ಚಿಕ್ಕಮಗಳೂರು: ಕ್ಷೌರಿಕ ವೃತ್ತಿಯ ದರಪಟ್ಟಿಯ ದುರ್ಬಳಕೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಕಡಿಮೆ ದರದ ಬಗ್ಗೆ ಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಶ್ರೀರಾಮ ಮಂದಿರ ಆರ್ಯನಯನಜ ಕ್ಷತ್ರಿಯ ಸಂಘ ಮತ್ತು ಜಿಲ್ಲಾ ಸವಿತಾ ಸಮಾಜದ ಮುಖಂಡರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಹಾಲಿಂಗಪ್ಪ ಮಾತನಾಡಿ, ‘ಅನಾದಿ ಕಾಲದಿಂದ ಕ್ಷೌರಿಕ ವೃತ್ತಿಯನ್ನು ಜೀವನದ ಭಾಗವಾಗಿ ಅಲಂಬಿಸಿಕೊಂಡಿದ್ದೇವೆ. ಈ ವೃತ್ತಿ ಹೊರತಾಗಿ ಬೇರೆ ಕೆಲಸ ತಿಳಿಯದ ಸಮಾಜ ನಮ್ಮದು. ಈಗ ಕೆಲವರು ತೊಂದರೆ ನೀಡುತ್ತಿದ್ದಾರೆ’ ಎಂದರು.
ಸವಿತಾ ಸಮಾಜದವರ ಒಳಿತಿಗಾಗಿ ವೃತ್ತಿಯ ದರ ಪಟ್ಟಿಯನ್ನು ತಯಾರಿಸಲಾಗಿದೆ. ಕ್ಷೌರಿಕ ವೃತ್ತಿ ಮಾಡುವವರು ಈ ನಿಯಮ ಪಾಲಿಸುತ್ತಿದ್ದಾರೆ. ಆದರೆ, ಇತ್ತೀಚೆಗೆ ಹೊರ ರಾಜ್ಯದಿಂದ ಕೆಲವರನ್ನು ಕರೆತಂದಿರುವ ಬಂಡವಾಳ ಶಾಹಿಗಳು, ಕಡಿಮೆ ದರ ನಿಗದಿ ಮಾಡಿ ಮೂಲ ವೃತ್ತಿಗೆ ತೊಂದರೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕ್ಷತ್ರಿಯ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಎಂ.ಯೋಗೇಶ್ ಮಾತನಾಡಿ, ‘ಕ್ಷೌರಿಕ ವೃತ್ತಿಯವರ ಅನ್ನ ಕಸಿದುಕೊಳ್ಳಲು ಕೆಲವರು ಹೊರಟಿದ್ದಾರೆ. ಕಡಿಮೆ ದರ ನಿಗದಿ ಮಾಡಿ ಪಟ್ಟಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿಸುವುದು ಸರಿಯಲ್ಲ. ಕೂಡಲೇ ಈ ಬಗ್ಗೆ ಜಿಲ್ಲಾಡಳಿತ ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.
ಸವಿತಾ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ವಿಶ್ವನಾಥ್ ಮಾತನಾಡಿ, ‘ನಾಯಿ ಕೊಡೆಗಳಂತೆ ತಲೆ ಎತ್ತುತ್ತಿರುವ ಹೊರ ರಾಜ್ಯದ ಕ್ಷೌರಿಕರು, ಸ್ಥಳೀಯ ಮೂಲ ವೃತ್ತಿಗೆ ಕುತ್ತು ತಂದಿದ್ದಾರೆ. ಸಮಾಜದ ದರವನ್ನು ಮನದಟ್ಟು ಮಾಡಿಕೊಳ್ಳದೆ ಮನಸ್ಸಿಗೆ ಬಂದಂತೆ ದರ ನಿಗದಿ ಮಾಡಿ ಪ್ರಚಾರ ಮಾಡುತ್ತಿದ್ದಾರೆ. ಇದರಿಂದಾಗಿ ಸವಿತಾ ಸಮಾಜದ ವೃತ್ತಿದಾರರು ಆತಂಕಕ್ಕೆ ಒಳಗಾಗಿದ್ದು, ಈ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕಿದೆ’ ಎಂದರು.
ಪ್ರತಿಭಟನೆಗೂ ಮುನ್ನ ಸವಿತಾ ಸಮಾಜದ ನೂರಾರು ಜನ ಅಂಗಡಿ ಮುಂಗಟ್ಟೆ ಬಂದ್ ಮಾಡಿ ತಾಲ್ಲೂಕು ಕಚೇರಿಯಿಂದ ಎಂ.ಜಿ.ರಸ್ತೆ ಮೂಲಕ ಆಜಾದ್ ಪಾರ್ಕ್ ವೃತ್ತದ ತನಕ ಮೆರವಣಿಗೆ ನಡೆಸಿದರು.
ಕ್ಷತ್ರಿಯ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಎಂ.ಶ್ರೀಧರ್, ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಡಿ.ಶೇಷಾದ್ರಿ, ಖಜಾಂಚಿ ಗಿರೀಶ್, ಸವಿತಾ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಜೆ.ಸತ್ಯನಾರಾಯಣ, ಸಮಾಜದ ಮುಖಂಡರಾದ ಎನ್.ಸತೀಶ್, ಡಿ.ವೆಂಕಟೇಶ್, ಬಾಲಕೃಷ್ಣಪ್ಪ, ಲಕ್ಷ್ಮಿಕಾಂತ್, ವಿ.ಬಿ.ನಾರಾಯಣ, ಧನರಾಜ್, ಚಂದ್ರಶೇಖರ್, ಬಸವರಾಜ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.