ಚಿಕ್ಕಮಗಳೂರು: ವರ್ಷಕ್ಕೊಮ್ಮೆ ದರ್ಶನಕ್ಕೆ ಅವಕಾಶ ಇರುವ ಬೆಟ್ಟದ ತುದಿಯಲ್ಲಿನ ಬಿಂಡಿಗ ದೇವೀರಮ್ಮ ಉತ್ಸವ ಇದೇ 19, 20ರಂದು ನಡೆಯಲಿದೆ.
‘ಇದೇ ಮೊದಲ ಬಾರಿಗೆ ಎರಡು ದಿನ ಅಂದರೆ ಅ.19 ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆ ತನಕ, 20ರಂದು ಬೆಳಿಗ್ಗೆ 7ರಿಂದ ಪೂಜೆ ಮಧ್ಯಾಹ್ನ 3 ಗಂಟೆ ತನಕ ದೇವಿ ದರ್ಶನಕ್ಕೆ ಅವಕಾಶ ಸಿಗಲಿದೆ’ ಎಂದು ದೇಗುಲ ವ್ಯವಸ್ಥಾಪನಾ ಸಮಿತಿಯ ಕುಲಶೇಖರ್ ತಿಳಿಸಿದರು.
ಬರಿಗಾಲಿನಲ್ಲೇ ಭಕ್ತರು ಬೆಟ್ಟ ಏರಬೇಕಿದೆ. ಮಳೆ ಇರುವುದರಿಂದ 15ರಿಂದ 60 ವರ್ಷದೊಳಗಿನವರಿಗೆ ಮಾತ್ರ ಬೆಟ್ಟ ಏರಲು ಅವಕಾಶ ನೀಡಲಾಗಿದೆ.
ಮುಳ್ಳಯ್ಯನಗಿರಿ, ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ, ಗಾಳಿಕೆರೆ ಹಾಗೂ ಮಾಣಿಕ್ಯಧಾರಾ ಜಲಪಾತಕ್ಕೆ ಬರುವ ಇತರೆ ಪ್ರವಾಸಿಗರಿಗೆ ಎರಡೂ ದಿನ (ಅ.19ರ ಬೆಳಿಗ್ಗೆ 6ರಿಂದ 20ರ ಸಂಜೆ 6 ಗಂಟೆ ತನಕ) ಪ್ರವೇಶವನ್ನು ಜಿಲ್ಲಾಡಳಿತ ನಿರ್ಬಂಧಿಸಿದೆ.
ಗಿರಿಭಾಗದಲ್ಲಿ ಇರುವ ಹೋಂಸ್ಟೇ, ರೆಸಾರ್ಟ್ ಮತ್ತು ವಸತಿ ಗೃಹಗಳಿಗೆ ಈಗಾಗಲೇ ಮುಂಗಡವಾಗಿ ಕೊಠಡಿ ಕಾಯ್ದಿರಿಸಿರುವ ಪ್ರವಾಸಿಗರಿಗೆ ಪ್ರವೇಶ ದೊರಯಲಿದೆ. ಆದರೆ, ಅವರಿಗೆ ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ ಮತ್ತು ಮಾಣಿಕ್ಯಧಾರ ಪ್ರವಾಸಕ್ಕೆ ನಿರ್ಬಂಧ ಇರಲಿದೆ. ಮುಳ್ಳಯ್ಯನಗಿರಿಗೆ ಎರಡೂ ದಿನ ಆನ್‌ಲೈನ್ ಬುಕ್ಕಿಂಗ್ ಕೂಡ ರದ್ದುಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.