ADVERTISEMENT

ಕಡೂರು | ಮಳೆ ವಿಳಂಬ; ಆವರಿಸಿದ ಬರದ ಭೀತಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2023, 6:52 IST
Last Updated 4 ಜುಲೈ 2023, 6:52 IST
ತಾಲ್ಲೂಕಿನ ರೈತರ ಜೀವನಾಧಾರವಾಗಿರುವ ಮಧಗದ ಕೆರೆ ಸಂಪೂರ್ಣ ಖಾಲಿಯಾಗಿ ಭಣಗುಡುತ್ತಿದೆ.
ತಾಲ್ಲೂಕಿನ ರೈತರ ಜೀವನಾಧಾರವಾಗಿರುವ ಮಧಗದ ಕೆರೆ ಸಂಪೂರ್ಣ ಖಾಲಿಯಾಗಿ ಭಣಗುಡುತ್ತಿದೆ.   

ಬಾಲುಮಚ್ಚೇರಿ

ಕಡೂರು: ಡಾ.ಡಿ.ಎಂ.ನಂಜುಂಡಪ್ಪ ವರದಿ ಪ್ರಕಾರ ಕಡೂರಿಗೆ ಶಾಶ್ವತ ಬರಗಾಲಕ್ಕೆ ತುತ್ತಾಗುವ ಪ್ರದೇಶ ಎಂಬ ಹಣೆ ಪಡೆದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಮುಂಗಾರು ಮಳೆ ತಾಲ್ಲೂಕಿನಲ್ಲಿ ವಿಳಂಬವಾಗಿದ್ದು, ಕೃಷಿ ಚಟುವಟಿಕೆಗಳು ಕುಂಠಿತಗೊಂಡಿವೆ. ಮತ್ತೊಮ್ಮೆ ಬರದ ಭೀತಿ ಆವರಿಸಿದೆ.

ತಾಲ್ಲೂಕಿನಲ್ಲಿ ನಿಗದಿ ಪಡಿಸಿರುವ ಗುರಿಯಲ್ಲಿ ಇದುವರೆಗೆ ಶೇ 50ರಷ್ಟು ಈರುಳ್ಳಿ  ಮತ್ತು ಆಲೂಗೆಡ್ಡೆ ಶೇಕಡ 30ರಷ್ಟು ಮಾತ್ರ ಬಿತ್ತನೆಯಾಗಿವೆ. ಈರುಳ್ಳಿ ಬಿತ್ತನೆಗೆ ಇನ್ನೂ ಅವಕಾಶ ಇದೆ, ಆದರೆ, ಮಳೆ ತಡವಾಗಿರುವುದರಿಂದ ನಿಗಿದಿತ ಗುರಿ ತಲುಪುವ ಸಾಧ್ಯತೆ ಕಡಿಮೆ. ಮಳೆ ಬಾರದಿದ್ದರೆ ಈಗಾಗಲೇ ಬಿತ್ತಿರುವ ಈರುಳ್ಳಿ ಮತ್ತು ಆಲೂಗೆಡ್ಡೆ ಬೀಜಗಳು ಮೊಳಕೆಯೊಡೆಯದೆ ಮಣ್ಣಲ್ಲೇ ಕೊಳೆಯಲಿದೆ.

ADVERTISEMENT

ಕೃಷಿ ಇಲಾಖೆ ಈ ಬಾರಿ ಒಟ್ಟು 54,665 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಹೊಂದಿತ್ತು. ಆದರೆ ಮಳೆ ಬಾರದ ಕಾರಣ ಕೇವಲ 4,081 ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದೆ. ತೊಗರಿ, ಅಲಸಂದೆ, ಉದ್ದು, ಹೆಸರು, ನೆಲಗಡಲೆ, ಎಳ್ಳು, ಆಲುಗೆಡ್ಡೆ ಮತ್ತು ಸೂರ್ಯಕಾಂತಿ ಬಿತ್ತನೆಯ ಅವಧಿ ಮುಗಿದಿದೆ. 483 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಹತ್ತಿ ಬಿತ್ತನೆ ನಡೆದಿದೆ. ಮಳೆ ವಿಳಂಬ ಆಗಿರುವುದು ಹೈನುಗಾರಿಕೆಯ ಮೇಲೂ ಪರಿಣಾಮ ಬೀರಿದೆ.

ಎರಡು ಮೂರು ಹಸುಗಳನ್ನು ಸಾಕಿಕೊಂಡು ಉಪ ಆದಾಯ ಪಡೆಯುತ್ತಿದ್ದ ರೈತರಿಗೆ ಈಗ ಹಸಿ ಮೇವಿನ ಕೊರತೆ ಎದುರಾಗಿದೆ. ಹೊಲದಲ್ಲಿ ಮೆಕ್ಕೆ ಜೋಳ, ನೇಪಿಯರ್ ಹುಲ್ಲು ಬೆಳೆಯುತ್ತಿದ್ದವರಿಗೆ ನೀರಿನ ಚಿಂತೆ ಆರಂಭವಾಗಿದೆ‌. ಹಲವರು ಸ್ಪ್ರಿಂಕ್ಲರ್ ಅಳವಡಿಸಿಕೊಂಡಿದ್ದಾರೆ. ಹಸಿರು ಮೇವಿಗೆ ಪರ್ಯಾಯವಾಗಿ ಸೈಲೇಜ್ ಹಾಕಬಹುದಾದರೂ ಅದರ ಬೆಲೆ ಹೆಚ್ಚಿರುವುದರಿಂದ ಹೈನುಗಾರಿಕೆಯಲ್ಲಿ ಉತ್ಪಾದನೆಯ ವೆಚ್ಚ ಅಧಿಕವಾಗುವ ಚಿಂತೆ ರೈತರದ್ದಾಗಿದೆ.

ಕೆರೆಯ ನೀರು ಖಾಲಿ

ಮಳೆ ಬಂದರೆ ಮಾತ್ರ ರಾಗಿ, ಹೈಬ್ರಿಡ್ ಜೋಳ,ಮುಸುಕಿನ ಜೋಳ ಮತ್ತು ತೃಣ ಧಾನ್ಯಗಳನ್ನು ಬಿತ್ತನೆ ಮಾಡಲು ಅವಕಾಶವಿದೆ. ಆದರೆ, ಮಳೆಯಾಗುವ  ಲಕ್ಷಣಗಳು ಕಾಣುತ್ತಿಲ್ಲ. ತಾಲ್ಲೂಕಿನ ಜೀವನಾಡಿ ಮದಗದ ಕೆರೆ ಸಂಪೂರ್ಣ ಖಾಲಿಯಾಗಿದೆ. ಅಯ್ಯನಕೆರೆ ಸಹ ಖಾಲಿಯಾಗುವ ಹಂತದಲ್ಲಿದೆ. ಗ್ರಾಮೀಣ ಭಾಗದ ಕೆರೆಗಳು ಒಂದಿಷ್ಟು ನೀರಿದ್ದರೂ ಅದು ಧೀರ್ಘಕಾಲಕ್ಕೆ ಉಪಯೋಗವಾಗದು ಎನ್ನುತ್ತಾರೆ ಕೃಷಿಕರು

ವಾಡಿಕೆಗಿಂತ ಕಡಿಮೆ ಮಳೆ

ಕಡೂರು ತಾಲ್ಲೂಕಿನಲ್ಲಿ ವಾಡಿಕೆಯಂತೆ ಜನವರಿ 1 ರಿಂದ ಜೂನ್ 23ರವರೆಗೆ 197.1 ಮಿಮೀ ಮಳೆಯಾಗಬೇಕಿತ್ತು. ಆದರೆ, 179 ಮಿಮೀ ಮಳೆಯಾಗಿದ್ದು, ಶೇಕಡ 9ರಷ್ಟು ಮಳೆ ಕೊರತೆಯಾಗಿದೆ. ಕಸಬಾ ಹೋಬಳಿಯಲ್ಲಿ ವಾಡಿಕೆಗಿಂತ ಶೇಕಡ 24 ರಷ್ಟು ಕಡಿಮೆ ಮಳೆಯಾಗಿದೆ. ಪಂಚನಹಳ್ಳಿ ಹೋಬಳಿಯಲ್ಲಿ ವಾಡಿಕೆಗಿಂತ ಶೇಕಡ 25ರಷ್ಟು ಹೆಚ್ಚು ಮಳೆಯಾಗಿದೆ.ಯಗಟಿ ಹೋಬಳಿಯಲ್ಲಿ ವಾಡಿಕೆಯಷ್ಟು ಮಳೆಯಾಗಿರಯವುದು ತುಸು ಸಮಾಧಾನ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.