ADVERTISEMENT

ದಾನ ಪರಂಪರೆಗೆ ಹೆಸರಾದ ಅರಳುಗುಪ್ಪೆ ಮನೆತನದ ಗೌರಮ್ಮ ಬಸವೇಗೌಡ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 7:23 IST
Last Updated 3 ಅಕ್ಟೋಬರ್ 2021, 7:23 IST
ಗೌರಮ್ಮ ಬಸವೇಗೌಡ
ಗೌರಮ್ಮ ಬಸವೇಗೌಡ   

ಚಿಕ್ಕಮಗಳೂರು: ದಾನ ಪರಂಪರೆಗೆ ಹೆಸರಾದ ಅರಳುಗುಪ್ಪೆ ಮನೆತನದ ಗೌರಮ್ಮ ಬಸವೇಗೌಡ (88) ಅವರು ಬೆಂಗಳೂರಿನ ಅಪೊಲೊ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು.

ಅವರಿಗೆ ಪುತ್ರರಾದ ಎ.ಬಿ. ಮಲ್ಲಿಕಾರ್ಜುನ್‌, ಎ.ಬಿ. ಸುದರ್ಶನ್‌, ಎ.ಬಿ. ರವಿಶಂಕರ್‌ ಇದ್ದಾರೆ.

ಸಾಂಸ್ಕೃತಿಕ ರಾಯಭಾರಿ ಗೌರಮ್ಮ ಬಸವೇಗೌಡ ಅವರು ಕಾಫಿನಾಡಿನಲ್ಲಿ ಚಿರಪರಿಚಿತರು. ಸಮಾಜಕಾರ್ಯ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ, ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಗೌರಮ್ಮ ಅವರು ಮಹಿಳಾ ಬ್ಯಾಂಕ್, ಟೌನ್ ಮಹಿಳಾ ಸಮಾಜ, ರೋಟರಿ ಕ್ಲಬ್, ಇನ್ನರ್ ವೀಲ್ ಸಹಿತ ಹಲವು ಸಂಘ-ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು.

ADVERTISEMENT

ಮಹಿಳಾ ಜಾಗೃತಿ ಸಂಘ, ಅಕ್ಕ ಮಹಾದೇವಿ ಸಂಘಗಳ ಅಧ್ಯಕ್ಷರಾಗಿದ್ದರು. ರೇಣುಕಾಚಾರ್ಯ ಟ್ರಸ್ಟ್ ವತಿಯಿಂದ ಸಾಮೂಹಿಕ ವಿವಾಹ ನೆರವೇರಿಸಿದ್ದರು. ವಿದ್ಯಾರ್ಥಿನಿಯರನ್ನು ದತ್ತು ಪಡೆದು ಅವರ ವಿದ್ಯಾಭ್ಯಾಸದ ಖರ್ಚು ಭರಿಸಿದ್ದರು.

ಯೂನಿವರ್ಸಲ್‌ ಕಾಫಿ ಫೌಂಡೇಷನ್‌-999 ಸ್ಥಾಪಿಸಿ ಎಸ್ಸೆಸ್ಸೆಲ್ಸಿ, ಪಿಯುಸಿ, ಎಂಜಿನಿಯರಿಂಗ್‌, ವೈದ್ಯಕೀಯ ವಿಜ್ಞಾನ, ಕೃಷಿ ಮೊದಲಾದ ಕೋರ್ಸ್‌ಗಳಲ್ಲಿ ಸಾಧನೆ ಮೆರೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿದ್ದರು.

ಗೌರಮ್ಮ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ರತ್ನ, ಮಲೆನಾಡ ರತ್ನ, ಮಹಿಳಾ ರತ್ನ ಮೊದಲಾದ ಪುರಸ್ಕಾರಗಳು ಸಂದಿವೆ.

ಭಾನುವಾರ ಮಧ್ಯಾಹ್ನ 3ಗಂಟೆಗೆ ತಿಪ್ಪನಹಳ್ಳಿ ಎಸ್ಟೇಟ್‌ನಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.