ADVERTISEMENT

ಸಮರ್ಥವಾಗಿ ಪ್ರತಿಭೆ ಪ್ರದರ್ಶಿಸಲು ಸಲಹೆ: ದಸರಾ ಕ್ರೀಡಾಕೂಟದಲ್ಲಿ ಸುಜಾತ ಕೃಷ್ಣಪ್ಪ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2019, 12:34 IST
Last Updated 18 ಸೆಪ್ಟೆಂಬರ್ 2019, 12:34 IST
ಚಿಕ್ಕಮಗಳೂರಿನಲ್ಲಿ ಜಿಲ್ಲಾಂಚಾಯಿತಿ ಅಧ್ಯಕ್ಷೆ ಸುಜಾತಕೃಷ್ಣಪ್ಪ ಅವರು ದಸರಾ ಕ್ರೀಡಾಕೂಟ ಉದ್ಘಾಟನೆಗೊಳಿಸಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಯಣ್ಣ ಇದ್ದಾರೆ.
ಚಿಕ್ಕಮಗಳೂರಿನಲ್ಲಿ ಜಿಲ್ಲಾಂಚಾಯಿತಿ ಅಧ್ಯಕ್ಷೆ ಸುಜಾತಕೃಷ್ಣಪ್ಪ ಅವರು ದಸರಾ ಕ್ರೀಡಾಕೂಟ ಉದ್ಘಾಟನೆಗೊಳಿಸಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಯಣ್ಣ ಇದ್ದಾರೆ.   

ಚಿಕ್ಕಮಗಳೂರು: ಸ್ಪರ್ಧಾ ಮನೋಭಾವದಿಂದ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಬೇಕು. ಸಮರ್ಥವಾಗಿ ಪ್ರತಿಭೆ ಪ್ರದರ್ಶಿಸಬೇಕು ಎಂದು ಜಿಲ್ಲಾಂಚಾಯಿತಿ ಅಧ್ಯಕ್ಷೆ ಸುಜಾತಕೃಷ್ಣಪ್ಪ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದೊಂದಿಗೆ ನಗರದ ಜಿಲ್ಲಾಶತಮಾನೋತ್ಸವ ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕ್ರೀಡೆಯಲ್ಲಿ ಸೋಲು, ಗೆಲುವು ಸಾಮಾನ್ಯ. ಗೆದ್ದವರು ಹಿಗ್ಗಬಾರದು, ಸೋತವರು ಕುಗ್ಗಬಾರದು. ಸೋಲನ್ನೆ ಗೆಲುವಿನ ಮೆಟ್ಟಿಲಾಗಿ ಸ್ವೀಕರಿಸಬೇಕು. ಹೆಚ್ಚಿನ ತರಬೇತಿ ಪಡೆದು ಹಂತ ಹಂತವಾಗಿ ಬೆಳೆಯಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದರು.

ADVERTISEMENT

ಯುವಪೀಳಿಗೆ ದೇಶದ ಸಂಪತ್ತು. ಆದರೆ ಅವರು ಮೊಬೈಲ್, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಅನಗತ್ಯ ಸಮಯ ಕಳೆಯುತ್ತಿದ್ದಾರೆ. ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ನಿರಾಸಕ್ತಿ ತೋರುತ್ತಿರುವುದು ವಿಷಾಧನೀಯ ಎಂದರು.

ಯುವಜನರು ಉತ್ತಮ ನಡೆವಳಿಕೆ ರೂಢಿಸಿಕೊಳ್ಳಬೇಕು. ಸೇವಾಮನೋಭಾವ, ದೇಶಪ್ರೇಮ ಬೆಳೆಸಿಕೊಳ್ಳಬೇಕು. ದೇಶದ ಅಭಿವೃದ್ಧಿಗೆ ಶ್ರಮಿಸಬೇಕು. ಅವಕಾಶ ಸದುಪಯೋಗ ಪಡಿಸಿಕೊಂಡು ಗುರಿ ಮುಟ್ಟಬೇಕು ಎಂದರು.

ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಡಾ.ಎಚ್.ಪಿ.ಮಂಜುಳಾ ಮಾತನಾಡಿ, ಕೆಲ ಕಾರಣಗಳಿಂದ ಹಿಂದಿನ ವರ್ಷ ದಸರಾ ಕ್ರೀಡಾಕೂಟ ಆಯೋಜಿಸಿರಲಿಲ್ಲ. ಈ ವರ್ಷ ಜಿಲ್ಲಾಮಟ್ಟದಲ್ಲಿ ಆಯ್ಕೆಯಾಗುವವರು ಉಡುಪಿಯಲ್ಲಿ ನಡೆಯುವ ವಿಭಾಗ ಮಟ್ಟದಲ್ಲಿ ಭಾಗವಹಿಸುವರು. ಅಲ್ಲಿಯೂ ಆಯ್ಕೆಯಾದರೆ ಮೈಸೂರಿನಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗಲಿದೆ ಎಂದರು.

ಜಿಲ್ಲಾಪಂಚಾಯಿತಿ ರವೀಂದ್ರ ಬೆಳವಾಡಿ ಮಾತನಾಡಿ, ಪಠ್ಯದಿಂದ ಬುದ್ಧಿ, ಪಠ್ಯೇತರ ಚಟುವಟಿಕೆಯಿಂದ ಶಕ್ತಿ ದೊರೆಯುತ್ತದೆ. ಭವ್ಯ ಭಾರತದ ನಿರ್ಮಾಣಕ್ಕೆ ಅವರೆರಡು ಅಗತ್ಯ. ಗ್ರಾಮೀಣ ಭಾಗದಲ್ಲಿ ಪ್ರತಿಭಾನ್ವತರಿದ್ದರೂ ಅವರಿಗೆ ಅವಕಾಶ ದೊರೆಯುತ್ತಿಲ್ಲ ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಯಣ್ಣ ಮಾತನಾಡಿ, ಯುವಪೀಳಿಗೆ ವಿವೇಕಾನಂದರ ಚಿಂತನೆಗಳು, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಅಂತರರಾಷ್ಟ್ರೀಯ ಕ್ರೀಡಾಪಟು ಪಿ.ವಿ.ಸಿಂಧು ಅವರಿಂದ ಪ್ರೇರಿತರಾಗಬೇಕು ಎಂದರು.
ಹೆಚ್ಚುವರಿ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಶ್ರುತಿ, ಜಿಲ್ಲಾಪಂಚಾಯಿತಿ ಸದಸ್ಯರಾದ ಬಿ.ಜಿ.ಸೋಮಶೇಖರ್ಪ, ಕವಿತಾಲಿಂಗರಾಜು, ಟೆಕ್ವಾಂಡೋ ಸಂಸ್ಥೆ ತರಬೇತುದಾರ ಗಿರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.