ADVERTISEMENT

ಕಡೂರು | ಫ್ರೂಟ್ಸ್ ಐಡಿ: ನೋಂದಣಿಗೆ ದೊಡ್ಡ ರೈತರ ನಿರಾಸಕ್ತಿ

ತಾಲ್ಲೂಕಿನಲ್ಲಿ ಒಟ್ಟು 1,94,779 ರೈತರಲ್ಲಿ 1,51,858 ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2023, 7:19 IST
Last Updated 28 ಡಿಸೆಂಬರ್ 2023, 7:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಡೂರು: ಬರ ಪರಿಹಾರ ಪಡೆಯಲು ಅಗತ್ಯವಾಗಿರುವ ಫ್ರೂಟ್ಸ್ ಐಡಿಯನ್ನು ಪಡೆಯಲು ದೊಡ್ಡ ರೈತರು ನಿರಾಸಕ್ತಿ ತೋರಿದ್ದಾರೆ. ಇದು ಕೃಷಿ ಸೇರಿದಂತೆ ವಿವಿಧ ಇಲಾಖೆಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಬರ ಪರಿಹಾರಕ್ಕೆ ಸರ್ಕಾರದಿಂದ ಒಂದು ಹೆಕ್ಟೇರ್ ಪ್ರದೇಶಕ್ಕೆ ₹8,500 ಸಾವಿರ ಇನ್‌ಪುಟ್ ಸಬ್ಸಿಡಿ ದೊರೆಯುತ್ತದೆ. ಮುಂಗಾರು ವಿಫಲವಾಗಿ ರೈತರು ಹಾಕಿದ ಬೆಳೆ ಬಾರದಿದ್ದಾಗ ಅದಕ್ಕೆ ಖರ್ಚು ಮಾಡಿದ ಬೀಜ, ಗೊಬ್ಬರ ಖರ್ಚಿನ ಒಂದು ಭಾಗ. ಇದನ್ನು ಪಡೆಯಲು ಫ್ರೂಟ್ಸ್ ನೋಂದಣಿ ಸಂಖ್ಯೆ ಅಗತ್ಯ.

ಈವರೆಗೆ ಶೇ 78ರಷ್ಟು ರೈತರು ನೋಂದಣಿ ಮಾಡಿಕೊಂಡಿದ್ದು, ಇವರೆಲ್ಲರೂ ಸಣ್ಣ ರೈತರು. ಉಳಿದ ಶೇ 28ರಷ್ಟು ದೊಡ್ಡ ರೈತರು, ಜಮೀನು ಹೊಂದಿ ಬೇರೆಡೆ ವಾಸವಾಗಿರುವವರು ನೋಂದಣಿ ಮಾಡಿಕೊಳ್ಳಲು ಮುಂದೆ ಬರುತ್ತಿಲ್ಲ. 

ADVERTISEMENT

ನೋಂದಣಿ ಮಾಡಿಸಿಕೊಳ್ಳಲು ನಿರಾಸಕ್ತಿ ತೋರುತ್ತಿರುವ ರೈತರಲ್ಲಿ ಹೆಚ್ಚು ರೈತರು ಕಸಬಾ ಹೋಬಳಿಯಲ್ಲಿದ್ದು, ಇಲ್ಲಿ 9,611 ರೈತರ ನೋಂದಣಿಯಾಗಬೇಕಿದೆ. ಬೀರೂರು 6,156, ಯಗಟಿ 5,144, ಹಿರೇನಲ್ಲೂರು 3,738, ಸಿಂಗಟಗೆರೆ 3,405, ಸಖರಾಯಪಟ್ಟಣ 9,237, ಚೌಳಹಿರಿಯೂರು 2,216, ಪಂಚನಹಳ್ಳಿಯಲ್ಲಿ 3,414 ರೈತರು ನೋಂದಣಿ ಮಾಡಿಸಿಕೊಳ್ಳದವರಿದ್ದಾರೆ. ತಾಲ್ಲೂಕಿನಲ್ಲಿ ಒಟ್ಟು 1,94,779 ರೈತರಲ್ಲಿ 1,51,858 ರೈತರು ನೋಂದಣಿ ಮಾಡಿಸಿಕೊಂಡಿದ್ದು, 42,921 ರೈತರ ನೋಂದಣಿಯಾಗಬೇಕಿದೆ.

ಬರಗಾಲದಿಂದ ತತ್ತರಿಸಿರುವ ರೈತರಿಗೆ ಸರ್ಕಾರದಿಂದ ಬರುವ ಪರಿಹಾರದ ಮೊತ್ತ ಪಡೆಯಲು ಉಳಿದವರು ಕೂಡಲೇ ನೋಂದಣಿ ಮಾಡಿಸಿಕೊಳ್ಳಲು ಮುಂದಾಗಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಂ. ಅಶೋಕ್ ಮನವಿ ಮಾಡಿದರು.

ಮುಂಗಾರು ವಿಫಲವಾಗಿದ್ದರೂ ಹಿಂಗಾರು ಮಳೆ ಕೈಹಿಡಿದಿದ್ದು, ಕೃಷಿ ಚಟುವಟಿಕೆಗಳು ಸ್ಥಗಿತಗೊಳ್ಳದೆ ಮುಂದುವರೆಯಲು ಪೂರಕವಾಗಿದೆ. ಹಿಂಗಾರು ಬೆಳೆಗಳಾದ ಕಡಲೆ 4,610, ಹಿಂಗಾರಿ ಜೋಳ 1,680, ಹುರುಳಿ 1,965, ಒಟ್ಟು 8,255 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು, ಬೆಳೆ ಉತ್ತಮ ಸ್ಥಿತಿಯಲ್ಲಿವೆ.

ಐದು ಎಕರೆಗಿಂತ ಹೆಚ್ಚಿನ ಜಮೀನು ಇದ್ದವರಲ್ಲಿ ಯಾರಿಗಾದರೂ ಬಿಪಿಎಲ್ ಪಡಿತರ ಕಾರ್ಡ್ ಇದ್ದರೆ ಅದು ರದ್ದಾಗುತ್ತದೆ. ಹೆಕ್ಟೇರಿಗೆ ₹8,500 ಹಣ ಪಡೆಯಲು ಹೋಗಿ ಪಡಿತರ ಕಾರ್ಡ್ ರದ್ದಾಗಬಹುದು ಎಂಬ ಕಾರಣದಿಂದಲೂ ಕೆಲವರು ಫ್ರೂಟ್ಸ್ ಐಡಿ ಪಡೆಯಲು ಮುಂದಾಗುತ್ತಿಲ್ಲ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.