ADVERTISEMENT

ಸ್ವಾಸ್ಥ್ಯ ಸಮಾಜಕ್ಕೆ ಕಲೆ, ಸಾಹಿತ್ಯದ ಕೊಡುಗೆ ಅಪಾರ: ಶಾಸಕ ಜಿ.ಎಚ್. ಶ್ರೀನಿವಾಸ್

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 3:01 IST
Last Updated 2 ಸೆಪ್ಟೆಂಬರ್ 2025, 3:01 IST
ಬೆಟ್ಟತಾವರೆಕೆರೆ ಗ್ರಾಮದ ಶ್ರೀಗೌರಮ್ಮದೇವಿ ಸಮುದಾಯ ಭವನದಲ್ಲಿ ನಡೆದ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಏರ್ಪಡಿಸಿದ್ದ ತರೀಕೆರೆ ತಾಲ್ಲೂಕು ತೃತೀಯ ಜಾನಪದ ಸಮ್ಮೇಳನವನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ಉದ್ಘಾಟಿಸಿದರು
ಬೆಟ್ಟತಾವರೆಕೆರೆ ಗ್ರಾಮದ ಶ್ರೀಗೌರಮ್ಮದೇವಿ ಸಮುದಾಯ ಭವನದಲ್ಲಿ ನಡೆದ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಏರ್ಪಡಿಸಿದ್ದ ತರೀಕೆರೆ ತಾಲ್ಲೂಕು ತೃತೀಯ ಜಾನಪದ ಸಮ್ಮೇಳನವನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ಉದ್ಘಾಟಿಸಿದರು   

ತರೀಕೆರೆ: ಜಾನಪದ ಭಾರತೀಯ ಸಂಸ್ಕೃತಿಯ ಅಡಿಗಲ್ಲು. ಸ್ವಾಸ್ತ್ಯ ಸಮಾಜ ಹುಟ್ಟು ಹಾಕಲು ಜಾನಪದ ಕಲೆ, ಸಾಹಿತ್ಯದ ಕೊಡುಗೆ ಅಪಾರ. ಮಾನವನ ಸರ್ವತೋಮುಖ ಬೆಳವಣಿಗೆ, ಪರಿಸರ ಸಂರಕ್ಷಣೆ, ಕೌಟುಂಬಿಕ ಹೊಂದಾಣಿಕೆಗೆ ಜಾನಪದ ಸಹಕಾರಿಯಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದರು.

ತಾಲ್ಲೂಕಿನ ಬೆಟ್ಟತಾವರೆಕೆರೆ ಗ್ರಾಮದ ಗೌರಮ್ಮದೇವಿ ಸಮುದಾಯ ಭವನದಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಏರ್ಪಡಿಸಿದ್ದ ತರೀಕೆರೆ ತಾಲ್ಲೂಕು ತೃತೀಯ ಜಾನಪದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ಜಾನಪದ ಪರಿಷತ್ತು ನಾಡಿದಾದ್ಯಂತ ಜಾನಪದ ಕಲೆಯನ್ನು ಉಳಿಸಿ, ಬೆಳೆಸಲು ಅವಿರತವಾಗಿ ಶ್ರಮಿಸುತ್ತಿದ್ದು, ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ ಎಂದರು.

ADVERTISEMENT

ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ. ಸುರೇಶ್ ಮಾತನಾಡಿ, ಕಳೆದ 8 ವರ್ಷಗಳಿಂದ ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಜಾನಪದದ ವಿವಿಧ ತರಬೇತಿ ಶಿಬಿರಗಳು, ಜಾನಪದ ಗೋಷ್ಠಿ, ಸಮ್ಮೇಳನಗಳನ್ನು ನಡೆಸಿಕೊಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ಶಾಲಾ, ಕಾಲೇಜುಗಳಲ್ಲಿ ಜಾನಪದ ಕಲಾ ಶಿಬಿರಗಳನ್ನು ನಡೆಸಲು ಚಿಂತನೆ ನಡೆಸಲಾಗಿದೆ ಎಂದರು.

ಸಾಹಿತಿ ಚಟ್ನಳ್ಳಿ ಮಹೇಶ್ ಮಾತನಾಡಿ, ಇಂದಿನ ಯುವಕ, ಯುವತಿಯರಿಗೆ ಕುಟುಂಬದ ಹಿರಿಯರು ಜಾನಪದ ಕಲೆ, ಒಗಟು, ಗಾದೆ, ಜಾನಪದ ನೃತ್ಯ, ಸಾಹಿತ್ಯ, ಸಂಗೀತದ ಬಗ್ಗೆ ಹೇಳಿಕೊಡಬೇಕು. ಈ ನಾಡಿನ ಕಲೆ, ಸಾಹಿತ್ಯ, ಸಂಗೀತ ಉಳಿಸುವ ನಿಟ್ಟಿನಲ್ಲಿ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಅಭಿವೃಧ್ದಿ ಸಾಧಿಸಲು ಜಾನಪದದ ಕೊಡುಗೆ ದೊಡ್ಡದು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜಾನಪದ ಕಲೆಗೆ ಒತ್ತು ನೀಡುವ ಕೆಲಸವಾಗಬೇಕು ಎಂದರು.

ಸಮ್ಮೇಳನಾಧ್ಯಕ್ಷ ಬಿ.ವಿ.ಜಯಣ್ಣ ಮಾತನಾಡಿ,  ಗ್ರಾಮದಲ್ಲಿ ಹಬ್ಬ, ಹರಿದಿನಗಳಲ್ಲಿ ಆಯೋಜಿಸುತ್ತಿದ್ದ ನಾಟಕಗಳಲ್ಲಿ ನಾನು ಅಭಿನಯಿಸಿದ್ದೆ. ಕುಟುಂಬದ ಬೆಂಬಲ ಹಾಗೂ ಪ್ರೋತ್ಸಾಹದಿಂದ ಕಲಾವಿದನಾಗಿ ರೂಪುಗೊಳ್ಳಲು ಸಾಧ್ಯವಾಯಿತು ಎಂದರು.

ಗ್ಲೋಬಲ್ ಸೋಷಿಯಲ್ ಅಂಡ್ ವೆಲ್‌ಫೇರ್ ಫೌಂಡೇಷನ್ ರಾಜ್ಯಾಧ್ಯಕ್ಷ ಇಮ್ರಾನ್ ಅಹಮದ್ ಬೇಗ್ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜಾನಪದ ಸಾಹಿತ್ಯ, ಕ್ರಾಂತಿ ಗೀತೆಗಳು ಜನರಲ್ಲಿ ಏಕತೆ ಮೂಡಿಸಲು, ಚಳವಳಿಗೆ ಶಕ್ತಿ ತುಂಬಲು ಸಹಕಾರಿಯಾದವು ಎಂದರು.

ಸಾಹಿತಿ ಎಚ್.ಎಂ.ಮರುಳಸಿದ್ದಯ್ಯ ಪಟೇಲ್ ಮಾತನಾಡಿದರು. ಸಮ್ಮೇಳನದಲ್ಲಿ ವೀರಗಾಸೆ, ಕೋಲಾಟ, ಚೋಮನ ಕುಣಿತ, ಸುಗ್ಗಿ ಕುಣಿತ, ಜಾನಪದ ನೃತ್ಯ, ಚಿಟ್ಟಿಮೇಳ, ಭಜನೆ ಸೇರಿದಂತೆ ಹಲವು ಕಲಾ ತಂಡಗಳೊಂದಿಗೆ ಗ್ರಾಮದ ಬೀದಿ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಜಾನಪದ ಗೋಷ್ಠಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಕಜಾಪ ತಾಲೂಕು ಅಧ್ಯಕ್ಷ ಎಚ್.ಎಸ್. ರಾಜಶೇಖರ್, ಹಿರಿಯ ಕಲಾವಿದ ಮಾಳೇನಹಳ್ಳಿ ಬಸಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ, ಸಾಹಿತಿ ಹೊಸೂರು ಪುಟ್ಟರಾಜು, ಕೆ.ಎಸ್.ಶಿವಣ್ಣ, ಡಿ.ಪಿ.ರಾಜಪ್ಪ, ಪರಿಷತ್ತಿನ ಪದಾಧಿಕಾರಿಗಳಾದ ಜಿ.ಎಸ್.ತಿಪ್ಪೇಶ್, ಪಿ.ದೇವರಾಜ್, ಆರ್.ನಾಗೇಶ್, ಗಾಯಿತ್ರಮ್ಮ, ಟಿ.ಈ. ದೇವರಾಜ್, ಗ್ರಾಮಸ್ಥರಾದ ತಿಪ್ಪೇರುದ್ರಪ್ಪ, ಕಲ್ಲೇಶಪ್ಪ, ಗೌರೀಶ, ಮರುಳಸಿದ್ದಪ್ಪ, ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.