
ಬಾಳೆಹೊನ್ನೂರು: ರಾಜ್ಯದಲ್ಲೇ 7 ಸಾವಿರ ಆನೆಗಳು ಕಾಡಿನಲ್ಲಿವೆ. ಈ ಪೈಕಿ 300 ಆನೆಗಳಷ್ಟೇ ನಾಡಿನಲ್ಲಿ ದಾಂದಲೆ ನಡೆಸುತ್ತಿವೆ. ಕೊಡಗಿನಲ್ಲಿ 150ರಷ್ಟು ಆನೆಗಳು ಕಾಡಿನಿಂದ ನಾಡಿಗೆ ಬಂದಿವೆ. ಹೀಗಿರುವಾಗ ಅಷ್ಟು ಆನೆಗಳನ್ನು ಸ್ಥಳಾಂತರಿಸಿ ಪ್ರತ್ಯೇಕ ಸಾಕಾಣೆ ಕೇಂದ್ರ ತೆರೆಯಲು ಸರ್ಕಾರ ಮುಂದಾಗಬೇಕು ಎಂದು ಸಕಲೇಶಪುರದ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಆಗ್ರಹಿಸಿದರು.
ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಸಮಾರಂಭದ ಮೂರನೇ ದಿನದ ವಿಚಾರ ಗೋಷ್ಠಿಯಲ್ಲಿ ಮಾನವ-ವನ್ಯಜೀವಿ ಸಂಘರ್ಷ ಕುರಿತ ಮಾತನಾಡಿದ ಅವರು, ‘ಶ್ರೀಲಂಕಾದ ಕೊಲಂಬೋ ವ್ಯಾಪ್ತಿಯಲ್ಲಿ 200 ಕಾಡಾನೆಗಳಿಗಾಗಿ ಇಂತಹ ಆನೆ ಸಾಕಾಣೆ ಕೇಂದ್ರ ತೆರೆಯಲಾಗಿದೆ. ಈ ತಾಣವನ್ನು ಪ್ರವಾಸಿ ತಾಣವಾಗಿಸಿ ಸರ್ಕಾರಕ್ಕೆ ವರಮಾನ ತರಲಾಗುತ್ತಿದೆ. ಇದೇ ಮಾದರಿಯನ್ನಾಗಿ ತೆಗೆದುಕೊಂಡು ನದಿ ತೀರದಲ್ಲಿನ 400 ಎಕರೆ ಗುರುತಿಸಿ ಕಾಡಾನೆ ಪುನರ್ವಸತಿ ಕೇಂದ್ರ ರೂಪಿಸಬೇಕು’ ಎಂದು ಒತ್ತಾಯಿಸಿದರು.
ಕೇರಳ ವನ್ಯಜೀವಿ ಕಾರ್ಯಪಡೆಯ ಮುಖ್ಯಸ್ಥ ಪೌಲ್ ಮ್ಯಾಥ್ಯು ಮಾತನಾಡಿ, ‘ಮಲೆನಾಡು ಜಿಲ್ಲೆಗಳಲ್ಲಿ ಅರಣ್ಯ ಪ್ರಮಾಣ ಕ್ಷೀಣವಾಗಿಲ್ಲ. ಬದಲಿಗೆ, ವನ್ಯಜೀವಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕೇರಳ ಸರ್ಕಾರ ಅನೇಕ ಜಿಲ್ಲೆಗಳಲ್ಲಿ ಗಜಮುಕ್ತಿ ಯೋಜನೆ ಯಶಸ್ವಿಯಾಗಿದ್ದು, ಇದೇ ಮಾದರಿಯನ್ನು ರಾಜ್ಯದ ಮಲೆನಾಡು ಜಿಲ್ಲೆಗಳಿಗೂ ಅನುಷ್ಠಾನಗೊಳಿಸುವುದು ಸೂಕ್ತ’ ಎಂದರು.
ಮಂಗನಿಗೆ ಕಲ್ಲು ಹೊಡೆದರೂ ಅದು ಕಾನೂನಿನ ಅಡಿಯಲ್ಲಿ ಮಂಗನ ಬೇಟೆಗೆ ಸಮವಾಗಿದೆ. ಇಷ್ಟೊಂದು ಪ್ರಬಲ ಕಾನೂನು ಅರಣ್ಯ ಇಲಾಖೆಯ ನೆರವಿಗಿದೆ. ಹೀಗಾಗಿ ಪರಿಣಾಮಕಾರಿಯಾಗಿ ವನ್ಯಜೀವಿ ಹಾವಳಿ ತಡೆ ಕಷ್ಟವಾಗುತ್ತಿದೆ. ಸ್ವಯಂ ಚಾಲಿತ ಎಚ್ಚರಿಕೆ ಗಂಟೆ, ಸೋಲಾರ್ ಬೇಲಿಯ ಸಮರ್ಥ ನಿರ್ವಹಣೆ, ರೈಲು ಕಂಬಿಗಳು, ಪ್ರಬಲ ತಡೆಗೋಡೆ ಅಳವಡಿಕೆ ರೀತಿಯ ಯೋಜನೆ ಜಾರಿಯಲ್ಲಿದ್ದರೂ ಕಾಫಿ ತೋಟಗಳಿಗೆ ವನ್ಯಜೀವಿಗಳು ಬರುತ್ತಿವೆ. ತಮಿಳುನಾಡಿನಲ್ಲಿ ಎ.ಐ ಬಳಸಿ ವನ್ಯಜೀವಿ ಹಾವಳಿ ತಡೆ ಕೇಂದ್ರ ಆರಂಭಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಇಂತಹ ಕೇಂದ್ರಗಳ ಉಪಯುಕ್ತತೆ ಬಗ್ಗೆ ಸ್ಪಷ್ಟವಾಗಲಿದೆ ಎಂದು ಹೇಳಿದರು.
ವನ್ಯಜೀವಿ ಸಂಶೋಧಕ ಸುರೇಂದ್ರ ವರ್ಮಾ ಮಾತನಾಡಿ, ‘ಕಾಡಿನಿಂದ ನಾಡಿಗೆ ಬಂದ ಆನೆ ಸೇರಿ ವನ್ಯಜೀವಿಗಳು ಹಾವಳಿ ನಡೆಸುತ್ತಿವೆ. ತ್ಯಾಜ್ಯ ವಿಲೇವಾರಿ ಸಮರ್ಪಕತೆಯ ಕೊರತೆ ಬಹುಮುಖ್ಯ ಕಾರಣ. ಕಾಡಿನಲ್ಲಿ ಅಂದಾಜು 320 ವಿಧದ ಸಸ್ಯಗಳು ಜೀವಿಗಳಿಗೆ ಆಹಾರವಾಗಿದೆ. ನಾಡಿನಲ್ಲಿ ಇಷ್ಟೊಂದು ವೈವಿಧ್ಯಮಯ ಆಹಾರ ದೊರಕದಿದ್ದಾಗ ತ್ಯಾಜ್ಯವೇ ಕಾಡು ಜೀವಿಗಳಿಗೆ ತಿನಿಸಾಗಿ ಪರಿಣಮಿಸುತ್ತದೆ’ ಎಂದರು.
ಹಳ್ಳಿ, ನಗರ ಪ್ರದೇಶಗಳಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಕೋಳಿ ಮಾಂಸ ಸೇರಿದಂತೆ ವಿವಿಧ ಕಸಗಳು ಸರಿಯಾಗಿ ವಿಲೇವಾರಿಯಾಗುತ್ತಿಲ್ಲ. ಹೀಗಾಗಿ ಕಾಡಿನಿಂದ ನಾಡಿಗೆ ಬಂದ ವನ್ಯಜೀವಿಗಳಿಗೆ ಇಂತಹ ತ್ಯಾಜ್ಯ ಸುಲಭವಾಗಿ ಆಹಾರವಾಗುತ್ತಿದೆ. ಈ ಆಹಾರ ತಿಂದು ಮರಳಿ ಅರಣ್ಯಕ್ಕೆ ಹೋಗುವಲ್ಲಿ ಕಾಡು ಪ್ರಾಣಿಗಳು ನಿರಾಸಕ್ತಿ ತೋರುತ್ತಿವೆ ಎಂದು ಹೇಳಿದರು.
ನಾಡಿನಲ್ಲಿ ತ್ಯಾಜ್ಯ ತಿಂದು ಜೀವಿಸುವ ಇಲಿಗಳು ಹೆಬ್ಬಾವಿಗೆ ಆಹಾರವಾಗಿದ್ದರೆ, ನಾಯಿಗಳ ಬೇಟೆಗೆ ಚಿರತೆಗಳು ನಾಡಿಗೆ ನುಗ್ಗುತ್ತಿವೆ. ಕಾಡಾನೆಗಳು ಸಹ ತ್ಯಾಜ್ಯವನ್ನು ಆಹಾರ ಮಾಡಿಕೊಂಡಿರುವ ಉದಾಹರಣೆಗಳಿವೆ ಎಂದರು.
ಮಾವವ- ವನ್ಯಜೀವಿ ಸಂಘರ್ಷ ಎಂಬುಕ್ಕಿಂತ ವನ್ಯಜೀವಿಗಳಿಗೆ ಮಾನವನಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಗಮನ ನೀಡುತ್ತಿಲ್ಲ. ದೇಶದ 23 ರಾಜ್ಯಗಳಲ್ಲಿ ಸಮಸ್ಯೆ ಇದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಂದರ್ಭದಲ್ಲಿ ವನ್ಯಜೀವಿಗಳ ಜೀವನ ಕ್ರಮದ ಬಗ್ಗೆ ಸೂಕ್ತ ಮಾಹಿತಿ ತಿಳಿದುಕೊಂಡರೆ ಸಮಸ್ಯೆಯ ಮೂಲ ಅರಿವಾಗುತ್ತದೆ. ಆದರೆ, ಈವರೆಗೂ ಇಂತಹ ಪ್ರಯತ್ನ ಸರ್ಕಾರಗಳಿಂದ ನಡೆದಿಲ್ಲ ಎಂದು ವರ್ಮಾವಿಷಾದಿಸಿದರು.
ಕೊಡಗು ಜಿಲ್ಲೆ ಒಂದರಲ್ಲೇ ವಾರ್ಷಿಕ 1.40 ಲಕ್ಷ ಹಲಸಿನ ಫಸಲು ಬಿಡುತ್ತಿದ್ದು, ಈ ಪೈಕಿ ಬಹುತೇಕ ಹಲಸನ್ನು ಕಾಡಿನಂಚಿನಲ್ಲಿ ಬಿಸಾಡಲಾಗುತ್ತಿದೆ. ಹೀಗಾಗಿ ಹಲಸು ಅರಸಿ ನಾಡಿಗೆ ಆನೆಗಳು ಬರುತ್ತಿವೆ. ಒಮ್ಮೆ ನಾಡಿನಲ್ಲಿ ಸಿಕ್ಕುವ ಆಹಾರ ಅರಗಿಸಿಕೊಂಡು ಅದರ ರುಚಿ ಕಂಡುಕೊಳ್ಳುವ ವನ್ಯಜೀವಿಗಳು ಮರಳಿ ಅರಣ್ಯಕ್ಕೆ ತೆರಳಲು ಯೋಚಿಸುವುದಿಲ್ಲ ಎಂದರು.
ಮಡಿಕೇರಿಯ ಕಾಫಿ ಬೆಳೆಗಾರ ಮೋಹನ್ ದಾಸ್, ಸಕಲೇಶಪುರದ ತೆಂಕಲಗೂಡು ಮಠಾಧೀಶ ಚನ್ನಸಿದ್ದೇಶ್ವರ ಶಿವಾಚಾರ್ಯ, ಚಿಕ್ಕಮಗಳೂರು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ರತೀಶ್‌ಕುಮಾರ್, ಕಾಫಿ ಮಂಡಳಿ ಸದಸ್ಯ ತಳೂರು ಕಿಶೋರ್, ವಿಜಯ ಅಂಗಡಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.