
ಚಿಕ್ಕಮಗಳೂರು: ನಡಿಗೆ ಪಥದಲ್ಲಿ ಮುಳ್ಳುಗಿಡಗಳು, ಉದ್ಯಾನದ ತುಂಬೆಲ್ಲ ಗಿಡಗಂಟಿಗಳು, ಹದಗೆಟ್ಟ ಸೌಂದರ್ಯ, ಕೂರಲು ಆಸನಗಳಿಲ್ಲ, ನಿಲ್ಲಲು ನೆರಳಿಲ್ಲ... ಇದು ನಗರದ ಗಾಂಧಿನಗರ ಉದ್ಯಾನದ ಸ್ಥಿತಿ.
ನಗರದ ಬಿಎಸ್‌ಎನ್‌ಎಲ್ ಕಚೇರಿ ಕಡೆಯಿಂದ ಬಂದರೆ ಈ ಉದ್ಯಾನ ಎದುರಾಗುತ್ತದೆ. ಗಾಂಧಿನಗರ ಬಡಾವಣೆಯಲ್ಲಿ ನಗರಸಭೆಯ ವಿಶಾಲವಾದ ಉದ್ಯಾನವಿದ್ದು, ಅಭಿವೃದ್ಧಿ ಮಾತ್ರ ಇಲ್ಲವಾಗಿದೆ.
ನಿತ್ಯ ಇಲ್ಲಿನ ನಿವಾಸಿಗಳು ವಾಯು ವಿಹಾರ, ವಿಶ್ರಾಂತಿಗಾಗಿ ಈ ಉದ್ಯಾನವನ್ನೇ ಅವಲಂಬಿಸಿದ್ದಾರೆ. ಆದರೆ, ಈ ಉದ್ಯಾನದಲ್ಲಿ ನಡಿಗೆ ಪಥದಲ್ಲಿ ಗಿಡಗಳು ಬೆಳೆದು ದಾರಿಯೇ ಕಾಣದಾಗಿದೆ. ಇದರ ನಡುವೆಯೇ ನಿತ್ಯ ನಡಿಗೆ ಮಾಡಬೇಕಾದ ಅನಿವಾರ್ಯತೆ ಇಲ್ಲಿನ ನಿವಾಸಿಗಳಿಗಿದೆ.
ಜೊತೆಗೆ ಉದ್ಯಾನದ ತುಂಬೆಲ್ಲ ಮುಳ್ಳು, ಗಿಡಗಂಟಿಗಳು ಬೆಳೆದು ನಿಂತಿವೆ. ಬೆಳಿಗ್ಗೆ ಹಾಗೂ ಸಂಜೆ, ಕತ್ತಲು ವೇಳೆಯಲ್ಲಿ ವಿಹಾರ ಮಾಡಲು, ವಿಶ್ರಾಂತಿ ಪಡೆಯಲು ಸ್ವಲ್ಪ ಆತಂಕವಾಗುತ್ತದೆ. ಎತ್ತರವಾಗಿ ಬೆಳೆದು ನಿಂತ ಗಿಡಗಳಲ್ಲಿ ಹಾವು ಸೇರಿರುವ ಭಯ ಇದೆ. ಈ ಮುಳ್ಳು ಗಿಡಗಳನ್ನು ತೆಗೆದು ಸ್ವಚ್ಛ ಮಾಡಿದರೆ ಅನುಕೂಲವಾಗುತ್ತದೆ ಎಂದು ಇಲ್ಲಿನ ನಿವಾಸಿಗಳು ಹೇಳುತ್ತಾರೆ.
ಬಡಾವಣೆಯಲ್ಲಿನ ಮಕ್ಕಳು ನಿತ್ಯ ಸಂಜೆ ವೇಳೆ ಪೋಷಕರನ್ನು ಕರೆತರುತ್ತಾರೆ. ಆದರೆ, ಮಕ್ಕಳಿಗೆ ಆಟವಾಡಲು ಆಟಿಕೆ ಸಲಕರಣೆಗಳು ಇಲ್ಲ. ಈಗಾಗಿ ಪೋಷಕರು ಮಕ್ಕಳ ಕರೆತರಲು ಹಿಂದೇಟು ಹಾಕುವಂತಾಗಿದೆ.
ಈ ವಿಶಾಲವಾದ ಪಾರ್ಕ್‌ನಲ್ಲಿ ವಿಶ್ರಾಂತಿ ಪಡೆಯಲು ಆಸನಗಳು ಇಲ್ಲದಾಗಿದೆ. ಉದ್ಯಾನಕ್ಕೆ ಕೇವಲ ಎರಡೇ ಎರಡು ಬೆಂಚ್‌ಗಳನ್ನು ಹಾಕಲಾಗಿದೆ. ಇಲ್ಲಿಗೆ ಬರುವವರು ಕಾಂಪೌಂಡಿನ ಕಟ್ಟೆಯ ಮೇಲೆ ಕುಳಿತು ವಿಶ್ರಾಂತಿ ಪಡೆಯಬೇಕಾದ ಅನಿವಾರ್ಯತೆ ಇದೆ.
ಜೊತೆಗೆ ಪಾರ್ಕ್‌ನಲ್ಲಿ ನೆರಳಿಗಾಗಿ ಸರಿಯಾದ ಗಿಡ, ಮರಗಳನ್ನು ಬೆಳೆಸಬೇಕಾಗಿದೆ. ಬಿಸಿಲಿನ ವೇಳೆ ವಿಶ್ರಾಂತಿ ಪಡೆಯಲು ನೆರಳು ಇಲ್ಲದಾಗಿದೆ. ಇರುವ ಒಂದೆರಡು ಮರದ ನೆರಳಿನ ಆಶ್ರಯದಲ್ಲಿ ವಿಶ್ರಮಿಸಬೇಕಾಗಿದೆ ಎನ್ನುತ್ತಾರೆ ಸ್ಥಳೀಯರು.
ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ನೀಡಲಾಗಿತ್ತು. ಮುಂದಿನ ಬಜೆಟ್‌ನಲ್ಲಿ ಹಣ ನಿಗದಿ ಮಾಡಿ ಉದ್ಯಾನ ಅಭಿವೃದ್ಧಿಪಡಿಸಲಾಗುವುದುಬಿ.ಸಿ.ಬಸವರಾಜ್ ನಗರಸಭೆ ಆಯುಕ್ತ
ಸೂಕ್ತ ವ್ಯವಸ್ಥೆ ಕಲ್ಪಿಸಲು ಆಗ್ರಹ ನಾವು ಹಿರಿಯ ನಾಗರಿಕರು ನಮಗೆ ವಿಶ್ರಾಂತಿ ಮಾಡಲು ಸೂಕ್ತವಾದ ಉದ್ಯಾನ ಇಲ್ಲ ಎಂದು ಇದೇ ಉದ್ಯಾನದಲ್ಲಿ ನಿತ್ಯ ವಾಯು ವಿವಾರ ನಡೆಸುವ ಹಿರಿಯ ನಾಗರಿಕರು ಬೇಸರ ವ್ಯಕ್ತಪಡಿಸುತ್ತಾರೆ. ‘ನಡಿಗೆಗೆ ಜಿಲ್ಲಾ ಆಟದ ಮೈದಾನಕ್ಕೆ ಹೋಗವ ಪರಿಸ್ಥಿತಿ ಇದೆ. ನಗರಸಭೆ ಈ ಉದ್ಯಾನ ಅಭಿವೃದ್ಧಿಪಡಿಸಿದರೆ ನಮಗೆ ಮಕ್ಕಳಿಗೆ ಅನುಕೂಲವಾಗಲಿದೆ. ಬಡಾವಣೆಯ ಸೌಂದರ್ಯವೂ ಹೆಚ್ಚಾಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.