
ಚಿಕ್ಕಮಗಳೂರು: ಅರಣ್ಯ ಭೂಮಿ ಮಂಜೂರು ಪತ್ತೆಗೆ ಕೇಂದ್ರ ಸರ್ಕಾರ ಎಸ್‌ಐಟಿ ರಚನೆ ಮಾಡಿದ್ದು, ಇದರಿಂದ ಜಿಲ್ಲೆಯ ಸಾವಿರಾರು ಸಣ್ಣ ರೈತರು ಭೂಮಿಯ ಹಕ್ಕು ಕಳೆದುಕೊಳ್ಳಲಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಹೇಳಿದರು.
‘1980ರ ನಂತರ ಮಂಜೂರಾದ ಅರಣ್ಯ ಭೂಮಿ ಗುರುತಿಸಲು ಎಸ್‌ಐಟಿ ಮುಂದಾಗಿದೆ. ಇದರಿಂದ ಮಲೆನಾಡಿನ ರೈತರು ತೊಂದರೆಗೆ ಸಿಲುಕಲಿದ್ದಾರೆ. ಈ ಸಮಸ್ಯೆ ಪರಿಹಾರಕ್ಕೆ ಮಲೆನಾಡು ಭಾಗದ ಜನಪ್ರತಿನಿಧಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ಜಿಲ್ಲೆಯಲ್ಲಿ ಈ ಹಿಂದೆ ಸಾವಿರಾರು ಎಕರೆ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಿದೆ. ಇಂತಹ ಭೂಮಿಯನ್ನು ಡೀಮ್ಡ್ (ಪರಿಭಾವಿತ) ಅರಣ್ಯ ಎಂದು ಘೋಷಿಸಲಾಗಿದೆ. ಪರಿಭಾವಿತ ಅರಣ್ಯದಲ್ಲಿ ಸಾವಿರಾರು ರೈತರು ಕೃಷಿಕರ ಭೂಮಿ ಇದೆ. ಇವರೆಲ್ಲರೂ ಸಣ್ಣ ಮತ್ತು ಅತಿ ಸಣ್ಣ ರೈತರು. ಶಾಸಕರ ಅಧ್ಯಕ್ಷತೆಯ ಭೂಸಕ್ರಮೀಕರಣ ಸಮಿತಿಗಳು ಕಾನೂನು ಬದ್ಧವಾಗಿ ಈ ರೈತರಿಗೆ ಭೂಮಿ ಮಂಜೂರು ಮಾಡಿವೆ. ಸಾಗುವಳಿ ಚೀಟಿಯನ್ನೂ ಪಡೆದುಕೊಂಡಿದ್ದಾರೆ. ಇಂತಹ ಭೂಮಿಯನ್ನು ಅರಣ್ಯ ಎಂದು ಗುರುತಿಸಿ ಸಾಗುವಳಿ ಚೀಟಿ ರದ್ದು ಮಾಡಿದರೆ ರೈತರು ಭೂಮಿ ಕಳೆದುಕೊಳ್ಳಲಿದ್ದಾರೆ’ ಎಂದು ಹೇಳಿದರು.
ಕೇಂದ್ರ ಸರ್ಕಾರ ಅರಣ್ಯ ಭೂಮಿಗಳ ಮಂಜೂರಾತಿಯನ್ನು ರದ್ದು ಮಾಡಲು ಎಸ್‌ಐಟಿ ರಚನೆಗೆ ಆದೇಶಿಸಿದೆ.ಇದು ರೈತ ವಿರೋಧಿ ನೀತಿಯಾಗಿದೆ. ಮಂಜೂರಾತಿ ರದ್ದು ಮಾಡಿದರೆ ರೈತರಿಗೆ ಭಾರಿ ಅನ್ಯಾಯವಾಗಲಿದೆ ಎಂದರು.
ಎಸ್‌ಐಟಿ ಹೆಸರಿನಲ್ಲಿ ಸಣ್ಣ ರೈತರ ಮೇಲೆ ಗಧಾ ಪ್ರಹಾರ ನಡೆಸುವುದನ್ನು ಸಹಿಸಲು ಸಾಧ್ಯವಿಲ್ಲ. ಸಮಸ್ಯೆ ಪರಿಹಾರ ಸಂಬಂಧ ಚಿಕ್ಕಮಗಳೂರು, ಕೊಡಗು, ಹಾಸನ ಸೇರಿ ಮಲೆನಾಡು ಭಾಗದ ಜನಪ್ರತಿನಿಧಿಗಳು ಕೂಡಲೇ ಸಭೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಮಸ್ಯೆ ಮನವರಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಕಂದಾಯ ಇಲಾಖೆ, ಅರಣ್ಯ ಇಲಾಖೆ ಜಂಟಿ ಸರ್ವೆ ಪೂರ್ಣಗೊಳಿಸಿ ಅರಣ್ಯ ಇಲಾಖೆಗೆ ವರ್ಗಾಯಿಸಿರುವ ಕಂದಾಯ ಭೂಮಿಯನ್ನು ಹಿಂಪಡೆಯಬೇಕು. ಆ ಭೂಮಿಯನ್ನು ಎಲ್ಲಾ ವರ್ಗದ ಭೂರಹಿತರಿಗೆ ಹಂಚಿಕೆ ಮಾಡಬೇಕು ಮತ್ತು ಸರ್ಕಾರಿ ಉದ್ದೇಶಗಳಿಗೆ ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಅತೀಕ್ ಕೈಸರ್, ಪುಟ್ಟೇಗೌಡ, ಹಿರೇಮಗಳೂರು ರಾಮಚಂದ್ರ, ಲೋಕೇಶ್, ಸಂತೋಷ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.