
ನರಸಿಂಹರಾಜಪುರ: ಭೂ ರಹಿತ ದಲಿತರಿಗೆ ಭೂಮಿಗಾಗಿ ಹೋರಾಟ ಆರಂಭಿಸಿದ್ದು ನ್ಯಾಯ ಸಿಗುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಚಾಲಕ ತರೀಕೆರೆ ಎನ್. ವೆಂಕಟೇಶ್ ಹೇಳಿದರು.
ಇಲ್ಲಿನ ತಾಲ್ಲೂಕು ಆಡಳಿತ ಕಚೇರಿ ಮುಂಭಾಗದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಸೋಮವಾರದಿಂದ ಆರಂಭಿಸಿರುವ ಭೂಮಿಗಾಗಿ ಹೋರಾಟ ಅಹೋರಾತ್ರಿ ಪ್ರತಿಭಟನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಸಮಿತಿಯಿಂದ 2010ರಲ್ಲಿ ತಹಶೀಲ್ದಾರ್ ಕಚೇರಿ ಮುಂಭಾಗ 22 ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸಲಾಗಿತ್ತು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಅಂದಿನ ಜಿಲ್ಲಾಧಿಕಾರಿ ದಲಿತರಿಗೆ ಸರ್ಕಾರ ಜಮೀನು ಕೊಡುವ ಬಗ್ಗೆ ಅಂದಿನ ತಹಶೀಲ್ದಾರ್‌ಗೆ ಆದೇಶಿಸಿದ್ದರು. ತಹಶೀಲ್ದಾರ್ ಅವರು ಸರ್ಕಾರಿ ಜಮೀನು ಅಳತೆ ಮಾಡಿಸಿ ನಕಾಶೆ ತಯಾರಿಸಿದ್ದರು. 3 ತಿಂಗಳ ಹಿಂದೆ ಹಾಲಿ ತಹಶೀಲ್ದಾರ್ ಅವರಿಗೆ ದಲಿತ ಭೂರಹಿತರಿಗೆ ಹಿಂದೆ ಮೀಸಲಿಟ್ಟ ಜಾಗ ಮಂಜೂರು ಮಾಡುವಂತೆ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿ ಒಂದು ತಿಂಗಳ ಕಾಲಾವಕಾಶ ಕೋರಿದ್ದರು. ಆದರೆ 3 ತಿಂಗಳಾದರೂ ಕ್ರಮ ಕೈಗೊಂಡಿಲ್ಲ. ಹಾಗಾಗಿ ಅಹೋರಾತ್ರಿ ಪ್ರತಿಭಟನೆ ಆರಂಭಿಸಲಾಗಿದೆ ಎಂದರು.
ಹಿಂದೆ ಪ್ರತಿಭಟನೆ ಮಾಡಿದ ಸಂದರ್ಭದಲ್ಲಿದ್ದ ಜಿಲ್ಲಾಧಿಕಾರಿ, ತಹಶೀಲ್ದಾರ್ ಅವರ ಮೂಲಕ ಸರ್ಕಾರ ಜಮೀನು ಅಳತೆ ಮಾಡಿಸಿ ರಾವೂರು ಗ್ರಾಮದ ಸರ್ವೆ ನಂಬರ್ 157ರಲ್ಲಿ 10 ಎಕ್ರೆ, 16ರಲ್ಲಿ 16 ಗುಂಟೆ, ಶಿರಗಳಲೆ ಗ್ರಾಮದ ಸರ್ವೆ ನಂ 127ರಲ್ಲಿ ಗೋಮಾಳ 45 ಎಕ್ರೆ, ನಾಗಲಾಪುರ ಗ್ರಾಮದ ಸರ್ವೆ ನಂ 28ರಲ್ಲಿ ಗೋಮಾಳ 70 ಎಕ‌್ರೆ ದಲಿತರ ಅಭಿವೃದ್ಧಿಗೆ ಕಾಯ್ದಿರಿಸಲಾಗಿದೆ. ಅದರಲ್ಲಿ ಶಿರಗಳಲೆ ಗ್ರಾಮದ ಸರ್ವೆ ನಂ 126 ಮತ್ತು 127ರಲ್ಲಿ 10 ಎಕರೆ ಉಳಿಕೆ ಜಮೀನು ಲಭ್ಯವಿದೆ. ನಾಗಲಾಪುರ ಗ್ರಾಮದ ಸರ್ವೆ ನಂ 28ರಲ್ಲಿ ಗೋಮಾಳ 38 ಎಕರೆ ಉಳಿಕೆ ಜಮೀನು ಲಭ್ಯವಿದೆ. ಶಿರಗಳಲೆ ಗ್ರಾಮದ ಸರ್ವೆನಂಬರ್ 177ರಲ್ಲಿ 48 ಎಕರೆ ಉಳಿಕೆ ಜಮೀನು ಲಭ್ಯವಿದೆ ಎಂದು ಲಿಖಿತ ಮಾಹಿತಿ ಇದೆ. ಸದರಿ ಭೂಮಿಯನ್ನು ದಲಿತರಿಗೆ ನೀಡಬೇಕೆಂದು ಹಾಗೂ ಸೂಸಲವಾಗಿ ಗ್ರಾಮದ ಸರ್ವೆನಂ 39ರಲ್ಲಿ, ಕಡಹಿನಬೈಲು ಸರ್ವೆ ನಂಬರ್ 40ರಲ್ಲಿ ಕಾಫಿ ತೋಟದ ಭೂಮಾಲೀಕರಿಂದ ಅಕ್ರಮವಾಗಿ ಒತ್ತುವರಿ ಮಾಡಿರುವ ಹೆಚ್ಚುವರಿ ಭೂಮಿಯನ್ನು ತೆರವುಗೊಳಿಸಿದ್ದು ಅರಣ್ಯ ಇಲಾಖೆಯ ಭೂಮಿಯನ್ನು ಹೊರತುಪಡಿಸಿ ಸರ್ಕಾರಿ ಭೂಮಿಯನ್ನು ಭೂರಹಿತ ದಲಿತರಿಗೆ ಮಂಜೂರು ಮಾಡಬೇಕೆಂದು ಆಗ್ರಹಿಸಿದರು.
ಕರ್ನಾಟಕ ದಲಿತ ಸಂಘರಷ ಸಮಿತಿಯ ಸದಸ್ಯ ರಾಜೇಶ್, ತಾಲ್ಲೂಕು ಸಂಚಾಲಕ ಎಂ.ಜೆ.ಸಿಜು, ರಾಜ್ಯ ಸಮಿತಿಯ ಟಿ.ಮಂಜಪ್ಪ, ನಾಗರಾಜ್ ಶಿವಮೊಗ್ಗ,ಹಾಲೇಶಪ್ಪ, ಗೋವಿಂದ ಸಣ್ಣಕ್ಕಿ, ಭೀಮಯ್ಯ, ಅಬ್ಧುಲ್ ರೆಹಮಾನ್, ಮೃತ್ಯುಂಜಯ, ಸಿದ್ದಪ್ಪ, ಖದೀರ್, ಜಯರಾಮ್, ರವಿ, ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ಎಂ.ವಿ.ಭವಾನಿ, ವಾಸಂತಿ, ರೇಣುಕಾ,ಪ್ರೇಮಾ, ರವಿಕುಮಾರ್, ನಾಗರತ್ನ, ತಿಮ್ಮಣ್ಣ ಮತ್ತಿತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.