ADVERTISEMENT

ಬಹುಮತ ಸಾಬೀತಿಗೆ ಬಿಜೆಪಿಗೆ ಈಗ ಅವಕಾಶ: ರಾಜೇಗೌಡ

ರಾಜ್ಯಪಾಲರ ನಿರ್ಧಾರ ಸಂವಿಧಾನ ವಿರೋಧಿ; ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2019, 14:58 IST
Last Updated 28 ಜುಲೈ 2019, 14:58 IST

ಚಿಕ್ಕಮಗಳೂರು: ‘ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶಕೊಟ್ಟಿದ್ದು ಸಂವಿಧಾನಕ್ಕೆ ವಿರುದ್ಧವಾದ ನಿಲುವು. ಪ್ರಜಾಪ್ರಭುತ್ವ, ಕಾನೂನು ಎತ್ತಿಹಿಡಿಯುವವರೇ ಈ ರೀತಿ ನಡೆದುಕೊಂಡರೆ ಹೇಗೆ’ ಎಂದು ಕಾಂಗ್ರೆಸ್‌ ಶಾಸಕ ಟಿ.ಡಿ.ರಾಜೇಗೌಡ ಪ್ರಶ್ನಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ನೀಡುವಾಗ ಶೇ 50ಕ್ಕಿಂತ ಹೆಚ್ಚು ಸದಸ್ಯರ ಬೆಂಬಲ ಇದೆಯೇ ಎಂಬುದನ್ನು ಪರಿಗಣಿಸಬೇಕಿತ್ತು. ಅದೃಷ್ಟವಶಾತ್‌ ಈಗ ಅತೃಪ್ತ ಶಾಸಕರು ಅನರ್ಹರಾದರು. ನಾಳೆ (ಸೋಮವಾರ) ಬಹುಮತ ಸಾಬೀತಪಡಿಸಲು ಅವರಿಗೆ ಅವಕಾಶಯಿತು. ಈಗ ಅವರಿಗೆ ಬಹುಮತ ಇರುವುದನ್ನು ಒಪ್ಪಿಕೊಳ್ಳುತ್ತೇವೆ. ಆದರೆ, ಅನರ್ಹರಾಗುವ ಮುಂಚೆ, ರಾಜೀನಾಮೆ ಅಂಗೀಕಾರವುದಕ್ಕೂ ಮುಂಚೆ ರಾಜ್ಯಪಾಲರು ಅವಕಾಶ ಮಾಡಿಕೊಟ್ಟಿದ್ದು, ಸಂವಿಧಾನ ವಿರೋಧಿ ನಡೆ’ ಎಂದು ಪ್ರತಿಪಾದಿಸಿದರು.

‘ರಾಜೀನಾಮೆ ನೀಡಿದ್ದ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಕೈಗೊಂಡಿರುವ ನಿರ್ಧಾರವನ್ನು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ. ಇದೊಂದು ಪ್ರಬುದ್ಧ ತೀರ್ಮಾನ. ನಿಷ್ಪಕ್ಷಪಾತವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ. ಇಂಥ ತೀರ್ಮಾನಗಳು ಆಗದಿದ್ದರೆ ರಾಜಕಾರಣದಲ್ಲಿ ವ್ಯಾಪಾರೀಕರಣ ಆಗಿಬಿಡುತ್ತದೆ’ ಎಂದು ಉತ್ತರಿಸಿದರು.

ADVERTISEMENT

‘ಅನಾರೋಗ್ಯ, ಒತ್ತಡ, ಜನರಿಗೆ ಸ್ಪಂದಿಸಲಾಗುತ್ತಿಲ್ಲ ಎಂದು ಒಬ್ಬಿಬ್ಬರು ರಾಜೀನಾಮೆ ಕೊಡಬಹುದು. ಆದರೆ, ಗುಂಪಾಗಿ ರಾಜೀನಾಮೆ ನೀಡಿ, ರೆಸಾರ್ಟ್‌ನಲ್ಲಿ ತಿಂಗಳುಗಟ್ಟಲೆ ಕುಳಿತು ಜನರ ಪ್ರೀತಿವಿಶ್ವಾಸ ಮಾರಾಟ ಮಾಡುವುದು ಹೇಯ ಕೃತ್ಯ. ಅಂಥವರಿಗೆ ಇಂಥ ಶಾಸ್ತಿ ಆಗಬೇಕು. ಕೋರ್ಟ್‌ ಸಹ ಈ ನಿರ್ಧಾರವನ್ನು ಎತ್ತಿಹಿಡಿಯುತ್ತದೆ ಎಂಬ ಆತ್ಮವಿಶ್ವಾಸ ಇದೆ’ ಎಂದರು.

‘ಹಣಕ್ಕಾಗಿ ಏನು ಬೇಕಾದರೂ ಮಾಡುವಂಥ ಸ್ಥಿತಿ ಇದೆ. ಒಂದರೆಡು ಸ್ಥಾನ ವ್ಯತ್ಯಾಸಗಳಾದ ಸಂದರ್ಭದಲ್ಲಿ ನೂರಾರು ಕೋಟಿ ಕೊಟ್ಟು ಶಾಸಕರನ್ನು ಖರೀದಿಬಹುದು. ಮಾರಿಕೊಳ್ಳುವುದು ಹೀನ ಕೃತ್ಯ. ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ಯಾವುದೇ ಪ್ರತಿ ಆಪರೇಷನ್‌ ಮಾಡಲ್ಲ. ಬೇರೆ ಪಕ್ಷದವರನ್ನು ಸೆಳೆಯದಂತೆ ಮುಖಂಡರು ಹಿಂದೆಯೇ ತೀರ್ಮಾನ ಮಾಡಿದ್ದರು. ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧವಾಗಿರುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

‘ಬರುತ್ತೇವೆ ಎಂದು ಒಪ್ಪಿದ ಶಾಸಕರನ್ನು ಕರೆದೊಯ್ಯಲು ವಿಮಾನ ವ್ಯವಸ್ಥೆ ಮಾಡಿದ್ದರು. ಶಾಸಕರನ್ನು ದೆಹಲಿಗೆ ಕರೆದೊಯ್ದು ಅಮಿತ್‌ ಶಾ, ಪ್ರಧಾನಿ ಮೋದಿ ಅವರೊಟ್ಟಿಗೆ ಮಾತನಾಡಿಸಿ ಅಲ್ಲಿಂದ ಮುಂಬೈಗೆ ಕರೆದೊಯ್ದು ಪಂಚತಾರಾ ಹೋಟೆಲ್‌ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದರು. ಇದೆಲ್ಲ ರಾಜಕೀಯ ವ್ಯವಸ್ಥೆಯಲ್ಲಿ ಸರಿಯಲ್ಲ. ಇದಕ್ಕೆಲ್ಲ ಕಡಿವಾಣ ಬಿದ್ದಾಗ ಮಾತ್ರ ಜನರ ಮತಕ್ಕೆ ಮಾನ್ಯತೆ, ಪ್ರಜಾಪ್ರಭುತ್ವ, ಸಂವಿಧಾನ ಉಳಿಯುತ್ತದೆ. ಇಲ್ಲದಿದ್ದರೆ ಎಲ್ಲ ಬೀದಿಗೆ ತಂದು ಬಿಡುತ್ತಾರೆ’ ಎಂದರು.

‘ಪ್ಷಕೇತರರು ಸ್ವತಂತ್ರ ನಿರ್ಧಾರ ಕೈಗೊಳ್ಳಲು ಅರ್ಹರು. ಅವರು ಯಾರ ಜತೆ ಬೇಕಾದರೂ ಹೋಗಲು ಅವಕಾಶ ಇದೆ. ಆದರೆ, ಪಕ್ಷದಿಂದ ಗೆದ್ದವರು ಹೋಗಲು ಅವಕಾಶ ಇಲ್ಲ. ಕಾಂಗ್ರೆಸ್‌ ಸದಸ್ಯತ್ವ ಪಡೆದಿದ್ದ ಶಂಕರ್‌ ಅವರು ಪಕ್ಷಾಂತರ ಕಾಯ್ದೆ ವ್ಯಾಪ್ತಿಗೆ ಒಳಪಡುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.