ADVERTISEMENT

ಸಂಸ್ಕಾರಯುತ ಗುರುಕುಲ ಶಿಕ್ಷಣ ಇಂದು ಅಗತ್ಯ: ಬಸಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ

ನೂತನ ಛಾತ್ರ ಪ್ರವೇಶೋತ್ಸವ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 3:14 IST
Last Updated 15 ನವೆಂಬರ್ 2021, 3:14 IST
ಕೊಪ್ಪ ತಾಲ್ಲೂಕಿನ ಪ್ರಬೋಧಿನಿ ಗುರುಕುಲದಲ್ಲಿ ನಡೆದ ನೂತನ ಛಾತ್ರ ಪ್ರವೇಶೋತ್ಸವದಲ್ಲಿ ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ ಬಸಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿದರು. ಕೆ.ಎಸ್.ರಮೇಶ್, ಎಚ್.ಬಿ.ರಾಜಗೋಪಾಲ್ ಇದ್ದರು
ಕೊಪ್ಪ ತಾಲ್ಲೂಕಿನ ಪ್ರಬೋಧಿನಿ ಗುರುಕುಲದಲ್ಲಿ ನಡೆದ ನೂತನ ಛಾತ್ರ ಪ್ರವೇಶೋತ್ಸವದಲ್ಲಿ ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ ಬಸಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿದರು. ಕೆ.ಎಸ್.ರಮೇಶ್, ಎಚ್.ಬಿ.ರಾಜಗೋಪಾಲ್ ಇದ್ದರು   

ಕೊಪ್ಪ: ‘ಗುರುಕುಲದಲ್ಲಿ ಸಂಸ್ಕಾರಯುತ ಶಿಕ್ಷಣ ಪಡೆಯಲು ಸಾಧ್ಯವಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ ಬಸಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಅದ್ದಡ ಗ್ರಾಮದಲ್ಲಿರುವ ಚಿತ್ರಕೂಟ ಪ್ರಬೋಧಿನಿ ಗುರುಕುಲದಲ್ಲಿ ಭಾನುವಾರ ಆಯೋಜಿಸಿದ್ದ ನೂತನ ಛಾತ್ರ ಪ್ರವೇಶೋತ್ಸವ ಅವರು ಆಶೀರ್ವಚನ ನೀಡಿದರು.

‘ಪ್ರತಿಷ್ಠಿತ ಶಾಲೆಗಳಲ್ಲಿ ಮಕ್ಕಳನ್ನು ಓದಿಸಲು ಆಸಕ್ತಿ ತೋರುವ ಪೋಷಕರು ತಮ್ಮ ಮಕ್ಕಳಿಗೆ ಎಂತಹ ಶಿಕ್ಷಣ ನೀಡಬೇಕು ಎಂಬ ಆಯ್ಕೆಯಲ್ಲಿ ಹಿಂದೆ ಬೀಳುತ್ತಿದ್ದಾರೆ. ಪೋಷಕರು ಮತ್ತು ಮಕ್ಕಳ ನಡುವೆ ಸಂಬಂಧಗಳು ಹದಗೆಡುತ್ತಿವೆ. ತಂದೆ, ತಾಯಿ ವೃದ್ಧಾಶ್ರಮಕ್ಕೆ ಕಳುಹಿಸುವಂತಹ ಘಟನೆಗಳು ಹೆಚ್ಚಾಗುತ್ತಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.

ADVERTISEMENT

ಇತರೆ ಶಿಕ್ಷಣ ವ್ಯವಸ್ಥೆಗೆ ಹೋಲಿಸಿದಾಗ ಗುರುಕುಲದಲ್ಲಿ ವ್ಯಕ್ತಿ ಬೆಳವಣಿಗೆಗೆ ಬೇಕಾದ, ಸಮಾಜಕ್ಕೆ ಪೂರಕ ಎಲ್ಲ ರೀತಿಯ ವಿದ್ಯೆಯನ್ನು ಕಲಿಸಲಾಗುತ್ತದೆ. ದೇಶದಲ್ಲಿ ಗುರುಕುಲದ ಮಾದರಿ ಶಿಕ್ಷಣ ವ್ಯವಸ್ಥೆ ಬೆಳವಣಿಗೆ ಕಾಣಬೇಕು’ ಎಂದು ಹೇಳಿದರು.

ದಕ್ಷಿಣ ಪ್ರಾಂತದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೃಷ್ಣ ಪ್ರಸಾದ್ ಮಾತನಾಡಿ, ‘ಗುರುಕುಲದಲ್ಲಿ ಮಕ್ಕಳು ಅಂತರಂಗದ ಶಿಸ್ತನ್ನು ಕಲಿಯುತ್ತಾರೆ. ವ್ಯಕ್ತಿಯು ಸಮಾಜಕ್ಕೆ ಉಪಯೋಗಿಯಾಗಿ ರೂಪುಗೊಳ್ಳಬೇಕು. ನಾನು ಎಂಬುದನ್ನು ಹೋಗಲಾಡಿಸಿ, ನಾವು ಎಂಬುದನ್ನು ಬೆಳಸಿಕೊಳ್ಳಬೇಕು. ಪುನೀತ್ ರಾಜ್‌ಕುಮಾರ್ ಅವರು ಕಲಾವಿದರಾಗಿ ರಾಜ್ಯದಲ್ಲಿ ಚಿರಪರಿಚಿತರಾಗಿದ್ದರೂ ಕೂಡ, ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಜನರು ಈಗ ಸ್ಮರಿಸುತ್ತಿದ್ದಾರೆ’ ಎಂದು ಹೇಳಿದರು.

ಚಿಕ್ಕಮಗಳೂರಿನ ಉದ್ಯಮಿ ಕೆ.ಎಸ್.ರಮೇಶ್ ಮಾತನಾಡಿ, ‘ವಿದ್ಯಾರ್ಥಿಗಳು ಜೀವನದ ಕಲೆಯನ್ನು ರೂಢಿಸಿಕೊಳ್ಳಬೇಕು. ಅದಕ್ಕಾಗಿ ಏಕಾಗ್ರತೆ, ದೃಢತೆ ಬೆಳಸಿಕೊಳ್ಳಬೇಕು. ಜನರ ಸೇವೆಯೇ ಜನಾರ್ದನ ಸೇವೆ ಎಂಬುದನ್ನು ಕಲಿಯಬೇಕು’ ಎಂದರು.

ಪ್ರಬೋಧಿನಿ ಟ್ರಸ್ಟ್ ನ ನಿರ್ವಾಹಕ ವಿಶ್ವಸ್ಥ ಎಚ್.ಬಿ.ರಾಜಗೋಪಾಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗುರುಕುಲದ ಶಿಕ್ಷಕ ಕಾರ್ತಿಕ್ ವಾಗ್ಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುಕುಲ ವ್ಯವಸ್ಥಾಪಕ ಉಮೇಶ್ ವಂದನಾರ್ಪಣೆ ಮಾಡಿದರು.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್.ಎನ್.ರಾಮಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.