ADVERTISEMENT

ಶಿಶಿಲಾ-ಭೈರಾಪುರ ವ್ಯಾಪ್ತಿಯ ಮಳೆಕಾಡು ನಾಶ ಭೀತಿ

ಚತುಷ್ಪಥ ಹೆದ್ದಾರಿ ಯೋಜನೆ ಕೈಬಿಡಲು ಆಗ್ರಹ‌

​ಪ್ರಜಾವಾಣಿ ವಾರ್ತೆ
Published 23 ಜನವರಿ 2019, 6:30 IST
Last Updated 23 ಜನವರಿ 2019, 6:30 IST
ಶಿಶಿಲಾ-ಭೈರಾಪುರ ಮಳೆಕಾಡು ಪ್ರದೇಶ
ಶಿಶಿಲಾ-ಭೈರಾಪುರ ಮಳೆಕಾಡು ಪ್ರದೇಶ   

ಚಿಕ್ಕಮಗಳೂರು: ಜಿಲ್ಲೆಯ ಶಿಶಿಲಾ - ಭೈರಾಪುರ ವ್ಯಾಪ್ತಿಯ ಕಾಡುಗಳಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವ ಯೋಜನೆ ಪ್ರಸ್ತಾವವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಬಿಡಬೇಕು ಎಂದು ಪರಿಸರಾಸಕ್ತರು ಆಗ್ರಹಿಸಿದ್ದಾರೆ.

ಚಿತ್ರದುರ್ಗ-ಬಂಟ್ವಾಳ ಸುವರ್ಣ ಚತುಷ್ಪಥ ಯೋಜನೆ ಕಾರ್ಯಗತಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕೇಂದ್ರದ ಅರಣ್ಯ ಮತ್ತು ಪರಿಸರ ಸಚಿವಾಲಯದಿಂದ ಅನುಮತಿ ಪಡೆಯಲು ಪ್ರಸ್ತಾವ ಸಲ್ಲಿಸಿದೆ. ಪಶ್ಚಿಮಘಟ್ಟ ಶ್ರೇಣಿಯ ಶಿಶಿಲಾ-ಭೈರಾಪುರ ವ್ಯಾಪ್ತಿಯ ಮಳೆಕಾಡುಗಳು ನಾಶವಾಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ-173ರ ಸುಮಾರು 228 ಕಿ.ಮೀ ಉದ್ದದ ಯೋಜನೆ ಇದಾಗಿದೆ. ಮೊದಲ ಹಂತದಲ್ಲಿ 2,500 ಕೋಟಿ ಅನುದಾನವನ್ನು ಯೋಜನೆಗೆ ಮೀಸಲಿಡಲಾಗಿದೆ. ಚಿಕ್ಕಮಗಳೂರು, ಹಾಸನ, ಮಂಗಳೂರು ಅರಣ್ಯ ವಿಭಾಗಗಳ ಹಲವು ಮೀಸಲು ಅರಣ್ಯಗಳಲ್ಲಿ ರಸ್ತೆ ಸಾಗುವುದರಿಂದ ಅದಕ್ಕೆ ಅನುಮತಿ ಪಡೆಯಲು ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ಚಿಕ್ಕಮಗಳೂರಿನ ಮೂಡಿಗೆರೆ ವಲಯದ ಬಾಳೂರು ಮೀಸಲು ಅರಣ್ಯದಲ್ಲಿ 7.95 ಹೆಕ್ಟೇರ್ ಅರಣ್ಯ ಪ್ರದೇಶ ಅದಕ್ಕೆ ಹೊಂದಿಕೊಂಡಿರುವ ಶೋಲಾ ಕಾಡು, ಹುಲ್ಲುಗಾವಲು ಮತ್ತು ಮಳೆಕಾಡು, ಕಂದಾಯ ಭೂಮಿಯಲ್ಲಿರುವ ಅರಣ್ಯ ಪ್ರದೇಶ ಒಟ್ಟು 144.02 ಹೆಕ್ಟೇರ್. ಹಾಸನ ವಿಭಾಗದ ಕಬ್ಬಿನಾಲೆ ಮೀಸಲು ಅರಣ್ಯದ 7.35 ಹೆಕ್ಟೇರ್ ಅದಕ್ಕೆ ಹೊಂದಿಕೊಂಡಿರುವ ಕಂದಾಯ ಭೂಮಿಯಲ್ಲಿರುವ 1.55 ಹೆಕ್ಟೇರ್ ಅರಣ್ಯ ಪ್ರದೇಶ, ಮಂಗಳೂರು ವಿಭಾಗದ ಅರಣ್ಯ ಪ್ರದೇಶದ ಮೀಯಾರು ಮೀಸಲು ಅರಣ್ಯದಲ್ಲಿ 44.83 ಹೆಕ್ಟೇರ್ ಅರಣ್ಯ ಪ್ರದೇಶ, ಅದಕ್ಕೆ ಹೊಂದಿಕೊಂಡಿರುವ ಶೋಲಾ ಕಾಡು, ಹುಲ್ಲುಗಾವಲು, ಕಂದಾಯ ಜಾಗದಲ್ಲಿರುವ ಅರಣ್ಯ ಪ್ರದೇಶ ಸೇರಿ 42.75 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಈ ಯೋಜನೆಗೆ ಬಲಿ ಮಾಡುವ ಸಿದ್ಧತೆ ನಡೆದಿದೆ ಎಂದು ದೂಷಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸಲ್ಲಿಸಿರುವ ಪ್ರಸ್ತಾವದಲ್ಲಿ ಈ ಅಂಶಗಳನ್ನು ಸೇರಿಸಿ ವರದಿ ತಯಾರಿಸಿದೆ. ಅರಣ್ಯ ಪ್ರದೇಶಗಳಲ್ಲಿ ರಸ್ತೆ ಹಾದುಹೋಗುವ ವಿವರವನ್ನು ಪೂರ್ಣಪ್ರಮಾಣದಲ್ಲಿ ಒದಗಿಸಿಲ್ಲ. ಈ ಯೋಜನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಾರ್ವಜನಿಕ ಅಹವಾಲು ಸಭೆಯಲ್ಲಿ ಶಿಶಿಲಾ-ಭೈರಾಪುರ ವ್ಯಾಪ್ತಿಯ ಕಾಡುಗಳಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವ ಯೋಜನೆಯನ್ನು ವಿರೋಧಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಮೂಡಿಗೆರೆಯ ಭೈರಾಪುರದಿಂದ ದಕ್ಷಿಣ ಕನ್ನಡ ಜಿಲ್ಲೆಯ ಶಿಶಿಲಾವರೆಗಿನ ಪ್ರದೇಶ ಸೂಕ್ಷ್ಮ ಮಳೆಕಾಡು ಹೊಂದಿದೆ. ನೂರಾರು ಉಪನದಿಗಳು, ಹಳ್ಳಕೊಳ್ಳ ಸಹಿತ ಕಪಿಲಾ, ನೇತ್ರಾವತಿ, ಶಿಶಿಲಾ ನದಿಗಳು ಈ ಭಾಗದಲ್ಲೇ ಹುಟ್ಟುತ್ತವೆ. ಸುಮಾರು 350– 400 ಇಂಚು ಮಳೆಬೀಳುವ ಪ್ರದೇಶಗಳು ಇವಾಗಿವೆ. ಈ ಕಾಡಿನೊಳಗೆ ಚತುಷ್ಪಥ ಹಾದುಹೋದರೆ ಅಪಾರ ಗಿಡಮರಗಳು ನಾಶವಾಗುತ್ತವೆ. ಶೋಲಾಕಾಡು, ಹುಲ್ಲುಗಾವಲಿನಿಂದ ಕೂಡಿರುವ ಬೆಟ್ಟಗಳು ಬಲಿಯಾಗುತ್ತವೆ. ದಕ್ಷಿಣ ಕನ್ನಡ ಜಿಲ್ಲೆ ಸಂಪರ್ಕಕ್ಕೆ ಶಿರಾಡಿ ಮತ್ತು ಚಾರ್ಮಾಡಿ ಹೆದ್ದಾರಿಗಳು ಇವೆ. ಈಗ ಮತ್ತೊಂದು ಚತುಷ್ಪಥ ಹೆದ್ದಾರಿ ನಿರ್ಮಾಣವಾದರೆ ಶಿರಾಡಿ ಮತ್ತು ಚಾರ್ಮಾಡಿ ಭಾಗದ ಮಳೆಕಾಡುಗಳು ಕಣ್ಮರೆಯಾಗುವುದು ಖಚಿತ ಎಂದು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಸಂಪರ್ಕಿಸಲು ಹಲವಾರು ರಾಜ್ಯ ಹೆದ್ದಾರಿಗಳಿವೆ. ಹೀಗಿದ್ದರೂ ಮಳೆಕಾಡುಗಳ ಅರಣ್ಯವನ್ನು ಸೀಳಿ ರಸ್ತೆ ನಿರ್ಮಿಸಬೇಕೆಂಬ ಉದ್ದೇಶ ಮತ್ತು ಅನಿವಾರ್ಯತೆ ಏನಿದೆ? ಈಗಿರುವ ಚಾರ್ಮಾಡಿ ಮತ್ತು ಶಿರಾಡಿ ಘಾಟಿಯ ರಸ್ತೆಗಳನ್ನೆ ಅಭಿವೃದ್ಧಿಪಡಿಸುವುದನ್ನು ಶಿಶಿಲಾ-ಭೈರಾಪುರ ಕಾಡುಗಳ ಮಧ್ಯೆ ಚತುಷ್ಪಥ ನಿರ್ಮಿಸುವುದನ್ನು ಕಠೋರವಾಗಿ ಖಂಡಿಸುತ್ತೇವೆ ಎಂದು ಭದ್ರಾ ವನ್ಯಜೀವಿ ಸಂರಕ್ಷಣಾ ಟ್ರಸ್ಟ್‌ನ ಟ್ರಸ್ಟಿ ಡಿ.ವಿ.ಗಿರೀಶ್, ವೈಲ್ಡ್‍ಕ್ಯಾಟ್-‘ಸಿ’ನ ಶ್ರೀದೇವ್ ಹುಲಿಕೆರೆ, ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಜಿ.ವೀರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.