ಚಿಕ್ಕಮಗಳೂರು: ಕಾಡಾನೆಗಳ ಹಾವಳಿ ನಿಯಂತ್ರಿಸಲು ಹೊಸದಾಗಿ ಟೆಂಟಕಲ್ ಬೇಲಿ, ಆನೆ ನಿರೋಧಕ ಕಂದಕ, ರೈಲ್ವೆ ಬ್ಯಾರಿಕೇಡ್‌ಗಳನ್ನು ನಿರ್ಮಿಸಲು ಅರಣ್ಯ ಇಲಾಖೆ ಮುಂದಾಗಿದೆ.
ಕಾಡಾನೆ ಹಾವಳಿ ತಡೆಗೆ ಚಿಕ್ಕಮಗಳೂರು ವಿಭಾಗದಲ್ಲಿ ₹3.01 ಕೋಟಿ ಮೊತ್ತದ ಯೋಜನೆ ಕೈಗೆತ್ತಿಕೊಂಡಿದೆ. 2016-17ರಿಂದ ಈಚೆಗೆ ಮೂಡಿಗೆರೆ ವಲಯದ ಲೋಕವಳ್ಳಿ-ಕುಂಡ್ರಾ–ಡೊಡ್ಡಹಳ್ಳ, ಬಾಳೂರು ಮೀಸಲು ಅರಣ್ಯ, ಅಲೇಖಾನ್ ಗುಡ್ಡ, ರಾಮಕಲ್ ಗುಡ್ಡ ಭಾಗಗಳಲ್ಲಿ 24.50 ಕಿಲೋ ಮೀಟರ್ ಟೆಂಟಕಲ್ ಬೇಲಿ ನಿರ್ಮಿಸಲಾಗಿದೆ.
ಆಲ್ದೂರು ವಲಯದ ಬೈರೀಗದ್ದೆ, ಸಾರಗೋಡು–ಕುಂದೂರು, ಹುಲ್ಲೇಮನೆ, ತಳವಾರ ಭಾಗಗಲಲ್ಲಿ 16.84 ಕಿಲೋ ಮೀಟರ್ ಪ್ರದೇಶದಲ್ಲಿ ಟೆಂಟಕಲ್ ಬೇಲಿ ನಿರ್ಮಿಸಲಾಗಿದೆ. 38.27 ಕಿಲೋ ಮೀಟರ್ ಆನೆ ನಿರೋಧಕ ಕಂದಕ ನಿರ್ಮಿಸಲಾಗಿದೆ.
ಟೆಂಟಕಲ್ ಬೇಲಿ ಮತ್ತು ಕಂದಕ ನಿರ್ಮಿಸಲು ಸಾಧ್ಯವಾಗದ ಪ್ರದೇಶಗಳಲ್ಲಿ 63 ಆರ್‌ಸಿಸಿ ಕಂಬಗಳನ್ನೂ ನೆಡಲಾಗಿದೆ. ಹೊಸದಾಗಿ 38.27 ಕಿಲೋ ಮೀಟರ್ ಟೆಂಟಕಲ್ ಬೇಲಿ, 2.50 ಕಿಲೋ ಮೀಟರ್ ಆನೆ ನಿರೋಧಕ ಕಂದಕ ಮತ್ತು 7 ಕಿ.ಮೀ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲು ಉದ್ದೇಶಿಸಿದೆ. ಆನೆ ಹಾವಳಿ ತಡೆಗಟ್ಟಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
‘ಈಗ ಟೆಂಟಿಕಲ್ ಬೇಲಿ ನಿರ್ಮಿಸಲು ಉದ್ದೇಶಿಸಿರುವ ಜಾಗ ಕಣಿವೆ ಪ್ರದೇಶಗಳಿಂದ ಕೂಡಿದೆ. ಈ ಭಾಗದಲ್ಲಿ ರೈಲ್ವೆ ಬ್ಯಾರಿಕೇಡ್ ಅಥವಾ ಬೇರೆ ಯಾವುದೇ ಬೇಲಿ ನಿರ್ಮಿಸುವುದು ಕಷ್ಟ. ಟೆಂಟಿಕಲ್ ಬೇಲಿ ನಿರ್ಮಾಣವೇ ಪರಿಹಾರ’ ಎಂದು ಅವರು ಹೇಳಿದರು.
‘ಸೌರಶಕ್ತಿ ಆಧರಿತ 18 ಅಡಿ ಎತ್ತರದ ತೂಗು ಬೇಲಿ ಇದಾಗಿದೆ. ಸೌರಶಕ್ತಿ ಆಧರಿಸಿ 12 ವೋಲ್ಟ್ ಮಾತ್ರ ವಿದ್ಯುತ್ ಹರಿಸಲಾಗುತ್ತದೆ. ಈ ಬೇಲಿ ತಾಕಿದರೆ ಸಣ್ಣದಾಗಿ ವಿದ್ಯುತ್ ಸ್ಪರ್ಶದ ಅನುಭವ ಆಗಲಿದೆ. ಆಗ ಆನೆ ಅಥವಾ ಇತರೆ ಕಾಡು ಪ್ರಾಣಿಗಳು ಹಿಂದಕ್ಕೆ ಹೋಗುತ್ತವೆ. ಇದರಿಂದ ಜನವಸತಿ ಪ್ರದೇಶಗಳಿಗೆ ಆನೆಗಳು ಬರುವುದು ತಪ್ಪಲಿದೆ’ ಎಂದು ಮಾಹಿತಿ ನೀಡಿದರು.
‘ಒಂದೂವರೆ ಕಿಲೋ ಮೀಟರ್ ಬೇಲಿ ನಿರ್ಮಾಣಕ್ಕೆ ₹6 ಲಕ್ಷಕ್ಕೂ ಅಧಿಕ ವೆಚ್ಚವಾಗುವ ಅಂದಾಜಿದೆ. ಆನೆ-ಮಾನವ ಸಂಘರ್ಷದಿಂದ ಪ್ರಾಣಹಾನಿ ಮತ್ತು ಬೆಳೆಹಾನಿ ಆಗುತ್ತಿದೆ. ಬೆಳೆಹಾನಿ ಪರಿಹಾರವನ್ನು ಪ್ರತಿ ವರ್ಷ ನೀಡಲಾಗುತ್ತಿದೆ. ಈ ಬೇಲಿ ನಿರ್ಮಾಣಕ್ಕೆ ಆಗುವ ವೆಚ್ಚಕ್ಕಿಂತ ಬೆಳೆಹಾನಿ ಪರಿಹಾರವೇ ಹೆಚ್ಚು. ಅಲ್ಲದೇ ಸಂಘರ್ಷಕ್ಕೆ ಶಾಶ್ವತ ಪರಿಹಾರವೂ ದೊರಕಿದಂತೆ ಆಗಲಿದೆ’ ಎಂದು ಅವರು ವಿವರಿಸಿದರು.
7 ಕಿ.ಮೀ ರೈಲು ಹಳಿ ಬ್ಯಾರಿಕೇಡ್
ಕೊಪ್ಪ ವಿಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗುತ್ತಿದ್ದು ಕಾಡಿನಿಂದ ನಾಡಿನತ್ತ ಬರುವ ಆನೆಗಳನ್ನು ತಡೆಯಲು 7 ಕಿಲೋ ಮೀಟರ್ ರೈಲ್ವೆ ಹಳಿ ಬ್ಯಾರಿಕೇಡ್ ನಿರ್ಮಿಸಲು ಅರಣ್ಯ ಇಲಾಖೆ ಮುಂದಾಗಿದೆ. ಚಿಕ್ಕಗ್ರಹಾರ ವಲಯದ ಕೊಳ್ಳೆಹಳ್ಳದಿಂದ ಸಾರ್ಯದ ತನಕ 5.38 ಕಿಲೋ ಮೀಟರ್ ಹಾಗೂ ಬೆಳ್ಳಂಗಿಯಿಂದ ಕೊಳ್ಳೆಹಳ್ಳದ ತನಕ 2.23 ಕಿಲೋ ಮೀಟರ್ ಸೇರಿ ಒಟ್ಟು 7.61 ಕಿ.ಮೀ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲು ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ ಎಂದು ಕೊಪ್ಪ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.