
ಆಲ್ದೂರು: ‘ಮಾದಕ ವಸ್ತುಗಳ ಸೇವನೆ ಯುವಜನರ ಭವಿಷ್ಯವನ್ನು ಬುಡಮೇಲು ಮಾಡುವುದಲ್ಲದೇ, ದೇಶದ ಅಭಿವೃದ್ಧಿಗೆ ಕಂಟಕವಾಗಿದೆ’ ಎಂದು ವೈದ್ಯ ಮನು ಅಭಿಪ್ರಾಯಪಟ್ಟರು.
‘ಪ್ರಜಾವಾಣಿ’ ಸಹಯೋಗದಲ್ಲಿ ಆಲ್ದೂರು ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಪರಿಸರ ಇಕೊ ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಶಾಲೆಯ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ‘ಮಾದಕ ವ್ಯಸನ ಮುಕ್ತ ಹಾಗೂ ಸೈಬರ್ ಕ್ರೈಂ ಕುರಿತು ಜಾಗೃತಿ ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.
ಮಾದಕ ವಸ್ತುವಿನ ಮಾರಾಟ ಜಾಲ ವಿದ್ಯಾರ್ಥಿಗಳಿಗೆ, ಯುವಕರಿಗೆ ಪ್ರಾಥಮಿಕ ಹಂತದಲ್ಲಿ ಉಚಿತವಾಗಿ ಅವುಗಳನ್ನು ಒದಗಿಸಿ, ಬಳಿಕ ವ್ಯಸನಕ್ಕೆ ಅಧೀನರಾಗುವಂತೆ ಮಾಡುತ್ತದೆ. ಮಾದಕ ವಸ್ತುಗಳ ಮಾದರಿಗಳಾದ ಗುಟ್ಕಾ, ಧೂಮಪಾನ, ಮಧ್ಯಪಾನ, ಗಾಂಜಾ ಮತ್ತು ಮೆಡಿಕಲ್‌ಗಳಲ್ಲಿ ಅನಧಿಕೃತವಾಗಿ ಸಿಗುವಂತಹ ಮಾದಕ ದ್ರವ್ಯಗಳ ಕುರಿತು ತಿಳಿಸಿದ ಅವರು, ಪ್ರಸ್ತುತ ದಿನಗಳಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಡ್ರಗ್ಸ್ ಮಾಫಿಯಾ ಮಾರಾಟಗಾರರು ಅಂತರ್ಜಾಲದ ಮೂಲಕ ಮಾರಾಟ ಮಾಡುತ್ತಿದ್ದು, ಪಾರ್ಸಲ್‌ಗಳ ಮೂಲಕ ಕಳಿಸುವ ಹಂತದ ತನಕ ಬೆಳೆದಿದ್ದಾರೆ ಎಂದರು.
ಅಪರಾಧ ಕೃತ್ಯಗಳು ಪ್ರಸ್ತುತ ಸಮಾಜದಲ್ಲಿ ಹೆಚ್ಚಲು ಮೂಲ ಕಾರಣ ಎಂದು ತಿಳಿಸಿದ ವೈದ್ಯ ಮನು, ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಗುರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಂಪನ್ಮೂಲ ವ್ಯಕ್ತಿ, ಪೊಲೀಸ್ ಇಲಾಖೆಯ ಆಲ್ದೂರು ಸರ್ಕಲ್ ಇನ್‌ಸ್ಪೆಕ್ಟರ್ ಸೋಮೇಗೌಡ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಪೊಲೀಸ್ ಇಲಾಖೆಯು ಸಮಾಜದಲ್ಲಿ ನಡೆಯುವ ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವ ಪ್ರಯತ್ನ ಮಾಡುತ್ತಿದ್ದು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು ಹಾಗೂ ಅವುಗಳನ್ನು ಬೆಂಬಲಿಸಬಾರದು. ಕಾನೂನುಬಾಹಿರ ಚಟುವಟಿಕೆ ನಡೆಯುವುದು ಕಂಡುಬಂದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರೆ, ಆರೋಗ್ಯಕರ ಸಮಾಜವನ್ನು ನಿರ್ಮಿಸಬಹುದು ಎಂದರು.
ತುರ್ತು ಸಂದರ್ಭದಲ್ಲಿ ಸಂಪರ್ಕಿಸಬಹುದಾದ ಸಂಖ್ಯೆಗಳಾದ 112, 1098, ಇನ್ನಿತರ ಸಹಾಯವಾಣಿಗಳ ಸಂಖ್ಯೆಗಳ ಕುರಿತು ಮಾಹಿತಿ ಹಂಚಿಕೊಂಡರು.
ಪ್ರಭಾರ ಮುಖ್ಯ ಶಿಕ್ಷಕ ಮುಜಾಮಿಲ್ ಅಹಮದ್, ಕಸಾಪ ಮಾಜಿ ಅಧ್ಯಕ್ಷ ರವಿಕುಮಾರ್ ಎಚ್.ಎಲ್., ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಪ್ರಕಾಶ್ ನಾಯಕ್ ಇದ್ದರು. ಆಲ್ದೂರು ‘ಪ್ರಜಾವಾಣಿ’ ಅರೆಕಾಲಿಕ ವರದಿಗಾರ ಜೋಸೆಫ್ ಎಂ. ಸ್ವಾಗತಿಸಿ, ನಿರೂಪಿಸಿದರು. ಸಮಾಜ ವಿಜ್ಞಾನದ ಶಿಕ್ಷಕಿ ಜ್ಯೋತಿ ಸಿ.ಎಂ. ವಂದಿಸಿದರು
‘ಪ್ರಜಾವಾಣಿ’ ಪ್ರಸರಣ ವಿಭಾಗದ ಸಹಾಯಕ ವ್ಯವಸ್ಥಾಪಕ ನಾಗೇಶ್, ಪ್ರಸರಣ ವಿಭಾಗದ ಪ್ರತಿನಿಧಿ ಅಮಿತ್, ಎನ್ಎಸ್ಎಸ್ ಅಧಿಕಾರಿ ಹನುಮಂತಪ್ಪ ಬಾರಕೇರ, ಸಹ ಶಿಕ್ಷಕರು, ಕಾಲೇಜು ಉಪನ್ಯಾಸಕರು, ಪೊಲೀಸ್ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.
ಮಾದಕ ವ್ಯಸನ ಮತ್ತು ಸೈಬರ್ ಅಪರಾಧ ಕುರಿತ ಜಾಗೃತಿ ಕಾರ್ಯಕ್ರಮ ಅರ್ಥಪೂರ್ಣವಾಗಿತ್ತು. ಯುವಜನರು ಹಾಗೂ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮ ಹೆಚ್ಚು ಹೆಚ್ಚು ಆಯೋಜಿಸಬೇಕು ಶಾಲಿನಿ ಪ್ರಥಮ ಪಿಯು ಪದವಿ ಪೂರ್ವ ಕಾಲೇಜು–
‘ಪ್ರಜಾವಾಣಿ’ ಸಹಭಾಗಿತ್ವದೊಂದಿಗೆ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮಾದಕ ವ್ಯಸನ ಮತ್ತು ಸೈಬರ್ ಅಪರಾಧದ ಕುರಿತು ಸಂಪನ್ಮೂಲ ವ್ಯಕ್ತಿಗಳು ಸರಳ ಮತ್ತು ಸುಲಭವಾಗಿ ಅರ್ಥೈಸಿಕೊಳ್ಳುವಂತೆ ತಿಳಿಸಿದ್ದಾರೆ– ಇರಾಮ್ ಫಾತಿಮಾ, ಪ್ರೌಢಶಾಲೆ 10ನೇ ತರಗತಿ ವಿದ್ಯಾರ್ಥಿನಿ
ಸಂಪನ್ಮೂಲ ವ್ಯಕ್ತಿಗಳು ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ಅನಾರೋಗ್ಯ ಅಂತರ್ಜಾಲ ಮತ್ತು ಮೊಬೈಲ್ ಬಳಕೆಯ ಅರಿವಿಲ್ಲದಿದ್ದರೆ ಉಂಟಾಗುವ ದುಷ್ಪರಿಣಾಮ ಕುರಿತು ಸಮಗ್ರ ಮಾಹಿತಿ ನೀಡಿದ್ದು ಉಪಯುಕ್ತವಾಗಿತ್ತು– ಮೋಮಿನ ಖಾನಂ, 10ನೇ ತರಗತಿ ವಿದ್ಯಾರ್ಥಿನಿ
ಸೈಬರ್ ವಂಚನೆ: ಎಚ್ಚರಿಕೆ ಅಗತ್ಯ
ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧ ಸಾಮಾಜಿಕ ಜಾಲತಾಣಗಳಲ್ಲಿ ಛಾಯಾಚಿತ್ರಗಳ ದುರ್ಬಳಕೆ ಮತ್ತು ಬ್ಯಾಂಕ್‌ಗಳಿಂದ ಕರೆ ಮಾಡುವುದಾಗಿ ತಿಳಿಸಿ ಒಟಿಪಿ ತಿಳಿದುಕೊಂಡು ವಂಚಿಸುವ ಜಾಲದ ಕುರಿತು ಸಬ್ ಇನ್‌ಸ್ಪೆಕ್ಟರ್ ರವಿ ಜಿ.ಎ ಮಾಹಿತಿ ಹಂಚಿಕೊಂಡರು. ಬಳಿಕ ಮೊಬೈಲ್ ಫೋನ್‌ಗಳ ಮೂಲಕವೇ ಇಂದು ಸಾಕಷ್ಟು ವಂಚನೆ ಪ್ರಕರಣಗಳು ನಡೆಯುತ್ತಿದ್ದು ಅಮಾಯಕರಿಗೆ ಪೋಲಿಸ್ ವೇಷದಲ್ಲಿ ವಿಡಿಯೊ ಕಾಲ್ ಮಾಡುವ ಮೂಲಕ ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿದೆ ಎಂದು ಬೆದರಿಸಿ ಹಣವನ್ನು ವರ್ಗಾಯಿಸಿಕೊಳ್ಳುವ ಮೂಲಕ ವಂಚಿಸುತ್ತಿದ್ದಾರೆ. ಈ ಬಗ್ಗೆ ಎಲ್ಲರೂ ಎಚ್ಚರ ವಹಿಸಬೇಕು ಎಂದು ತಿಳಿಸಿದರು.
ಮೊಬೈಲ್ ಬಳಕೆ ಕಡಿತಗೊಳಿಸಿ
‘ಪ್ರಜಾವಾಣಿ’ ವತಿಯಿಂದ ಪ್ರಚುರಪಡಿಸಿರುವ ಶಿಕ್ಷಣ ಮಾರ್ಗದರ್ಶಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆಗೆ ಸಹಕಾರಿಯಾಗಿದ್ದು ಇಂತಹ ಕಾರ್ಯಕ್ರಮದ ಕುರಿತು ಮಾಹಿತಿ ಪಡೆದುಕೊಂಡು ಮನೆ ಮತ್ತು ನೆರೆಹೊರೆಯ ಸ್ನೇಹಿತರಿಗೆ ತಿಳಿಸಿಕೊಡಬೇಕು. ಮಾದಕ ವಸ್ತುಗಳ ಸೇವನೆಯಿಂದ ಆಗುವಂತೆ ದುಷ್ಪರಿಣಾಮ ಕುರಿತು ಅವರಿಗೂ ಅರಿವು ಮೂಡಿಸಬೇಕು ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ಎ.ಯು. ಇಬ್ರಾಹಿಂ ತಿಳಿಸಿದರು.
‘ಪ್ರಜಾವಾಣಿ’ ಪತ್ರಿಕೆಯಲ್ಲಿ ಬರುವಂತಹ ಸ್ಪರ್ಧಾತ್ಮಕ ಮಾಹಿತಿಯನ್ನು ಅಧ್ಯಯನ ನಡೆಸಿ ಹಲವು ಮಂದಿ ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗಿರುವ ಉದಾಹರಣೆಗಳಿದ್ದು ವಿದ್ಯಾರ್ಥಿಗಳು ಪ್ರತಿದಿನ ಪತ್ರಿಕೆಯನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಸಾಧ್ಯವಾದಷ್ಟು ಮೊಬೈಲ್ ಬಳಕೆ ಕಡಿತಗೊಳಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.