ADVERTISEMENT

ಮೂಲರಹಳ್ಳಿ: ಮತ್ತೆ ಕಾಡಾನೆ ದಾಳಿ- ಆತಂಕ

ಧರೆಗುರುಳಿದ ವಿದ್ಯುತ್ ಕಂಬಗಳು, ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 9:31 IST
Last Updated 27 ಸೆಪ್ಟೆಂಬರ್ 2019, 9:31 IST
ಮೂಡಿಗೆರೆ ತಾಲ್ಲೂಕಿನ ಮೂಲರಹಳ್ಳಿ ಗ್ರಾಮದ ಅಶೋಕ್ ಎಂಬುವವರ ಭತ್ತದ ಗದ್ದೆಯನ್ನು ಗುರುವಾರ ಕಾಡಾನೆಗಳು ತುಳಿದು ನಾಶಗೊಳಿಸಿರುವುದು (ಎಡಚಿತ್ರ). ಕಾಡಾನೆ ದಾಳಿಯಿಂದ ಧರೆಗುರುಳಿರುವ ವಿದ್ಯುತ್ ಕಂಬಗಳು.
ಮೂಡಿಗೆರೆ ತಾಲ್ಲೂಕಿನ ಮೂಲರಹಳ್ಳಿ ಗ್ರಾಮದ ಅಶೋಕ್ ಎಂಬುವವರ ಭತ್ತದ ಗದ್ದೆಯನ್ನು ಗುರುವಾರ ಕಾಡಾನೆಗಳು ತುಳಿದು ನಾಶಗೊಳಿಸಿರುವುದು (ಎಡಚಿತ್ರ). ಕಾಡಾನೆ ದಾಳಿಯಿಂದ ಧರೆಗುರುಳಿರುವ ವಿದ್ಯುತ್ ಕಂಬಗಳು.   

ಮೂಡಿಗೆರೆ: ತಾಲ್ಲೂಕಿನ ಮೂಲರಹಳ್ಳಿ ಭಾಗದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ಗುರುವಾರ ಮುಂಜಾನೆ ವಿದ್ಯುತ್ ತಂತಿಯ ಮೇಲೆ ಬೈನೆ ಮರ ವನ್ನು ಉರುಳಿಸಿ ಏಳು ವಿದ್ಯುತ್ ಕಂಬ ಗಳನ್ನು ಮುರಿದು ಹಾಕಿದ್ದು, ಅಪಾರ ಪ್ರಮಾಣದ ಬೆಳೆ ನಾಶಗೊಳಿಸಿವೆ.

ಮೂಲರಹಳ್ಳಿ ಗ್ರಾಮದ ಸುತ್ತಮುತ್ತ ನಾಲ್ಕು ಕಾಡಾನೆಗಳು ಎರಡು ಗುಂಪಿನಲ್ಲಿ‌ ದಾಳಿ ನಡೆಸುತ್ತಿದ್ದು, ಗುರುವಾರ ಬೆಳಗಿನ ಜಾವ ನಾಲ್ಕೂ ಕಾಡಾನೆಗಳು ಏಕಕಾಲದಲ್ಲಿ ಶೋಭಾ ಎಂಬುವವರ ಕಾಫಿ ತೋಟಕ್ಕೆ ದಾಳಿ ನಡೆಸಿ, ರಸ್ತೆ ಬದಿಯ ತೋಟದಲ್ಲಿದ್ದ ಬೈನೆ ಮರವನ್ನು ಧರೆಗುರುಳಿಸಿವೆ.

ಬೈನೆ ಮರವು ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದರಿಂದ ಏಳು ವಿದ್ಯುತ್ ಕಂಬಗಳು ತುಂಡಾಗಿದ್ದು, ಇಡೀ ಗ್ರಾಮವೇ ಕತ್ತಲೆಯಲ್ಲಿ ಮುಳುಗಿದೆ. ಬೈನೆ ಮರ ಬೀಳುವ ವೇಳೆ ವಿದ್ಯುತ್ ಪೂರೈಕೆ ಸ್ಥಗಿತವಾಗಿದ್ದರಿಂದ ಯಾವುದೇ ಜೀವ ಹಾನಿ ಸಂಭವಿಸಿಲ್ಲ.

ADVERTISEMENT

ಬೆಳಿಗ್ಗೆ ಆರು ಗಂಟೆಯ ಸುಮಾರಿಗೆ ಶೋಭಾ ಅವರ ತೋಟದಿಂದ ಹೊರ ಬಂದ ಕಾಡಾನೆಗಳು, ಗ್ರಾಮದ ಪ್ರಸನ್ನ ಎಂಬುವವರ ಕಾಫಿ ತೋಟದೊಳಗೆ ನುಗ್ಗಿ ಕಾಫಿ ಗಿಡಗಳನ್ನು ತುಳಿದು ಹಾನಿಗೊಳಿಸಿವೆ. ಪ್ರಸನ್ನ ಅವರ ತೋಟದಿಂದ ಅಶೋಕ್ ಎಂಬುವವರ ಕಾಫಿ ತೋಟಕ್ಕೆ ದಾಟಿರುವ ಕಾಡಾನೆ ಗಳು, ಅಶೋಕ್ ಅವರ ತೋಟದಲ್ಲೂ ಬೈನೆ ಮರಗಳನ್ನು ಉರುಳಿಸಿದ್ದು, ಅಪಾರ ಪ್ರಮಾಣದ ಬೆಳೆನಾಶಗೊಳಿಸಿವೆ.

ಬಳಿಕ ನಾಗೇಶ್ ಎಂಬುವವರ ಭತ್ತದ ಗದ್ದೆಗಿಳಿದು ಬೆಳೆಯುತ್ತಿದ್ದ ಪೈರನ್ನು ತುಳಿದು ಹಾನಿಗೊಳಿಸಿವೆ. ಬೆಳಗಿನ ವೇಳೆಯೇ ಕಾಡಾನೆಗಳು ದಾಳಿ ನಡೆಸುತ್ತಿರುವುದನ್ನು ಕಂಡ ಗ್ರಾಮಸ್ಥರು ಕೂಗಾಟ ನಡೆಸಿದ ಬಳಿಕ, ಮೂಲರಹಳ್ಳಿ ಅರಣ್ಯದತ್ತ ನಾಲ್ಕು ಕಾಡಾನೆಗಳು ತೆರಳಿದವು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಮೂಲರಹಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ ಒಂಟಿ ಸಲಗ ಹಾಗೂ ಮೂರು ಕಾಡಾನೆಗಳು ಪ್ರತ್ಯೇಕ ತಂಡದಲ್ಲಿ ದಾಳಿ ಮಾಡುತ್ತಿದ್ದವು. ಒಂಟಿ ಸಲಗವು ಈಗಾಗಲೇ ಐದು ಮಂದಿಯನ್ನು ಬಲಿ ತೆಗದುಕೊಂಡಿದ್ದು, ಅದೇ ಒಂಟಿ ಸಲಗವು ಮೂರು ಕಾಡಾನೆಗಳೊಂದಿಗೆ ಬಂದು ದಾಳಿ ನಡೆಸುತ್ತಿರುವುದು ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.

ಕಾಡಾನೆ ದಾಳಿಯಿಂದ ಮೂಲರ ಹಳ್ಳಿ ಸುತ್ತಮುತ್ತಲ ಪ್ರದೇಶಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ಭತ್ತದ ಬೆಳೆಯನ್ನು ಕಾಯಲು ಗದ್ದೆಗೆ ತೆರಳುತ್ತಿದ್ದ ರೈತರು, ಬೆಳೆಯ ಆಸೆಯನ್ನೇ ಬಿಟ್ಟು ಬದುಕುವಂತಾಗಿದೆ.
ಕಾಡಾನೆ ದಾಳಿ ನಡೆಸಿರುವ ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ, ಪಟಾಕಿ ಸಿಡಿಸಿ ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸುವ ಪ್ರಯತ್ನ ನಡೆಸಿದ್ದಾರೆ.

ಕಾಡಾನೆ ದಾಳಿಯಿಂದ ತುಂಡಾಗಿರುವ ವಿದ್ಯುತ್ ಕಂಬಗಳನ್ನು ಕೂಡಲೇ ದುರಸ್ತಿಪಡಿಸಬೇಕು, ಕಾಡಾನೆ ದಾಳಿ ತಡೆಯಲು ತುರ್ತಾಗಿ ವೈಜ್ಞಾನಿಕ ಕ್ರಮಗಳನ್ನು ಜಾರಿಗೊಳಿಸಬೇಕು’ ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.