ADVERTISEMENT

ಮುಳ್ಳಯ್ಯನಗಿರಿ ಪ್ರವಾಸ | ಆನ್‌ಲೈನ್ ಬುಕ್ಕಿಂಗ್ ಜಾರಿ ನಾಳೆಯಿಂದ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 5:15 IST
Last Updated 31 ಆಗಸ್ಟ್ 2025, 5:15 IST
ಸಿ.ಎನ್.ಮೀನಾ ನಾಗರಾಜ್
ಸಿ.ಎನ್.ಮೀನಾ ನಾಗರಾಜ್   

ಚಿಕ್ಕಮಗಳೂರು: ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿ ಸೇರಿ ಚಂದ್ರದ್ರೋಣ ಪರ್ವತ ಶ್ರೇಣಿಗೆ ತೆರಳುವ ಪ್ರವಾಸಿ ವಾಹನಗಳಿಗೆ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಲು ಜಿಲ್ಲಾಡಳಿತ ಮುಂದಾಗಿದ್ದು, ಸೆ.1ರಿಂದ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಜಾರಿಗೆ ಬರಲಿದೆ.

ನಿರಂತರ ಭೂಕುಸಿತ, ವಾಹನ ದಟ್ಟಣ ಹೆಚ್ಚಾಗುತ್ತಿರುವ ಜತೆಗೆ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್‌ಐ) ವರದಿಗಳನ್ನು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, 'ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಹಾಗೂ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸೇರಿ ಹಲವು ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರ ವಾಹನ ದಟ್ಟಣೆ ನಿಯಂತ್ರಿಸಲು, ಸಿದ್ಧಪಡಿಸಿರುವ ಆನ್‌ಲೈನ್ ಬುಕಿಂಗ್ ವ್ಯವಸ್ಥೆ ಇದಾಗಿದೆ. ಯಾವುದೇ ನಿರ್ಬಂಧ ಅಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರವಾಸಿಗರು ಮುಳ್ಳಯ್ಯನಗಿರಿ ಪ್ರವಾಸಿ ತಾಣಕ್ಕೆ ಮಾತ್ರ ಹೆಚ್ಚು ಭೇಟಿ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಎತ್ತಿನಭುಜ, ದೇವರಮನೆ, ಅಯ್ಯನಕೆರೆ, ಮುತ್ತೋಡಿ ಅಭಯಾರಣ್ಯ, ಕೆಮ್ಮಣ್ಣುಗುಂಡಿ ಸೇರಿ ಅನೇಕ ಜಲಪಾತಗಳು ಇವೆ. ಅಲ್ಲಿಗೂ ಪ್ರವಾಸಿಗರು ಭೇಟಿ ನೀಡಬಹುದು. ಇದರಿಂದ ಗಿರಿಭಾಗದಲ್ಲಿ ಉಂಟಾಗುವ ವಾಹನ ದಟ್ಟಣೆ ಕಡಿಮೆಯಾಗಲಿದೆ. ನಿಸರ್ಗ ಮತ್ತು ಪ್ರವಾಸೋದ್ಯಮ ಎರಡನ್ನು ಸಮಾನವಾಗಿ ನೋಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ADVERTISEMENT

ಸೆ.1ರಿಂದ ಆನ್‌ಲೈನ್‌ ಬುಕಿಂಗ್ ವ್ಯವಸ್ಥೆ ಜಾರಿ ಆಗುತ್ತಿದ್ದು, 10ರಿಂದ 12 ದಿನಗಳಲ್ಲಿ ಇದರ ಸಾಧಕ- ಬಾಧಕ, ಸಲಹೆಗಳು ತಿಳಿಯುತ್ತದೆ. ಬಳಿಕ ಕೆಡಿಪಿ ಸಭೆಯಲ್ಲಿ ಇದರ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದು ಹೇಳಿದರು.

ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಡಾ.ವಿಕ್ರಮ್ ಅಮಟೆ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಗೌರವ್‌ ಹಾಜರಿದ್ದರು.

5 ವರ್ಷದಲ್ಲಿ 68 ಕಡೆ ಭೂ ಕುಸಿತ

ಗಿರಿಭಾಗದಲ್ಲಿ ಕಳೆದ 5 ವರ್ಷಗಳಲ್ಲಿ 68 ಕಡೆ ಭೂಕುಸಿತ ಉಂಟಾಗಿದೆ. ಈ ಭಾಗದಲ್ಲಿ ಬೀಳುವ ವಾರ್ಷಿಕ ಸರಾಸರಿ ಮಳೆ ವರದಿ ಈವರೆಗೆ ಮಳೆಗಾಲದಲ್ಲಿ ಆಗಿರುವ ಗುಡ್ಡ ಕುಸಿತ ಮತ್ತು ಭೂ ಕುಸಿತದ ಸಂಭವ ಕುರಿತು ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ವರದಿಗಳು ನಿಯಂತ್ರಿತ ಪ್ರವಾಸೋದ್ಯಮ ಅನಿವಾರ್ಯ ಎನ್ನುತ್ತಿದ್ದು ಐದು ವರ್ಷಗಳ ಅವಯಲ್ಲಿ ಐ.ಡಿ.ಪೀಠ ವ್ಯಾಪ್ತಿಯಲ್ಲಿ 68 ಕಡೆ ಕುಸಿತಗಳು ಸಂಭವಿಸಿವೆ. ಅಲ್ಲದೇ ಮಳೆಯ ಪ್ರಮಾಣವೂ ಜಾಸ್ತಿಯಾಗುತ್ತಿದೆ. ಜೂನ್ ಮತ್ತು ಜುಲೈನಲ್ಲಿ ಈ ಭಾಗದಲ್ಲಿ ಸುರಿದಿರುವ ಮಳೆಯ ಪ್ರಮಾಣ ಗಮನಿಸಿದರೆ ವಾಡಿಕೆಗಿಂತ ಮೂರು ಪಟ್ಟು ಜಾಸ್ತಿ ಇದೆ. ಕಡಿದಾದ ಇಳಿಜಾರು ಪ್ರದೇಶವೇ ಹೆಚ್ಚಿದ್ದು ವಾಹನಗಳ ಸಂಖ್ಯೆ ಹೆಚ್ಚಾಗಿ ನೆಲಕ್ಕೆ ಒತ್ತಡ ಹೆಚ್ಚಾದಷ್ಟು ಭೂಕುಸಿತ ಹೆಚ್ಚಾಗಲಿದೆ ಎಂದು ಜಿಎನ್‌ಎ ವರದಿ ಹೇಳಿದೆ. ಈ ಎಲ್ಲಾ ಕಾರಣಗಳಿಂದ ಕೆಲ ನಿಯಂತ್ರಣ ಅನಿವಾರ್ಯ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದ್ದು ಸರ್ಕಾರಕ್ಕೂ ಈ ಬಗ್ಗೆ ಸ್ಪಷ್ಟನೆ ನೀಡಲಾಗಿದೆ.

ಮೂಲ ಸೌಕರ್ಯಕ್ಕೂ ಆದ್ಯತೆ

ಪ್ರವಾಸಿ ತಾಣಗಳಲ್ಲಿ ಉತ್ಪತ್ತಿಯಾಗುತ್ತಿರುವ ಕಸದ ನಿರ್ವಹಣೆ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಎಷ್ಟು ಪ್ರಮಾಣದಲ್ಲಿ ಕಸ ಉತ್ಪತ್ತಿಯಾಗುತ್ತಿದೆ. ಉತ್ಪತ್ತಿಯಾದ ಕಸ ಎಲ್ಲಿ ಸಂಗ್ರಹ ಮಾಡಬೇಕು ಎಂಬ ಪ್ರಕ್ರಿಯೆ ನಡೆಯುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಗೌರವ್ ಮಾಹಿತಿ ನೀಡಿದರು. ಈ ಜಾಗದಲ್ಲಿ ತಾತ್ಕಾಲಿಕವಾಗಿ ಶೆಡ್‌ ನಿರ್ಮಾಣ ಮಾಡಿ ಸಂಗ್ರಹವಾದ ಕಸವನ್ನು ವಿಂಗಡಿಸಿ ಬೇಲರ್ ಮಷಿನ್‌ನಿಂದ ಕಾಂಪ್ಯಾಕ್ಟ್ ಮಾಡಿ ಮಾರಾಟ ಮಾಡಲು ಚಿಂತನೆ ಮಾಡಲಾಗಿದೆ. ಜತೆಗೆ ಉದ್ಯೋಗ ಸೃಷ್ಟಿ ಕೂಡ ಮಾಡಲಾಗುತ್ತದೆ. ಸ್ವ ಸಹಾಯ ಸಂಘಗಳನ್ನು ಬಳಕೆ ಮಾಡಿಕೊಂಡು ನಿರ್ವಹಣೆ ಮಾಡಲಾಗುತ್ತಿದೆ. ಎಷ್ಟು ಜನ ಉದ್ಯೋಗಿಗಳ ಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಪ್ರವಾಸಿ ತಾಣಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಗುವುದು. ಜತೆಗೆ ಎಷ್ಟು ಕಸದ ಬುಟ್ಟಿಗಳು ಅಳವಡಿಸಬೇಕು ಎಂಬುವುದು ಚರ್ಚೆ ನಡೆಯುತ್ತಿದೆ. ಈಗಾಲೇ ಐಡಿ ಪೀಠದಲ್ಲಿ 21 ಕಡೆ ಕಸದ ಬುಟ್ಟಿ ಇಡಲಾಗಿದೆ. ಪ್ರಮುಖ ಸ್ಥಳಲ್ಲಿ ಸುಮಾರು 15 ಮೀ 25 ಮೀ 75 ಮೀ ಅಂತರದಲ್ಲಿ ಕಸದ ಬುಟ್ಟಿ ಅಳವಡಿಸುವ ಚಿಂತನೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.