವಾಭಿಮಾನದಿಂದ ಬದುಕಬೇಕು ಎಂದು ಚಿಂತಕ ರಾಜ್ ಚಿಂತನ್ ತಿಳಿಸಿದರು.

ಭೀಮ್ ಆರ್ಮಿ ವತಿಯಿಂದ ನಗರದಲ್ಲಿ ನಡೆದ ಭೀಮಾ ಕೋರೆಂಗಾವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣ ಮಾಡಿದರು. ದೇಶದ ಮೂಲ ನಿವಾಸಿಗಳೇ ದಲಿತರು. ಅದರಲ್ಲಿ ಯಾವುದೇ ಅನುಮಾನ ಇಲ್ಲ. ಆದರೆ, ನಮ್ಮನ್ನು ಬೇರೆಯವರು ನಮ್ಮನ್ನು ಆಳುತ್ತಿದ್ದಾರೆ. ಏಕೆಂದರೆ ದಲಿತರಿಗೆ ತಮ್ಮ ಶಕ್ತಿ ಸಾಮರ್ಥ್ಯ ಅರ್ಥವಾಗುತ್ತಿಲ್ಲ ಎಂದರು.

‘ಸಂಘಟನೆಗಳು ಒಂದೊಂದು ಪಕ್ಷಕ್ಕೆ ಹಂಚಿ ಹೋದರೆ ಸಂಘಟನೆಯ ಶಕ್ತಿ ಕಡಿಮೆಯಾಗುತ್ತದೆ. ಆದ್ದರಿಂದ ಎಲ್ಲರೂ ಒಟ್ಟಾಗಿ ಶೋಷಣೆಯ ವಿರುದ್ಧ ಹೋರಾಟ ನಡೆಸಬೇಕು. ಸಂವಿಧಾನ ಎಂಬ ಬಲವಾದ ಅಸ್ತ್ರವನ್ನು ಅಂಬೇಡ್ಕರ್ ನಮಗೆ ಕೊಟ್ಟರೂ ಶೋಷಣೆ ಅನುಭವಿಸುತ್ತಿದ್ದೇವೆ. ಅದಕ್ಕೆ ಪ್ರಮುಖ ಕಾರಣ ನಾವುಗಳೇ ಆಗಿದ್ದೇವೆ’ ಎಂದು ಹೇಳಿದರು.

ADVERTISEMENT

ವರ್ಷಕ್ಕೆ 60 ಸಾವಿರಕ್ಕೂ ಹೆಚ್ಚು ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿವೆ. ಶೋಷಣೆಯ ವಿರುದ್ಧ ಕ್ರಾಂತಿ ನಡೆಯಬೇಕಿದೆ. ಕ್ರಾಂತಿ ಎಂದರೆ ಯುದ್ಧವಲ್ಲ, ಐದು ವರ್ಷಗಳಿಗೊಮ್ಮೆ ಬರುವ ಚುನಾವಣೆಯಲ್ಲಿ ಕ್ರಾಂತಿ ಮಾಡಬೇಕಿದೆ. ಹಣ–ಹೆಂಡಕ್ಕೆ ಮತ ಮಾರಾಟ ಮಾಡಿಕೊಳ್ಳದೆ ಸ್ವಾಭಿಮಾನದಿಂದ ಮತ ಚಲಾವಣೆ ಮಾಡಬೇಕು ಎಂದರು. ‘ನಮ್ಮಲ್ಲಿರುವ ಕೀಳರಿಮೆ ತೊರೆಯಬೇಕು. ಅಂಬೇಡ್ಕರ್ ನೀಡಿರುವ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಮೂರು ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಸ್ವಾಭಿಮಾನದಿಂದ ಬದುಕಲು ಸಾಧ್ಯ ಎಂದು ಅವರು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ‘ಭೀಮಾ ಕೊರೆಂಗಾವ್ ವಿಜಯೋತ್ಸವದಲ್ಲಿ ಎಲ್ಲಾ ಧರ್ಮಗುರುಗಳನ್ನು ಕರೆದು ನಡೆಸುತ್ತಿರುವುದು ಅತ್ಯಂತ ಶ್ರೇಷ್ಠವಾದ ಕೆಲಸ. ಅಂಬೇಡ್ಕರ್ ವಿಚಾರಧಾರೆಗಳನ್ನು ಎಲ್ಲರೂ ಅರಿತು ಪಾಲಿಸಬೇಕು’ ಎಂದರು ತಿಳಿಸಿದರು.

ಭೀಮ್ ಆರ್ಮಿ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಕಾರ್ಯದರ್ಶಿ ಅನಿಲ್‌ಕುಮಾರ್, ಮುಖಂಡರಾದ ಹುಣಸೆಮಕ್ಕಿ ಲಕ್ಷ್ಮಣ್,ತಬಸಮ್ ಪಾಷಾ, ಎಚ್.ಪಿ.ಮಂಜೇಗೌಡ ಇದ್ದರು.

ಬೈಕ್ ರ್‍ಯಾಲಿಯಲ್ಲಿ ಕಾರ್ಯಕರ್ತರು ಭಾಗಿ
ನಗರದ ತೊಗರಿಹಂಕಲ್ ಸರ್ಕಲ್‌ನಿಂದ ಪ್ರಾರಂಭವಾದ ಬೈಕ್ ರ‍್ಯಾಲಿ ಐ.ಜಿ.ರಸ್ತೆ ಟೌನ್ ಕ್ಯಾಂಟೀನ್ ಬಸವನಹಳ್ಳಿ ಮುಖ್ಯರಸ್ತೆ ಎಂ.ಜಿ.ರಸ್ತೆಯ ಮುಖಾಂತರ ಸಂಚರಿಸಿತು. ನೂರಾರು ಕಾರ್ಯಕರ್ತರು ಬೈಕ್ ರ್‍ಯಾಲಿಯಲ್ಲಿ ಭಾಗವಹಿಸಿದ್ದರು. ಆಜಾದ್ ಪಾರ್ಕ್ ವೃತ್ತದ ತನಕ ರ್‍ಯಾಲಿ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.