
ಬಿ.ಎಚ್.ಕೈಮರ (ನರಸಿಂಹರಾಜಪುರ): ವಾಹನ ಚಾಲನಾ ಪರವಾನಗಿ ಹಾಗೂ ವಿಮೆ ಇಲ್ಲದೆ ವಾಹನ ಚಾಲನೆ ಮಾಡುವುದು ಅಪರಾಧ ಎಂದು ಜೆಎಂಎಫ್‌ಸಿಯ ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಟಿ.ರಘುನಾಥ ಗೌಡ ಹೇಳಿದರು.
ತಾಲ್ಲೂಕಿನ ಬಿ.ಎಚ್.ಕೈಮರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮಂಗಳವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸರ್ಕಾರಿ ಅಭಿಯೋಜನಾ ಇಲಾಖೆಆಶ್ರಯದಲ್ಲಿ ನಡೆದ ರಾಷ್ಟೀಯ ಗ್ರಾಹಕರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಓಡಿಸಬಾರದು. ಬ್ಯಾಂಕ್ ಖಾತೆಯ ಚೆಕ್‌ಬುಕ್ ಕಳೆದು ಹೋದರೆ, ಬ್ಯಾಂಕಿನ ಚೆಕ್‌ಗಳಲ್ಲಿ ಮೋಸ ನಡೆದರೆ ಸಿವಿಲ್ ನ್ಯಾಯಾಲಯಕ್ಕೆ ದೂರು ಸಲ್ಲಿಸಬಹುದು ಎಂದರು.
ತಾಲ್ಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಆರ್.ಎಸ್. ಜೀತು ಮಾತನಾಡಿ, ಗ್ರಾಹಕ ರಕ್ಷಣಾ ಕಾಯ್ದೆಯು ರಾಷ್ಟೀಯ ಗ್ರಾಹಕರ ಪರಿಹಾರ ಅಧಿನಿಯಮವು 1986ರ ಡಿಸೆಂಬರ್ 24 ರಂದು ಜಾರಿಯಾಗಿದೆ. ಈಗ ತ್ವರಿತ ಗತಿಯಲ್ಲಿ ಗ್ರಾಹಕರಿಗೆ ಪರಿಹಾರ ಸಿಗಲಿದೆ ಎಂದರು.
ವಕೀಲ ಎಂ.ದೇವೇಂದ್ರ ಉಪನ್ಯಾಸ ನೀಡಿ, ದಿನನಿತ್ಯ ಜೀವನದಲ್ಲಿ ವ್ಯಕ್ತಿಯು ಯಾವುದೇ ವಸ್ತುಗಳನ್ನು ಖರೀದಿಸಿದಾಗ ಮತ್ತು ಪಡೆದಾಗ ಅವರು ಗ್ರಾಹಕರಾಗುತ್ತಾರೆ. ಗ್ರಾಹಕರ ಸಂರಕ್ಷಣಾ ಕಾಯ್ದೆ ಪ್ರಕಾರ ಎಲ್ಲಾ ಗ್ರಾಹಕರಿಗೂ ಸೇವಾ ನ್ಯೂನತೆ ಅಥವಾ ವಸ್ತುಗಳಲ್ಲಿ ದೋಷ, ಅನ್ಯಾಯ, ಮೋಸ, ಸುಳ್ಳು ಕಂಡು ಬಂದಲ್ಲಿ ಜಿಲ್ಲಾ ಗ್ರಾಹಕ ಸಮಿತಿಗೆ ದೂರು ಸಲ್ಲಿಸಬಹುದು. ಅಲ್ಲಿ ಸೂಕ್ತ ನ್ಯಾಯ ಸಿಗದಿದ್ದರೆ ರಾಜ್ಯ ಗ್ರಾಹಕ ಪರಿಹಾರ ಸಮಿತಿಗೂ ದೂರು ನೀಡಬಹುದು. ಕೊನೆಗೆ ಸರ್ವೋಚ್ಚ ನ್ಯಾಯಾಲಯದ ಮುಖಾಂತರ ತಮಗೆ ಆದ ಅನ್ಯಾಯಗಳ ಬಗ್ಗೆ ದೂರು ಸಲ್ಲಿಸಿ ನ್ಯಾಯ ಪಡೆದುಕೊಳ್ಳಬಹುದು ಎಂದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಜಯಪ್ರಕಾಶ್, ಗ್ರಾಹಕರ ಸಂರಕ್ಷಣಾ ಕಾಯ್ದೆ, ಗ್ರಾಹಕರು ಮೋಸ ಹೋದಾಗ ಅನುಸರಿಸಬೇಕಾದ ಕಾನೂನು ಅಂಶಗಳನ್ನು ವಿವರಿಸಿದರು. ಸಹಾಯಕ ಸರ್ಕಾರಿ ವಕೀಲ ಜಿ.ಬಿ.ನೇಕಾರ್ ಪೋಕ್ಸೋ ಕಾಯ್ದೆ, ಸೈಬರ್ ಅಪರಾಧದ ಬಗ್ಗೆ ವಿವರಿಸಿದರು.
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಚೇರಿ ಅಧೀಕ್ಷಕ ಕಿರಣ್ ಬೇಂದ್ರೆ, ತರಬೇತಿ ಅಧಿಕಾರಿ ರವಿರಾಜ್ ಹೆಗ್ಡೆ, ಕಿರಿಯ ತರಬೇತಿ ಅಧಿಕಾರಿಗಳಾದ ಸುಮಾ, ನಾಗವೇಣಿ, ವಾಣಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.