ಚಿಕ್ಕಮಗಳೂರು: ಗಂಗಾ ಕಲ್ಯಾಣ ಯೋಜನೆಯಡಿ ಮಂಜೂರಾದ ಕೊಳವೆಬಾವಿ ಕೊರೆಯಲು ಜಿಲ್ಲೆಯಲ್ಲಿ ನಾಲ್ಕು ವರ್ಷಗಳಿಂದ ಬಾಕಿ ಇದ್ದು, 300 ಫಲಾನುಭವಿಗಳು ಕಾಯುತ್ತಿದ್ದಾರೆ.
ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಲು, ಬಡ ರೈತರನ್ನು ಮೇಲೆತ್ತಲು ಸರ್ಕಾರ ಗಂಗಾ ಕಲ್ಯಾಣ ಯೋಜನೆ ರೂಪಿಸಿದೆ. ಈ ಯೋಜನೆಯಡಿ ಫಲಾನುಭವಿಗಳಾಗಿ ಆಯ್ಕೆಯಾಗುವುದು ರೈತರ ದೊಡ್ಡ ಕನಸು. ಆಯ್ಕೆಯಾದ ಬಳಿಕವೂ ಹೊಲಕ್ಕೆ ನೀರು ಹರಿಯಲು ನಾಲ್ಕೈದು ವರ್ಷ ಕಾಯಬೇಕಾದ ಸ್ಥಿತಿ ಇರುವುದನ್ನು ಅಂಕಿ–ಅಂಶಗಳು ಹೇಳುತ್ತಿವೆ.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಗಳ ಮೂಲಕ ನಾಲ್ಕು ವರ್ಷಗಳಲ್ಲಿ 1,052 ಕೊಳವೆ ಬಾವಿ ಕೊರೆಯಲು ಗುರಿ ನೀಡಲಾಗಿದೆ. ಆದರೆ, ಇನ್ನೂ 300 ಕೊಳವೆಬಾವಿ ಕೊರೆಯಲು ಬಾಕಿ ಇವೆ.
ಅದರಲ್ಲೂ 2021–22ನೇ ಸಾಲಿನಲ್ಲಿ ಮಂಜೂರಾಗಿದ್ದ 335 ಕೊಳವೆ ಬಾವಿಗಳ ಪೈಕಿ ಇನ್ನೂ 67 ಕೊಳವೆ ಬಾವಿಗಳನ್ನು ಕೊರೆದಿಲ್ಲ. ಇದೇ ಸಾಲಿನಲ್ಲಿ ಮಂಜೂರಾಗಿ ಕೊರೆದಿರುವ ಕೊಳವೆ ಬಾವಿಗಳ ಪೈಕಿ 102 ಬಾವಿಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ದೊರೆತಿಲ್ಲ.
2022–23 ಮತ್ತು 2023–24ನೇ ಸಾಲಿನಲ್ಲೂ ಇದೇ ಸ್ಥಿತಿ. 2024-25ರ ಸಾಲಿಗೆ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಅಂಬೇಡ್ಕರ್ ಅಭಿವೃದ್ದಿ ನಿಗಮ ಹಾಗೂ ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮಕ್ಕೆ 68 ಕೊಳವೆ ಬಾವಿ ಕೊರೆಯುವ ಗುರಿ ನೀಡಲಾಗಿತ್ತು. ಇಲಾಖೆ ವತಿಯಿಂದ ಅರ್ಜಿ ಆಹ್ವಾನಿಸಿ ಫಲಾನುಭವಿಗಳನ್ನೂ ಆಯ್ಕೆ ಮಾಡಲಾಗಿದೆ. ಆದರೆ, ಒಂದು ವರ್ಷ ಕಳೆದರೂ ಟೆಂಡರ್ ಪ್ರಕ್ರಿಯೆ ನಡೆಸದ ಕಾರಣ ರೈತರಿಗೆ ಕೊಳವೆಬಾವಿ ಭಾಗ್ಯ ದೊರೆತಿಲ್ಲ.
ಇನ್ನು ಕೊಳವೆಬಾವಿ ಕೊರೆದರೂ ವಿದ್ಯುತ್ ಸಂಪರ್ಕಕ್ಕಾಗಿ 363 ಫಲಾನುಭವಿಗಳು ಕಾದಿದ್ದಾರೆ. ಕೊರೆದಿರುವ ಕೊಳವೆ ಬಾವಿಗಳಿಗೆ ಕೂಡಲೇ ಶೀಘ್ರವೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಸರ್ಕಾರ ಆದೇಶ ನೀಡಿತ್ತು. ಇಂಧನ ಸಚಿವರು ಉಸ್ತುವಾರಿ ಸಚಿವರಾಗಿರುವ ಜಿಲ್ಲೆಯಲ್ಲಿ ಇನ್ನೂ ಮೆಸ್ಕಾಂನಿಂದ 294 ಕೊಳವೆಬಾವಿಗಳಿಗೆ ವಿದ್ಯುದ್ದೀಕರಣ ಬಾಕಿ ಇದೆ. ಇನ್ನುಳಿದವುಗಳಿಗೆ ನಿಗಮಗಳಿಂದಲೇ ಬಾಕಿ ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.