ADVERTISEMENT

ನವರಾತ್ರಿ: ದಶಕಗಳ ಇತಿಹಾಸ

ವಿಜಯಕುಮಾರ್ ಎಸ್.ಕೆ.
Published 22 ಸೆಪ್ಟೆಂಬರ್ 2025, 7:36 IST
Last Updated 22 ಸೆಪ್ಟೆಂಬರ್ 2025, 7:36 IST
ಚಿಕ್ಕಮಗಳೂರಿನ ಹಳ್ಳದ ರಾಮೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ವಿಶೇಷ ಅಭಿಷೇಕ ಭಾನುವಾರ ನಡೆಯಿತು
ಚಿಕ್ಕಮಗಳೂರಿನ ಹಳ್ಳದ ರಾಮೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ವಿಶೇಷ ಅಭಿಷೇಕ ಭಾನುವಾರ ನಡೆಯಿತು   

ಚಿಕ್ಕಮಗಳೂರು: ದಸರಾ ಉತ್ಸವ ಎಂದರೆ ಮನೆ–ಮಂದಿರಗಳಲ್ಲಿ ಸಂಭ್ರಮದ ಆಚರಣೆಗಳು ನಡೆಯುತ್ತವೆ. ಜಿಲ್ಲೆಯ ಹಲವೆಡೆ ಸಾರ್ವಜನಿಕ ಉತ್ಸವಗಳು ನಿರಂತರವಾಗಿ ನಡೆದುಕೊಂಡು ಬಂದಿವೆ.

ಚಿಕ್ಕಮಗಳೂರಿನ ಬಸವನಹಳ್ಳಿ ಶಂಕರಮಠ, ವಿಜಯಪುರ ನವದುರ್ಗಿ ದೇಗುಲ, ಮಹಾಲಕ್ಷ್ಮಿ ದೇವಸ್ಥಾನ, ರಾಮನಹಳ್ಳಿ ವಿಜಯದುರ್ಗಿ ದೇಗುಲ, ಹಳ್ಳದ ರಾಮೇಶ್ವರ ದೇವಸ್ಥಾನ ಸೇರಿ ಹಲವೆಡೆ ನವರಾತ್ರಿ ಉತ್ಸವಗಳು ನಡೆಯಲಿವೆ.

ಚಿಕ್ಕಮಗಳೂರು ನಗರದ ಹೊರ ವಲಯದ ಬೀಕನಹಳ್ಳಿಯಲ್ಲಿ ದೇವಿಮಹಾತ್ಮೆ ಎಂಬ ಪೌರಾಣಿಕ ನಾಟಕದಿಂದ ಆರಂಭವಾದ ನವರಾತ್ರಿ ಉತ್ಸವ 74 ವರ್ಷಗಳಿಂದ ನಡೆದುಕೊಂಡು ಬಂದಿದೆ. ನಾಟಕದ ಮೂಲಕ ದೇವಿ ಗ್ರಾಮ ಪ್ರವೇಶ ಮಾಡಿ ನೆಲೆಯಾದಳು ಎಂಬುದು ಊರಿನವರ ನಂಬಿಕೆ. 

ADVERTISEMENT

ಬಳಿಕ ಗ್ರಾಮದಲ್ಲಿ ದೇವಸ್ಥಾನವೊಂದನ್ನು ಕಟ್ಟಿದ ಗ್ರಾಮಸ್ಥರು, ಜನರ ಕಷ್ಟಗಳನ್ನು ದೇವಿ ಪರಿಹರಿಸುತ್ತಿದ್ದಾಳೆ ಎಂಬ ನಂಬಿಕೆಯಿಂದ ಜನರಲ್ಲಿ ಭಕ್ತಿ ಹೆಚ್ಚಾಗಿದ್ದು, 74 ವರ್ಷಗಳಿಂದ ನವರಾತ್ರಿ ಆಚರಣೆ ಮಾಡಿಕೊಂಡು ಬಂದಿದ್ದಾರೆ.

‘ಬೀಕನಹಳ್ಳಿ ಮತ್ತು ಹಂಪಾಪುರ ಗ್ರಾಮದವರು ಸೇರಿ ಈ ಉತ್ಸವ ನಡೆಸುತ್ತಿದ್ದು, ರಾಜ್ಯ ಮತ್ತು ಹೊರ ರಾಜ್ಯದಿಂದ ಇಲ್ಲಿಗೆ ಜನ ಬರುತ್ತಿದ್ದಾರೆ. ಒಂಬತ್ತು ದಿನವೂ ಅಭಿಷೇಕ, ವಿಶೇಷ ಪೂಜೆ, ರುದ್ರಾಭಿಷೇಕ, ಹೋಮ–ಹವನಗಳು ನಡೆಯುತ್ತಿವೆ. ಉತ್ಸವದ ಅಂಗವಾಗಿ ರಂಗೋಲಿ ಸ್ಪರ್ಧೆ, ಸೈಕಲ್ ಸ್ಪರ್ಧೆ, ವಾಲಿಬಾಲ್, ಕ್ರಿಕೆಟ್ ಟೂರ್ನಿ ಸೇರಿ ಹಲವು ಸ್ಪರ್ಧೆಗಳನ್ನೂ ಏರ್ಪಡಿಸಿದ್ದೇವೆ’ ಎಂದು ಗ್ರಾಮಸ್ಥರು ಹೇಳುತ್ತಾರೆ.

‘ಕೊನೆಯ ದಿನ ಹಂಪಾಪುರ ಮತ್ತು ಬೀಕನಹಳ್ಳಿಯಲ್ಲಿ ದೇವಿಯ ಉತ್ಸವ ನಡೆಯಲಿದೆ. ಅದಕ್ಕೂ ಮುನ್ನಾದಿನ ಬನ್ನಿ ಮಂಟಪದಲ್ಲಿ ಅಂಬು ಹೊಡೆಯುವ (ಬಾಳೆ ಕಂದು ಕಡಿಯುವ) ಕಾರ್ಯಕ್ರಮ, ಪ್ರತಿದಿನ ಅನ್ನದಾಸೋಹ ಕೂಡ ನಡೆಯುತ್ತಿದೆ. ದೇವಿಮಹಾತ್ಮೆ ನಾಟಕದಿಂದಲೇ ಈ ಉತ್ಸವ ಆರಂಭವಾಗಿರುವುದರಿಂದ ಪ್ರತಿವರ್ಷವೂ ಉತ್ಸವದ ವೇಳೆ ದೇವಿಮಹಾತ್ಮೆ ನಾಟಕ ಆಯೋಜಿಸಿಕೊಂಡು ಬಂದಿದ್ದೇವೆ. ಗ್ರಾಮಸ್ಥರೇ ನಾಟಕದಲ್ಲಿ ಪಾತ್ರಧಾರಿಗಳಾಗಿ ಅಭಿನಯಿಸುತ್ತಾರೆ’ ಎಂದು ವಿವರಿಸಿದರು.

ಶಂಕರಮಠ, ವಿಜಯಪುರ, ಶಾರದಾ ಮಂದಿರ, ಕೊಲ್ಲಾಪುರದಮ್ಮ ದೇವಸ್ಥಾನ, ಹಳ್ಳದ ರಾಮೇಶ್ವರ, ಇಂದಾವರ, ಕೆಂಪನಹಳ್ಳಿ ಲಕ್ಕಮ್ಮದೇವಿ, ಹಳ್ಳದಮ್ಮ, ಮಾಸ್ತಮ್ಮ ದೇವಿಯ ಉತ್ಸವ, ಅರವಿಂದನಗರ, ತಿಲಕಪಾರ್ಕ್ ರಸ್ತೆ ಸೇರಿ ಹಲವೆಡೆ ಉತ್ಸವಗಳು ನಡೆಯಲಿವೆ.

ಪೂರಕ ಮಾಹಿತಿ: ಕೆ.ವಿ.ನಾಗರಾಜ್, ಕೆ.ನಾಗರಾಜ್, ಕೆ.ಎನ್.ರಾಘವೇಂದ್ರ, ಎನ್.ಸೋಮಶೇಖರ್, ಸತೀಶ್‌ ಜೈನ್, ರವಿಕುಮಾರ್ ಶೆಟ್ಟಿಹಡ್ಲು

ನರಸಿಂಹರಾಜಪುರದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ದೇವಿ ವಿಗ್ರಹ
ನವರಾತ್ರಿ ವಿಜಯದಶಮಿಯ ಸಂದರ್ಭದಲ್ಲಿ ಕಟ್ಟೆಹೊಳೆ ಶನೇಶ್ವರ‌ಸ್ವಾಮಿಯ ಸನ್ನಿಧಿಯಲ್ಲಿ ಭಕ್ತರು ಸಂಭ್ರಮಿಸುತ್ತಿರುವುದು
ಚಿಕ್ಕಮಗಳೂರು ಬಸವನಹಳ್ಳಿಯಲ್ಲಿನ ಶಂಕರಮಠದಲ್ಲಿ ನವರಾತ್ರಿ ಪ್ರಯುಕ್ತ ಶಾರದೆಗೆ ಜಗತ್ಪ್ರಸೂತಿ ಅಲಂಕಾರವನ್ನು ಭಾನುವಾರ ಮಾಡಲಾಗಿತ್ತು

ಹಳ್ಳದ ರಾಮೇಶ್ವರ ದೇಗುಲದಲ್ಲಿ 11 ದಿನ ಪೂಜೆ

ಚಿಕ್ಕಮಗಳೂರು: ರಾಮೇಶ್ವರ ನಗರದ ಹಳ್ಳದ ರಾಮೇಶ್ವರ ದೇವಸ್ಥಾನದಲ್ಲಿ 11 ದಿನಗಳ ಕಾಲ ನಡೆಯುವ ನವರಾತ್ರಿ ಉತ್ಸವದ ಅಂಗವಾಗಿ ಅಮ್ಮನವರಿಗೆ ವಿಶೇಷ ಅಭಿಷೇಕ ನಡೆಯಿತು. ಅರ್ಚಕರಾದ ಸೂರ್ಯನಾರಾಯಣ ಭಟ್ ಸುನಿಲ್ ಭಟ್ ನೇತೃತ್ವದಲ್ಲಿ ವಿಶೇಷ ಅಲಂಕಾರ ನೆರವೇರಿಸಿ ಹಾಲು-ಮೊಸರು ಹಳದಿ ಕುಂಕುಮದ ಅಭಿಷೇಕ ನೆರವೇರಿತು. ಹಳ್ಳದ ರಾಮೇಶ್ವರ ಮತ್ತು ಗಣಪತಿಯನ್ನು ಅಲಂಕರಿಸಿ ಪೂಜೆ ನೆರವೇರಿಸಲಾಯಿತು.

ದೇವಾಲಯವನ್ನು ವಿದ್ಯುತ್ ದೀಪ ಹಾಗೂ ಹೂಗಳಿಂದ ಅಲಂಕರಿಸಿದ್ದು ಗಮನ ಸೆಳೆಯುತ್ತಿದೆ. ಹಳ್ಳದ ರಾಮೇಶ್ವರ ದೇವಾಲಯದಲ್ಲಿ ಭಜನಾ ಮಂಡಳಿ ಆಶ್ರಯದಲ್ಲಿ ಸೆ.22ರಿಂದ ಅ.2 ರವರೆಗೆ ನಡೆಯುವ ನವರಾತ್ರಿ ಉತ್ಸವ ನಡೆಯಲಿದೆ. 11  ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ 7.30ಕ್ಕೆ ವಸ್ತ್ರಸಹಿತ ಅಲಂಕಾರ 11 ಗಂಟೆಗೆ ಲಲಿತಾ ಸಹಸ್ರನಾಮ ಪಾರಾಯಣ ನಂತರ ಭಜನೆ ಮತ್ತು 12.30ಕ್ಕೆ ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದೆ. 26ರಂದು ‘ಕುಂಕುಮಾರ್ಚನೆ’ ಹಮ್ಮಿಕೊಂಡಿದ್ದು ಹಳ್ಳದ ರಾಮೇಶ್ವರ ದೇವಾಲಯ ಸಮಿತಿ ಮತ್ತು ರಾಮೇಶ್ವರನಗರ ಹಿತರಕ್ಷಣಾ ಸಮಿತಿ ಸಹಕಾರ ನೀಡಲಿವೆ ಎಂದು ಸಮಿತಿ ತಿಳಿಸಿದೆ.

16 ವರ್ಷದಿಂದ ದುರ್ಗಿ ಆರಾಧನೆ

ಬಾಳೆಹೊನ್ನೂರು: ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ವತಿಯಿಂದ ಕಳೆದ 15 ವರ್ಷದಿಂದ ನವರಾತ್ರಿ ದಿನದಂದು ಮಾರ್ಕಂಡೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ದುರ್ಗಾ ದೇವಿ ಪ್ರತಿಷ್ಠಾಪಿಸಿ ಪೂಜೆ ಮಾಡಲಾಗುತ್ತಿದೆ. 9 ದಿನಗಳೂ ದಿನಕ್ಕೊಂದು ರೂಪಿಣಿಯಾಗಿ ನಿರಂತರ ಉತ್ಸವ ಪೂಜೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ಜನಮನ ಗೆದ್ದಿದೆ.

ನಿತ್ಯ 2 ಸಾವಿರಕ್ಕೂ ಅಧಿಕ ಜನರಿಗೆ ಅನ್ನದಾನ ಸೇವೆ ನಡೆಯುತ್ತಿದ್ದು ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜ್ಯ ಹೊರ ರಾಜ್ಯದ ಪ್ರಸಿದ್ಧ ಕಲಾವಿದರು ಭಾಗವಹಿಸುತ್ತಾರೆ. ಜಿಲ್ಲೆಯಲ್ಲೇ ದುರ್ಗಾದೇವಿಯ ಅತಿ ದೊಡ್ಡ ವಿಸರ್ಜನಾ ಮೆರವಣಿಗೆ ಇದಾಗಿದ್ದು ಮೆರವಣಿಗೆಯಲ್ಲಿ 40ಕ್ಕೂ ಅಧಿಕ ಕಲಾ ತಂಡಗಳು ಭಾಗವಹಿಸಿ ಕಲಾ ಪ್ರದರ್ಶನ ನೀಡಲಿವೆ. ವಿಸರ್ಜನಾ ಮೆರವಣಿಗೆಯಲ್ಲಿ ಅಕ್ಕಪಕ್ಕದ ತಾಲ್ಲೂಕಿನ ಜನ ಪಾಲ್ಗೊಳ್ಳಲಿದ್ದು ಭದ್ರಾ ನದಿಯಲ್ಲಿ ವಿಸರ್ಜನೆ ಮಾಡಲಾಗುತ್ತದೆ.

Cut-off box - ಹಲವು ದೇಗುಲ; ವಿಭಿನ್ನ ಆಚರಣೆ ತರೀಕೆರೆ: ತಾಲ್ಲೂಕಿನ ಕಟ್ಟೆಹೊಳೆ ಶನೇಶ್ವರ ದೇವಸ್ಥಾನ ನಂದಿಬಟ್ಟಲು ಕೋಟೆ ಲಕ್ಷ್ಮೀ ರಂಗನಾಥಸ್ವಾಮಿ ದೇವಾಲಯ ನಂದಿಬಟ್ಟಲು ಗ್ರಾಮ ದೇವರಾದ ಲಕ್ಷ್ಮಿ ರಂಗನಾಥಸ್ವಾಮಿ ಲಕ್ಕವಳ್ಳಿ ಗ್ರಾಮದ ತಿಮ್ಮಾಬೋವಿ ಕ್ಯಾಂಪಿನ ಇತಿಹಾಸ ಪ್ರಸಿದ್ಧ ವೆಂಕಟೇಶ್ವರ ಸ್ವಾಮಿ ದೇವಾಲಯ ಚಾಮುಂಡೇಶ್ವರಿ ದೇವಸ್ಥಾನ ಪಟ್ಟಣದ ಅಂತರಘಟ್ಟಮ್ಮ ಮೊದಲಾದ ದೇವಸ್ಥಾನಗಳಲ್ಲಿ ನವರಾತ್ರಿ ಉತ್ಸವ ಹಲವು ವರ್ಷಗಳಿಂದ ನಡೆಯುತ್ತಿದೆ. ಈ ದೇವಸ್ಥಾನಗಳಲ್ಲಿ 9 ದಿನಗಳೂ ದಿನಕ್ಕೊಂದು ವೇಷದ ಅಲಂಕಾರ ಸ್ವಾಮಿಗೆ ಒಡವೆ ತೊಡಿಸಿ ಪುಷ್ಪಾಲಂಕಾರದ ಜತೆಗೆ ವಿವಿಧ ಪೂಜಾ ಕಾರ್ಯಕ್ರಮ ನೆರವೇರಿಸಲಾಗುತ್ತದೆ. 9ನೇ ದಿನದಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಪ್ರತಿ ಮನೆಯಿಂದ ಬಾಳೆಹಣ್ಣಿನ ರಸಾಯನ ಮಾಡಿ ಎಡೆ ಪೂಜೆ ಸಲ್ಲಿಸಲಾಗುತ್ತದೆ. ದೇವರನ್ನು ಮೂಲ ಸ್ಥಾನಕ್ಕೆ ತಂದು ಮಹಾಮಂಗಳಾರತಿ ಮಾಡಲಾಗುವುದು. ನಂತರ ವಾದ್ಯಗೋಷ್ಠಿಗಳೊಂದಿಗೆ ಆಯಾ ಊರ ಮುಂದಿನ ಬನ್ನಿ ಮಂಟಪಕ್ಕೆ ಒಯ್ದು ಪೂಜೆ ಸಲ್ಲಿಸಿ ಬನ್ನಿ ಹಂಚಲಾಗುತ್ತದೆ.

ಬೀರೂರು: ಕಾರಣಿಕರ ನುಡಿ ಕಡೂರು:

ತಾಲ್ಲೂಕಿನ ಮಲ್ಲೇಶ್ವರ ಸ್ವರ್ಣಾಂಬ ದೇವಿ ಕೆರೆಸಂತೆ ಮಹಾಲಕ್ಷ್ಮಿ ಅಂತರಗಟ್ಟೆಯ ದುರ್ಗಾಂಬ ಬೀರೂರಿನ ಅಂತರಘಟ್ಟಮ್ಮ ಕೆಬಿದರೆ ದೊಡ್ಡ ಮಠದ ಆವರಣದಲ್ಲಿರುವ ಚೌಡೇಶ್ವರಿ ಕಡೂರಿನ ಕೆಂಚಾಂಬ ದೇವಾಲಯ ಕಾಳಿಕಾಂಬ ದೇವಾಲಯ ಕೋಟೆ ಶಂಕರ ಮಠದ  ಶಾರದಾ ದೇವಿ ದೇವಾಲಯದಲ್ಲಿ  ನವರಾತ್ರಿ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದೆ.

ಕಡೂರು ಪಟ್ಟಣದಲ್ಲಿ ದುರ್ಗಾ ಸೇವಾ ಸಮಿತಿ ವತಿಯಿಂದ 21ನೇ ವರ್ಷದ ನವರಾತ್ರಿ ಮಹೋತ್ಸವ ಆಚರಿಸಲಾಗುತ್ತಿದೆ. ವಿಶೇಷವಾಗಿ ಪೆಂಡಾಲ್ ನಿರ್ಮಿಸಲಾಗುತ್ತದೆ. ಸೇವಾ ಸಮಿತಿಯು ಪ್ರತಿ ಒಂಬತ್ತು ವರ್ಷಗಳಿಗೆ ಒಮ್ಮೆ ಹೊಸ ಸಮಿತಿ ರಚಿಸಿ ಆಚರಣೆ ನಡೆಸುತ್ತಿದೆ.  ನಿತ್ಯ ಪ್ರವಚನ ಸಂಗೀತ ಸೇವೆ ಕುಂಕುಮಾರ್ಚನೆ ನೃತ್ಯ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿವೆ. ಕುಂಕುಮಾರ್ಚನೆ ಸಂದರ್ಭದಲ್ಲಿ ಮಹಿಳೆಯರಿಗೆ ಬಾಗಿನ ಕೊಡುವುದು ದೇವಾಲಯಗಳಲ್ಲಿ ದುರ್ಗಾ ಸಪ್ತಶತಿ ಪಾರಾಯಣ ಮಾಡುವುದು ನಿರಂತರವಾಗಿ ನಡೆದುಕೊಂಡು ಬಂದಿದೆ. ಬೀರೂರಿನಲ್ಲಿ ನವರಾತ್ರಿಯ ಸಂದರ್ಭದಲ್ಲಿಯೇ ವಿಜಯದಶಮಿಯ ರಾತ್ರಿ ಮೈಲಾರಲಿಂಗೇಶ್ವರಸ್ವಾಮಿ ಅವರ ಕಾರಣಿಕ ನುಡಿಯುವುದು ಪ್ರಸಿದ್ಧ ಆಚರಣೆಯಾಗಿದೆ.

ಶಾರದಾ ಪೀಠ: ಯತಿವರ್ಯರ ದರ್ಬಾರು ಶೃಂಗೇರಿ: ಶೃಂಗೇರಿ ಶಾರದಾ ಪೀಠದ ಶರನ್ನವರಾತ್ರಿ ಮಹೋತ್ಸವ ಅ.3ರವರೆಗೆ ವಿಜೃಂಭಣೆಯಿಂದ ನೆರವೇರಲಿದೆ. ಮಠದ ಭಾರತೀತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರಭಾರತೀ ಸ್ವಾಮೀಜಿ ಅವರಿಂದ ಶಾರದಾಂಬೆಗೆ ವಿಶೇಷ ಪೂಜೆ ಶಾರದೆ ಮಹಾ ದೀಪೋತ್ಸವ ಬಂಗಾರದ ದಿಂಡೀ ಉತ್ಸವ ಯತಿವರ್ಯರ ದರ್ಬಾರು ಮಹಾಮಂಗಳಾರತಿ ಅಷ್ಟಾವಧಾನ ಸೇವೆ ನಡೆಯಲಿದೆ. ಶರನ್ನವರಾತ್ರಿಯು ವಿದ್ಯಾರಣ್ಯರ ಕಾಲದಿಂದ ಆರಂಭಗೊಂಡಿದೆ ಎಂದು ಮಠದ ಮೂಲಗಳು ತಿಳಿಸಿವೆ.

ಗಣೇಶ ದುರ್ಗಾ ಮಹೋತ್ಸವ ಕೊಪ್ಪ: ಪಟ್ಟಣದ ಮಾರ್ಕೆಟ್ ರಸ್ತೆಯಲ್ಲಿರುವ ಬಲಮುರಿ ವೀರ ಗಣಪತಿ ಮತ್ತು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಫ್ರೆಂಡ್ಸ್ ಸರ್ಕಲ್ ಗೆಳೆಯರ ಬಳಗ ವತಿಯಿಂದ ಗಣೇಶ ದುರ್ಗಾ ಮಹೋತ್ಸವ ನಡೆಯುತ್ತಿದೆ. ಸೆ.22ರಂದು ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ. ಅ.1ರವರೆಗೆ ಧಾರ್ಮಿಕ ವಿವಿಧ ಪೂಜೆ ಸಾಮೂಹಿಕ ಸತ್ಯನಾರಾಯಣ ವ್ರತ ಬಾಗಿನ ಸೇವೆ ಹೋಮ ಇತ್ಯಾದಿಗಳು ನಡೆಯಲಿದೆ. ಪ್ರತಿದಿನ ಮಧ್ಯಾಹ್ನ ಅನ್ನಸಂತರ್ಪಣೆ ಸಂಜೆ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.  ತಾಲ್ಲೂಕಿನ ಬೊಮ್ಮಲಾಪುರದ ತ್ರಿಪುರಾಂತಕಿ ಅಮ್ಮನವರ ದೇವಸ್ಥಾನ ಹರಿಹರಪುರ ಮಠ ಶಕಟಪುರ ಮಠ ಸೇರಿ ವಿವಿಧೆಡೆ  ಕಾರ್ಯಕ್ರಮಗಳು ನಡೆಯಲಿವೆ.

ಅಂಬು ಹೊಡೆಯುವ ಕಾರ್ಯಕ್ರಮ

ನರಸಿಂಹರಾಜಪುರ: ಪಟ್ಟಣದಲ್ಲಿ ಐತಿಹಾಸಿಕ ನಾಡಹಬ್ಬ ದಸರಾ ಹಾಗೂ ವಿಜಯದಶಮಿ ಆಚರಿಸಲಾಗುತ್ತಿದೆ. ಈ ಹಿಂದೆ  ಗ್ರಾಮ ದೇವತೆಗಳಾದ ಗುತ್ತ್ಯಮ್ಮ ಅಂತರಘಟ್ಟಮ್ಮ ಕೊಟ್ಟೊರು ಬಸವೇಶ್ವರ ದೇವತೆಗಳೊಂದಿಗೆ ಸುಗ್ಗಪ್ಪನ ಮಠದಲ್ಲಿರುವ ಮಾರನವಮಿ ಬಯಲಿಗೆ (ಬನ್ನಿಮಂಟಪ) ತೆರಳಿ ಅಂಬು ಹೊಡೆಯುವ (ಮರಕ್ಕೆ ತೆಂಗಿನ ಕಾಯಿ ಕಟ್ಟಿ ಕೋವಿಯಿಂದ ಹೊಡೆಯುವ) ಮತ್ತು ಬನ್ನಿ ಮುರಿಯುವ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿತ್ತು. ವರ್ಷಗಳು ಕಳೆದಂತೆ ದೇವಿಯನ್ನು ಪ್ರತಿಷ್ಠಾಪಿಸಿ ಮೈಸೂರು ದಸರಾ ಮಾದರಿಯಲ್ಲಿ ಆಚರಿಸಲು ಊರಿನವರು ನಿರ್ಧರಿಸಿ. 1998ರಲ್ಲಿ ಎಚ್.ಎಸ್. ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ಶರನ್ನವರಾತ್ರಿ ಉತ್ಸವ ಆಚರಣೆಗೆ ಬಂದಿದೆ. ಅಂದಿನಿಂದ ವಿದ್ಯಾಗಣಪತಿ ಪೆಂಡಾಲ್‌ನಲ್ಲಿ ನವರಾತ್ರಿ ಉತ್ಸವ ನಡೆಯುತ್ತಿದೆ.  2018ರಿಂದ ಮೆಣಸೂರು ಗ್ರಾಮದ ಭದ್ರಾಹಿನ್ನೀರಿನಲ್ಲಿ ತೆಪ್ಪೋತ್ಸವ ಆಚರಿಸಿ ದೇವಿಯ ವಿಗ್ರಹ ವಿಸರ್ಜನೆ ಕಾರ್ಯಕ್ರಮ ನಡೆಸಲಾಗುತ್ತಿದೆ.

ಅಸುರ ದಹನ ವೀಕ್ಷಣೆಗೆ ಜನಸಾಗರ 

ಮೂಡಿಗೆರೆ: ಪಟ್ಟಣದಲ್ಲಿ ನಡೆಯುವ ನವರಾತ್ರಿ ಉತ್ಸವವು ಭಕ್ತಿ ಭಾವಕ್ಕೆ ಸಾಕ್ಷಿಯಾಗಿದೆ. ಪಟ್ಟಣದ ದುರ್ಗಾ ಸೇವಾ ಸಮಿತಿಯಿಂದ ಪ್ರತಿ ವರ್ಷವೂ ಅಡ್ಯಂತಾಯ ರಂಗಮಂದಿರದಲ್ಲಿ ನಡೆಯುತ್ತಿದೆ. ಕೊನೆಯ ದಿನ ದುರ್ಗಾ ಮಾತೆಯನ್ನು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಸುಂಡೇಕೆರೆ ಹಳ್ಳದಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಅಸುರ ದಹನ: ಪಟ್ಟಣದಲ್ಲಿ ನಡೆಯುವ ನವರಾತ್ರಿ ಉತ್ಸವದಲ್ಲಿ ಅಸುರ‌ ದಹನವೇ ವಿಶೇಷ. ನವರಾತ್ರಿಯ ಕೊನೆಯ ದಿನದಂದು ಲಯನ್ಸ್ ವೃತ್ತದಲ್ಲಿ ಬೃಹತ್ ಗಾತ್ರದ ಅಸುರ ನಿರ್ಮಾಣ ಮಾಡಿ ರಾತ್ರಿ ದೇವಿಯ ಎದುರಿನಲ್ಲಿ ದಹನ‌ ಮಾಡಲಾಗುತ್ತದೆ.

ಅಸುರ ದಹನ‌ ವೀಕ್ಷಿಸಲು ಪಟ್ಟಣ ಮಾತ್ರವಲ್ಲದೆ ಗ್ರಾಮೀಣ ಭಾಗದಿಂದ ಜನಸಾಗರವೇ ಸೇರುತ್ತದೆ. ತಾಲ್ಲೂಕಿನ ಅಂಗಡಿ ವಸಂತ ಪರಮೇಶ್ವರಿ ದೇವಾಲಯದಲ್ಲಿ ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪ್ರತಿ ದಿನವೂ ದೇವಿಗೆ ವಿಶೇಷ ಪೂಜೆ ಹಾಗೂ ಸಾಮೂಹಿಕ‌ ಅನ್ನಸಂತರ್ಪಣೆ ಮಾಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.