ADVERTISEMENT

ಶಿವರಾತ್ರಿಗೆ ಧರ್ಮಸ್ಥಳಕ್ಕೆ ಪಾದಯಾತ್ರೆ: ಕಾಣದ ಪೂರ್ವ ತಯಾರಿ

ವಿಜಯಕುಮಾರ್ ಎಸ್.ಕೆ.
Published 4 ಫೆಬ್ರುವರಿ 2026, 3:15 IST
Last Updated 4 ಫೆಬ್ರುವರಿ 2026, 3:15 IST
ಧರ್ಮಸ್ಥಳಕ್ಕೆ ಪಾದಯಾತ್ರೆ ತೆರಳುತ್ತಿರುವ ಭಕ್ತರು –ಸಂಗ್ರಹ ಚಿತ್ರ
ಧರ್ಮಸ್ಥಳಕ್ಕೆ ಪಾದಯಾತ್ರೆ ತೆರಳುತ್ತಿರುವ ಭಕ್ತರು –ಸಂಗ್ರಹ ಚಿತ್ರ   

ಚಿಕ್ಕಮಗಳೂರು: ಶಿವಾರಾತ್ರಿ ವೇಳೆಗೆ ಧರ್ಮಸ್ಥಳಕ್ಕೆ ತೆರಳುವ ಪಾದಯಾತ್ರೆ ಈ ವಾರದಿಂದಲೇ ಆರಂಭವಾಗಲಿದ್ದು, ಈವರೆಗೆ ಯಾವುದೇ ಪೂರ್ವ ತಯಾರಿ ನಡೆದಿಲ್ಲ.

ಫೆ. 15ರಂದು ಶಿವರಾತ್ರಿ ಇರುವುದರಿಂದ ಮುನ್ನಾದಿನ ಅಲ್ಲಿಗೆ ಸೇರಬೇಕು ಎಂಬ ಆಸೆಯಿಂದ ಭಕ್ತರು ಕಾಲ್ನಡಿಗೆಯಲ್ಲಿ ಸಾಗುತ್ತಾರೆ. ಬೆಂಗಳೂರು, ತುಮಕೂರು, ಹಾಸನ, ರಾಮನಗರ, ಕೋಲಾರ ಜಿಲ್ಲೆಗಳಿಂದ ಬರುವ ಪಾದಯಾತ್ರೆಗಳು ಬೇಲೂರು ಮೂಲಕ ಮೂಡಿಗೆರೆ–ಕೊಟ್ಟಿಗೆಹಾರ ಮೂಲಕ ಚಾರ್ಮಾಡಿ ಘಾಟಿ ಇಳಿದು ಧರ್ಮಸ್ಥಳಕ್ಕೆ ತೆರಳುತ್ತಾರೆ.

ಇನ್ನೊಂದೆಡೆ ಚಿತ್ರದುರ್ಗ, ಶಿವಮೊಗ್ಗ, ಗಂಗಾವತಿ, ಹಾವೇರಿ ಜಿಲ್ಲೆಗಳಿಂದ ಬರುವ ಪಾದಯಾತ್ರಿಗಳು ಚಿಕ್ಕಮಗಳೂರು ಮೂಲಕ ಮೂಡಿಗೆರೆ–ಕೊಟ್ಟಿಗೆಹಾರ ಮಾರ್ಗವಾಗಿ ಧರ್ಮಸ್ಥಳ ತಲುಪುತ್ತಾರೆ. ಯಾವುದೇ ಕಡೆಯಿಂದ ಬಂದರೂ ಮೂಡಿಗೆರೆ ಹ್ಯಾಂಡ್‌ಪೋಸ್ಟ್‌ ಬಳಿಗೆ ಬಂದು ಎಲ್ಲರೂ ಕೂಡಿಕೊಳ್ಳುತ್ತಾರೆ. ಅಲ್ಲಿಂದ ಮುಂದಕ್ಕೆ ವಾರಗಟ್ಟಲೆ ಇಡೀ ರಸ್ತೆಯ ತುಂಬ ಕೇಸರಿ ಶಾಲು ಹೊದ್ದಿರುವ ಪಾದಯಾತ್ರಿಗಳೇ ಕಾಣಿಸುತ್ತಾರೆ.

ADVERTISEMENT

ಭಕ್ತರಿಗೆ ಅಲ್ಲಲ್ಲಿ ಊಟ, ಉಪಾಹಾರ, ನೀರು, ತಿನಿಸು, ಎಳನೀರನ್ನು ಸ್ಥಳೀಯರು ಮಾತ್ರವಲ್ಲದೇ ಬೆಂಗಳೂರು, ಬಳ್ಳಾರಿಯಿಂದಲೂ ಬಂದು ಭಕ್ತರಿಗೆ ಅಡುಗೆ ಮಾಡಿ ಊಟ ಬಡಿಸುತ್ತಾರೆ. ಎಳನೀರು ಸೇರಿ ತಂಪು ಪಾನೀಯಗಳನ್ನು ವಿತರಿಸುತ್ತಾರೆ.

ಹಾಸನ–ಬೇಲೂರು ಮಾರ್ಗದಲ್ಲಿ ಬರುವ ಪಾದಯಾತ್ರಿಗಳ ಸಂಖ್ಯೆ ಹೆಚ್ಚು. ಬೇಲೂರು ದಾಟಿದರೆ ಗೋಣಿಬೀಡು, ಚಿನ್ನಗ, ದಾರದಹಳ್ಳಿ, ಹಳೇ ಮೂಡಿಗೆರೆ, ಬಿದರಹಳ್ಳಿ, ಬೆಟ್ಟಗೆರೆ, ಫಲ್ಗುಣಿ, ಬಣಕಲ್, ತರುವೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯನ್ನು ದಾಟಿ ಚಾರ್ಮಾಡಿ ಘಾಟಿ ಇಳಿಯುತ್ತಾರೆ. ಕೊನೆಯ ಮೂರು ದಿನಗಳಲ್ಲಿ ದಿನಕ್ಕೆ 50 ಸಾವಿರಕ್ಕೂ ಹೆಚ್ಚು ಜನ ಪಾದಯಾತ್ರೆ ಮಾಡುತ್ತಾರೆ.

ಎಲ್ಲಾ ಗ್ರಾಮ ಪಂಚಾಯಿತಿಗಳು, ಅರಣ್ಯ ಇಲಾಖೆ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಸೇರಿ ಭಕ್ತರಿಗೆ ಬೇಕಾದ ಸೌಕರ್ಯಗಳನ್ನು ಒದಗಿಸುತ್ತಾರೆ. ಮೂರ್ನಾಲ್ಕು ದಿನಗಳಲ್ಲೇ ಭಕ್ತಾದಿಗಳು ಪಾದಯಾತ್ರೆ ಆರಂಭಿಸುತ್ತಾರೆ. ಆದರೆ ಈವರೆಗೆ ಪೂರ್ವ ತಯಾರಿಯನ್ನು ತಾಲ್ಲೂಕು ಆಡಳಿತ ಅಥವಾ ಜಿಲ್ಲಾಡಳಿತ ಮಾಡಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.

‘ಹೆಚ್ಚುವರಿ ಟ್ಯಾಂಕರ್‌ಗಳು, ಕಸ ಸಾಗಿಸುವ ಟಿಪ್ಪರ್‌ಗಳನ್ನು ಹೆಚ್ಚುವರಿಯಾಗಿ ಗ್ರಾಮ ಪಂಚಾಯಿತಿಗಳು ಬಾಡಿಗೆಗೆ ಪಡೆಯುತ್ತವೆ. ಈ ಮೊತ್ತ ₹1 ಲಕ್ಷದಷ್ಟು ಗ್ರಾಮ ಪಂಚಾಯಿತಿಗಳಿಗೆ ಹೊರೆಯಾಗುತ್ತಿದೆ. ಪ್ರತಿವರ್ಷ ಈ ಹೊರೆ ಬರುತ್ತಿರುವುದು ಸಮಸ್ಯೆಯಾಗುತ್ತಿದೆ. ಜಿಲ್ಲಾಡಳಿತ ಹೆಚ್ಚುವರಿ ಅನುದಾನ ನೀಡಿದರೆ ಗ್ರಾಮ ಪಂಚಾಯಿತಿಗಳು ಉತ್ಸಾಹದಿಂದ ಕೆಲಸ ಮಾಡುತ್ತವೆ. ಪ್ರತಿವರ್ಷ ಹೊರೆ ಸಹಿಸಿಕೊಳ್ಳಲು ಸಣ್ಣ ಸಣ್ಣ ಗ್ರಾಮ ಪಂಚಾಯಿತಿಗಳಿಗೆ ಹೇಗೆ ಸಾಧ್ಯ’ ಎಂದು ಕೊಟ್ಟಿಗೆಹಾರದ ಸಾಮಾಜಿಕ ಕಾರ್ಯಕರ್ತ ಸಂಜಯ್‌ ಪ್ರಶ್ನಿಸುತ್ತಾರೆ.

‘ಬೇರೆ ಕಡೆ ಪಾದಯಾತ್ರೆಗೆ ಸರ್ಕಾರ ಹಣ ನೀಡುತ್ತದೆ. ಧರ್ಮಸ್ಥಳ ಪಾದಯಾತ್ರೆಗೆ ಸರ್ಕಾರವಾಗಲೀ, ಧರ್ಮಸ್ಥಳದ ಆಡಳಿತವಾಗಲಿ ತಲೆ ಕೆಡಿಸಿಕೊಳ್ಳುವುದಿಲ್ಲ. ಗ್ರಾಮ ಪಂಚಾಯಿತಿಗಳು ಕಸ ವಿಲೇವಾರಿ ಮಾಡಲು ಆಸಕ್ತಿ ತೋರದಿದ್ದರೆ ಪ್ಲಾಸ್ಟಿಕ್ ತ್ಯಾಜ್ಯ ಇಡೀ ಚಾರ್ಮಾಡಿ ಘಾಟಿ ಸೇರಿ ಇಡೀ ಹೆದ್ದಾರಿ ಬದಿ ಬೀಳಲಿದೆ. ಈಗಲೇ ಅಧಿಕಾರಿಗಳು ಎಚ್ಚೆತ್ತು ಪೂರ್ವ ತಯಾರಿ ಮಾಡಿಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ಪಾದಯಾತ್ರಿಗಳಿಗೆ ಊಟ, ನೀರಿನ ವ್ಯವಸ್ಥೆಯನ್ನು ದಾನಿಗಳು ಮಾಡುತ್ತಾರೆ. ಆ ವ್ಯವಸ್ಥೆಯನ್ನು ಸರ್ಕಾರ ಮಾಡುವುದು ಬೇಡ. ಆದರೆ, ವ್ಯವಸ್ಥಿತವಾಗಿ ಪಾದಯಾತ್ರೆ ಸಾಗುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಸಂಬಂಧಪಟ್ಟ ಇಲಾಖೆಗಳು ವಹಿಸಿಕೊಳ್ಳಬೇಕು ಎಂದು ಹೇಳಿದರು.

ಭಕ್ತರಿಗೆ ಬಯಲೇ ಶೌಚಾಲಯ

ಇಡೀ ಪಾದಯಾತ್ರೆ ಸಾಗುವ ಸ್ಥಳದಲ್ಲಿ ಮೂಡಿಗೆರೆ ಹ್ಯಾಂಡ್‌ ಪೋಸ್ಟ್‌ನಿಂದ ಮುಂದೆ ಸಾಗಿದರೆ ಸ್ಥಳೀಯರು ಸೇರಿ ಭಕ್ತರ ಕಾಲಿಗೆ ಮಸಾಜ್ ಊಟ ಔಷಧಿ ಶೌಚಾಲಯ ವ್ಯವಸ್ಥೆಯನ್ನು ಮಾಡುತ್ತದೆ. ಮುಂದೆ ಸಾಗಿದರೆ ಧರ್ಮಸ್ಥಳ ಸೇರುವ ತನಕ ಎಲ್ಲಿಯೂ ಭಕ್ತರಿಗಾಗಿ ವಿಶೇಷ ಶೌಚಾಲಯಗಳು ಈ ಹಿಂದೆ ನಿರ್ಮಾಣವಾಗಿಲ್ಲ. ಮಹಿಳೆಯುರು ಯುವತಿಯರು ಪಾದಯಾತ್ರೆಯಲ್ಲಿ ತೆರಳುವಾಗ ಶೌಚಾಲಯ ಇಲ್ಲದೆ ಪರದಾಡುತ್ತಾರೆ. ಚಾರ್ಮಾಡಿ ಘಾಟಿಯಲ್ಲಿ ರಸ್ತೆ ಬದಿಯಲ್ಲಿ ಪ್ರಪಾತಗಳಿವೆ. ಅಪಾಯದ ನಡುವೆ ತೆರಳುವುದು ಸಾಮಾನ್ಯವಾಗಿದೆ. ಅಲ್ಲಲ್ಲಿ ಮಹಿಳೆಯರಿಗಾದರೂ ತಾತ್ಕಾಲಿಕ ಶೌಚಾಲಯಗಳನ್ನು ಇರಿಸುವ ಕೆಲಸವನ್ನು ಜಿಲ್ಲಾಡಳಿತ ಅಥವಾ ಧರ್ಮಸ್ಥಳದ ಆಡಳಿತ ಮಾಡಬೇಕು ಎಂಬುದು ಸ್ಥಳೀಯರ ಒತ್ತಾಯ.

ಶೀಘ್ರವೇ ಸಭೆ: ಇ.ಒ

ಧರ್ಮಸ್ಥಳ ಪಾದಯಾತ್ರೆಯಲ್ಲಿ ಭಕ್ತರಿಗೆ ಮೂಲ ಸೌಕರ್ಯ ಒದಗಿಸುವ ಸಂಬಂಧ ಶೀಘ್ರವೇ ಗ್ರಾಮ ಪಂಚಾಯಿತಿ ಅಧಿಕಾರಿಗಳ ಸಭೆ ಕರೆಯಲಾಗುವುದು ಎಂದು ಮೂಡಿಗೆರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದಯಾಮತಿ ತಿಳಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರ ಸೂಚನೆಯಂತೆ ಸ್ವಚ್ಛತೆ ಕಾರ್ಯ ಕೈಗೊಳ್ಳಲು ಯೋಚಿಸಲಾಗಿದೆ. ಅಲ್ಲಲ್ಲಿ ಸಾರ್ವಜನಿಕ ಶೌಚಾಲಯಗಳಿದ್ದು ಅವುಗಳನ್ನು ಬಳಸುವಂತೆ ಫಲಕ ಹಾಕಲು ಕ್ರಮ ಕೈಗೊಳ್ಳಲಾಗುವುದು ಎಂದು ‘ಪ್ರಜಾವಾಣಿ’ಗೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.